ಉತ್ತರ ಕನ್ನಡ, ಜ.31: ಕಾಸರಕೋಡು ಮೀನುಗಾರರ ಬಂದರು ಬಳಿ ಭಾರೀ ಹೈಡ್ರಾಮಾ ನಡೆದಿದ್ದು, ಮನೆ ಕಳೆದುಕೊಳ್ಳುವ ಭೀತಿಯಲ್ಲಿ ಜಿಲ್ಲೆಯ ಹೊನ್ನಾವರ(Honnavar) ತಾಲೂಕಿನ ಕಾಸರಕೋಡು ಬಳಿ ಚತುಷ್ಪಥ ರಸ್ತೆ ನಿರ್ಮಾಣ ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಭೇಟಿ ನೀಡಿದ್ರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪ್ರತಿಭಟನೆ ಹತ್ತಿಕ್ಕಲು 200ಕ್ಕೂ ಹೆಚ್ಚು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಈ ವೇಳೆ ಮಹಿಳೆಯರು ಹಾಗೂ ಪುರುಷರಿಗೆ ಸೇರಿದಂತೆ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಹೊನ್ನಾವರ ಸಮೀಪ ನಿರ್ಮಾಣ ಆಗುತ್ತಿರುವ ಹೊಸ ಬಂದರಿಗೆ ಹೋಗಲು 4 ಲೈನ್ ರಸ್ತೆ ನಿರ್ಮಾಣಕ್ಕೆ ಸರ್ವೆ ಕಾರ್ಯ ಆರಂಭಿಸಲಾಗಿದೆ. ಇದರಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‘ಒಂದು ವೇಳೆ ಮನೆಗಳಿಗೆ ಬೇರೆಡೆ ಜಾಗ ನೀಡಿದರೆ,ನಮ್ಮ ಮೀನುಗಾರಿಕೆಗೆ ಸಮಸ್ಯೆ ಆಗುತ್ತದೆ. ಈ ಹಿನ್ನಲೆ ಮನೆ ಇರುವ ಕಡೆ ರಸ್ತೆ ನಿರ್ಮಿಸದಂತೆ ಮೀನುಗಾರರು ಒತ್ತಾಯಿಸಿದ್ದಾರೆ. ಈ ಘಟನೆ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಅರಬ್ಬಿ ಸಮುದ್ರದಲ್ಲಿ ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ ರಕ್ಷಣೆ: 7 ಮೀನುಗಾರರು ಸುರಕ್ಷಿತ
ಇನ್ನು ಘಟನೆಗೆ ಸಂಬಂಧಿಸಿದಂತೆ 25 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಅನೇಕರು ಮೀನುಗಾರಿಕೆ ನಡೆಸಲು ತೆರಳಿರುವಾಗ ಈ ಘಟನೆ ನಡೆದಿದೆ. ಸದ್ಯ ಈ ವಿಷಯ ಸಮುದ್ರಕ್ಕೆ ಹೊಗಿರುವ ಮೀನುಗಾರರಿಗೆ ಗೊತ್ತಿರುವ ಹಿನ್ನೆಲೆ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾವಣೆ ಆಗುವ ಸಾಧ್ಯತೆಯಿದೆ. ಇದರಿಂದ ಸ್ಥಳದಲ್ಲಿ ಭಾರಿ ಪೊಲೀಸ್ ಬಿಗಿ ಭದ್ರತೆ ಅಳವಡಿಸಲಾಗಿದೆ.
ಈ ಕುರಿತು ಮಾತನಾಡಿದ ಅಧಿಕಾರಿಗಳು ‘ಮುಂದಿನ ನಾಲ್ಕು ದಿನಗಳಲ್ಲಿ ಸರ್ವೇ ಕಾರ್ಯ ಮುಗಿಸುತ್ತೆವೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಬೇಕಿದೆ ಎಂದರು. ಸ್ಥಳಕ್ಕೆ ಭಟ್ಕಳ್ ಎಸಿ ಡಾ ನಯನಾ ಹಾಗೂ ತಹಶೀಲ್ದಾರ್ ಭೇಟಿ ನಿಡಿ ಎಷ್ಟೆ ಹೇಳಿದರೂ ಕೇಳದ ಮೀನುಗಾರರು, ನಾವು ಈ ಜಾಗ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಎಎಸ್‌ಪಿ ಜಯ ಕುಮಾರ, ಡಿವೈ ಎಸ್ ಪಿ, ಸಿಪಿಐ ಸೇರಿದಂತೆ 200 ಕ್ಕೂ ಹೆಚ್ಚು ಪೊಲೀಸರನ್ನು ಇದೀಗ ನಿಯೋಜನೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Wed, 31 January 24