ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ

|

Updated on: Mar 15, 2021 | 12:23 PM

ಕೇಂದ್ರ ಸರ್ಕಾರ ಬ್ಯಾಂಕ್ ಖಾಸಗೀಕರಣದ ತೀರ್ಮಾನ ನಿಲ್ಲಿಸಬೇಕೆಂದು ಆಗ್ರಹಿಸಿ ಎರಡು ದಿನದ ಮುಷ್ಕರಕ್ಕೆ ಬ್ಯಾಂಕ್‌ ಯೂನಿಯನ್​ಗಳ ಸಂಯುಕ್ತ ವೇದಿಕೆ ಕರೆಕೊಟ್ಟಿದ್ದು, ಬೆಂಗಳೂರು, ಧಾರವಾಡ, ಹಾಸನ ಮತ್ತು ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ
ಹಾಸನದಲ್ಲಿ ಬ್ಯಾಂಕ್​ ನೌಕರರ ಪ್ರತಿಭಟನೆ
Follow us on

ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿ ಬಜೆಟ್​ನಲ್ಲಿ 2 ಬ್ಯಾಂಕ್ ಖಾಸಗೀಕರಣ ಮಾಡುವುದಾಗಿ ಹೇಳಿತ್ತು. ಬಳಿಕ 4 ಬ್ಯಾಂಕ್​ಗಳನ್ನು ಖಾಸಗೀಕರಣಕ್ಕೆ ಒಳಪಡಿಸಲು ಕೇಂದ್ರ ಯತ್ನಿಸಿದೆ. ಇದರಿಂದ ಸಾರ್ವಜನಿಕರ ಹಣ ಖಾಸಗಿಯವರ ಕೈ ಸೇರಲಿದೆ. ಜನರ ಹಣಕ್ಕೆ (ಠೇವಣಿಗೆ) ಯಾವುದೇ ಭದ್ರತೆ ಇರುವುದಿಲ್ಲ. ಈಗಾಗಲೇ ಹಲವು ಖಾಸಗಿ ಬ್ಯಾಂಕ್​ಗಳು ಅಕ್ರಮ ಎಸಗಿವೆ ಎಂದು ಬ್ಯಾಂಕ್‌ ಯೂನಿಯನ್​ಗಳ ಸಂಯುಕ್ತ ವೇದಿಕೆ ಆರೋಪಿಸಿದೆ.

ಈ ನಿಟ್ಟಿನಲ್ಲಿ ಬ್ಯಾಂಕ್ ಖಾಸಗೀಕರಣದಿಂದ ವಿದೇಶಿ ಬಂಡವಾಳದಾರರು ಹಾಗೂ ಉದ್ಯಮಪತಿಗಳ ಕೈಗೆ ಬ್ಯಾಂಕ್ ಹೋಗಲಿದೆ. ಇದು ದೇಶದ ಭವಿಷ್ಯದ ಆರ್ಥಿಕತೆಗೆ ಮುಳುವಾಗಲಿದೆ. ದೇಶದ ಆರ್ಥಿಕತೆ ಖಾಸಗಿ ಕ್ಷೇತ್ರದ ಹಿಡಿತಕ್ಕೆ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್ ಖಾಸಗೀಕರಣದ ತೀರ್ಮಾನ ನಿಲ್ಲಿಸಬೇಕೆಂದು ಆಗ್ರಹಿಸಿ ಎರಡು ದಿನದ ಮುಷ್ಕರಕ್ಕೆ ಬ್ಯಾಂಕ್‌ ಯೂನಿಯನ್​ಗಳ ಸಂಯುಕ್ತ ವೇದಿಕೆ ಕರೆಕೊಟ್ಟಿದೆ.

ಮೈಸೂರಿನಲ್ಲಿ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ:
ಮೈಸೂರಿನಲ್ಲೂ ಇಂದು ಮತ್ತು ನಾಳೆ ಬ್ಯಾಂಕ್‌ ನೌಕರರಿಂದ ಪ್ರತಿಭಟನೆ ನಡೆಯಲಿದ್ದು, ಬ್ಯಾಂಕ್‌ಗಳ ಖಾಸಗೀಕರಣಗೊಳಿಸುವ ತೀರ್ಮಾನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ 2 ದಿನಗಳ ಕಾಲ ಮುಷ್ಕರ ನಡೆಯಲಿದೆ. ಮೈಸೂರಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಎಸ್‌ಬಿಐ ನೇತೃತ್ವದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್‌ನಿಂದ ಮೈಸೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ವಲಯ ಕಛೇರಿ, ಟಿ ಕೆ ಬಡಾವಣೆಯ ಕೆನರಾ ಬ್ಯಾಂಕ್ ವಲಯ ಕಚೇರಿಯಲ್ಲಿ ಹಾಗೂ ನಜರ್​ಬಾದ್​ನ ವಲಯ ಕಚೇರಿಯ ಬಳಿ ಮುಷ್ಕರ ನಡೆಯುತ್ತಿದೆ.

ಹಾಸನದಲ್ಲಿ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ:
ಸಾರ್ವಜನಿಕ ವಲಯದ ಬ್ಯಾಂಕ್​ಗಳ ಖಾಸಗೀಕರಣ ವಿರೋದಿಸಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಹಾಸನದಲ್ಲೂ ಬ್ಯಾಂಕ್ ಬಂದ್ ಮಾಡಿ ನೌಕರರು ಹೋರಾಟಕ್ಕಿಳಿದಿದ್ದಾರೆ.ಹಾಸನದ ಎಸ್​ಬಿಐ ಮುಖ್ಯಶಾಖೆ ಎದುರು ಬ್ಯಾಂಕ್​ಗಳ ಖಾಸಗೀಕರಣದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು,ಕೇಂದ್ರ ಸರ್ಕಾರ ಖಾಸಗೀಕರಣ ನೀತಿ ಕೈ ಬಿಡಲು ಒತ್ತಾಯ ಮಾಡಿದ್ದಾರೆ.

ಧಾರವಾಡದಲ್ಲಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಪ್ರತಿಭಟನೆ:
ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ 2 ದಿನ ಮುಷ್ಕರ ನಡೆಯುತ್ತಿದ್ದು, ಧಾರವಾಡದ ಕಾಲೇಜು ರಸ್ತೆಯ ಎಸ್​ಬಿಐ ಕಚೇರಿ ಬಳಿ ಧರಣಿ ನಡೆಯುತ್ತಿದೆ. ಕೆಲಸ ಬಹಿಷ್ಕರಿಸಿ ನೂರಾರು ಬ್ಯಾಂಕ್ ಸಿಬ್ಬಂದಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಇದನ್ನೂ ಓದಿ: Bank Strike: ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಇಂದಿನಿಂದ 2 ದಿನ ಮುಷ್ಕರ