ಜನರ ಹಿತ ಕಾಪಾಡುವುದು ಎಂದರೆ ಅದು ಸರ್ಕಾರದ ಹಿತ ಕಾಪಾಡಿದಂತೆ: ಸರ್ಕಾರಿ ವಕೀಲರಿಗೆ ಸಿಎಂ ಸಿದ್ದರಾಮಯ್ಯ ಪಾಠ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 26, 2023 | 5:15 PM

ಸರ್ಕಾರಿ ವಕೀಲರಿಗೆ ಸರ್ಕಾರದ ಕೇಸು ಎಂದರೆ ಅಸಡ್ಡೆ ಇರಬಾರದು. ಸರ್ಕಾರದ ಕೇಸುಗಳು ಎಂದರೆ ಜನರ ಕೇಸುಗಳು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುವ ಸಂವಿಧಾನದ ಮೌಲ್ಯ. ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಸರ್ಕಾರಿ ವಕೀಲರಿಗೆ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದ್ದಾರೆ.

ಜನರ ಹಿತ ಕಾಪಾಡುವುದು ಎಂದರೆ ಅದು ಸರ್ಕಾರದ ಹಿತ ಕಾಪಾಡಿದಂತೆ: ಸರ್ಕಾರಿ ವಕೀಲರಿಗೆ ಸಿಎಂ ಸಿದ್ದರಾಮಯ್ಯ ಪಾಠ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಆಗಸ್ಟ್​ 26: ಜನರ ಹಿತ ಕಾಪಾಡುವುದು ಎಂದರೆ ಅದು ಸರ್ಕಾರದ ಹಿತ ಕಾಪಾಡಿದಂತೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುವ ಸಂವಿಧಾನದ ಮೌಲ್ಯ. ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಸರ್ಕಾರಿ ವಕೀಲರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಪಾಠ ಮಾಡಿದ್ದಾರೆ. ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣಾ ಅಧಿನಿಯಮ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ವಕೀಲರಿಗೆ ಸರ್ಕಾರದ ಕೇಸು ಎಂದರೆ ಅಸಡ್ಡೆ ಇರಬಾರದು. ಸರ್ಕಾರದ ಕೇಸುಗಳು ಎಂದರೆ ಜನರ ಕೇಸುಗಳು. ಜನರಿಗೆ ನ್ಯಾಯ ಸಿಗುವ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎಂದು ಹೇಳಿದ್ದಾರೆ.

ಸರ್ಕಾರಿ ವಕೀಲರು ಜವಾಬ್ದಾರಿಯುತವಾಗಿ ವರ್ತಿಸಬೇಕು  

ಬಡವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗುವ ಶಕ್ತಿ ಇರುವುದಿಲ್ಲ. ಬಡವರಿಗೆ ನ್ಯಾಯ ಸಿಗದಿದ್ದರೆ ಸರಕಾರಿ ವಕೀಲರನ್ನು ನೇಮಿಸಿಕೊಂಡಿದ್ದು ಸಾರ್ಥಕ ಆಗುವುದಿಲ್ಲ. ಪ್ಲೀಡಿಂಗ್ಸ್ ಸರಿಯಾಗಿ, ಪರಿಣಾಮಕಾರಿಯಾಗಿ ಬರೆಯುವುದು ಬಹಳ ಮುಖ್ಯ. ಈ ಹಂತದಲ್ಲೇ ಅಸಡ್ಡೆ, ಉಡಾಫೆತನ ಪ್ರದರ್ಶಿಸಿದರೆ ನ್ಯಾಯ ಪ್ರಕ್ರಿಯೆಯ ಮುಂದಿನ ಎಲ್ಲಾ ಹಂತಗಳಲ್ಲಿ ವೈಫಲ್ಯ ಆಗುತ್ತದೆ. ಆದ್ದರಿಂದ ಬಹಳ ಜವಾಬ್ದಾರಿಯುತವಾಗಿ ಸರ್ಕಾರಿ ವಕೀಲರು ವರ್ತಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ನನಗೆ ಬಿಜೆಪಿ ಹೈಕಮಾಂಡ್​​ನಿಂದ ಯಾವುದೇ ಕರೆ ಬಂದಿಲ್ಲ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ

ಸರ್ಕಾರಿ ವಕೀಲರು ಮತ್ತು ಅಧಿಕಾರಿಗಳ ವೈಫಲ್ಯಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ವ್ಯಾಜ್ಯ ಸಣ್ಣದಿರಲಿ, ದೊಡ್ಡದಿರಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಹೋಂ ವರ್ಕ್ ಮಾಡಿ. ನಮಗೆ ಹಣ ಕೊಡುವುದು ಜನರು. ಜನರ ಹಣದಲ್ಲಿ ನಮಗೆ ಸವಲತ್ತುಗಳು ಸಿಗುತ್ತಿವೆ. ಈ ಬಗ್ಗೆ ನಮಗೆ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಹಾಗೂ ಧನ್ಯತೆ ಇರಬೇಕು.

ಇದನ್ನೂ ಓದಿ: ಇನ್ನೊಂದು ವಾರ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದ ಹೆಚ್​ಡಿ ಕುಮಾರಸ್ವಾಮಿ; ಕಾರಣ ಇಲ್ಲಿದೆ

ಕೆಲವು ನ್ಯಾಯಾಧೀಶರು ಮುಖ ನೋಡಿ ಮಣೆ ಹಾಕುತ್ತಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಇದನ್ನು ಎಲ್ಲರೂ ಒಟ್ಟಾಗಿ ಅಳಿಸಬೇಕು. ಪ್ರಕರಣಗಳಲ್ಲಿ ಅನಗತ್ಯವಾಗಿ ದಿನಾಂಕ ಪಡೆಯಬಾರದು. ಕೇಸು ನಡೆಸಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದನ್ನು ಪರಿಣಾಮಕಾರಿಯಾಗಿ ವಿರೋಧಿಸಬೇಕು. ಅಲ್ಲೇ ನಿಮ್ಮಗಳ ಅರ್ಹತೆ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ತಿಳಿ ಹೇಳಿದ್ದಾರೆ.

ನ್ಯಾಯಾಂಗ ನಿಂದನೆ ಆಗದಂತೆ ವೃತ್ತಿಪರತೆ ಪ್ರದರ್ಶಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸರ್ಕಾರವೇ ನಿಮ್ಮ ಕಕ್ಷಿದಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಸರ್ಕಾರ ಮತ್ತು ಜನರ ಹಿತ ಕಾಪಾಡುವ ಮತ್ತು ಸರ್ಕಾರದ ಆಸ್ತಿ ಉಳಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದು ಸರ್ಕಾರಿ ವಕೀಲರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.