ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವಧಿ ಮತ್ತೆ ವಿಸ್ತರಣೆ
ಶಾಶ್ವತ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಣೆ ಮಾಡಿದೆ. ಒಂದು ತಿಂಗಳ ಕಾಲ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಸಿದೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಸ್ವೀಕರಿಸುವುದು ಸ್ಪಷ್ಟವಾಗಿದೆ.
ಬೆಂಗಳೂರು, (ಜನವರಿ 31): ಜಯಪ್ರಕಾಶ್ ಹೆಗಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ (Backward Classes commission chairman) ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಣೆ ಮಾಡಿದೆ. ಒಂದು ತಿಂಗಳ ಕಾಲ ಅಂದರೆ ಫೆಬ್ರವರಿ 29ರ ವರೆಗೆ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash hegde) ಅವರ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸಿದ್ದರಾಮಯ್ಯನವರ ಸರ್ಕಾರ ಕಾತರಾಜ್ ಅವರ ಜಾತಿ ಗಣತಿ ವರದಿ(Caste Census Report) ಸ್ವೀಕರಿಸುವುದು ಖಚಿತವಾದಂತಾಗಿದ್ದು, ಮೂಲಗಳ ಪ್ರಕಾರ ಇನ್ನು 15 ದಿನದಲ್ಲಿ ಜಾತಿ ಗಣತಿ ವರದಿಯು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಂದಿದೆ.
ಕಳೆದ 2023ರ ನವೆಂಬರ್‌ನಲ್ಲಿ ಅವಧಿ ಮುಕ್ತಾಯವಾಗುವ ಸಂದರ್ಭದಲ್ಲಿ ಎರಡು ತಿಂಗಳವರೆಗೆ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರನ್ವಯ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಐವರು ಸದಸ್ಯರ ಅಧಿಕಾರವನ್ನು 2024ರ ಜನವರಿ 31ರವರೆಗೆ ಮುಂದುವರಿಸಲಾಗಿತ್ತು. ಈಗ ಜನವರಿ 31ಕ್ಕೆ ಅವಧಿ ಮುಕ್ತಾಯವಾಗುತ್ತಲಿತ್ತು. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಜಾತಿ ಗಣತಿ ವರದಿಯನ್ನು ಅಂತಿಮಗೊಳಿಸುವ ಸಂಬಂಧ ಫೆ. 15ರವರೆಗೆ ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗವು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಶ್ವತ ಹಿಂದುಳಿದ ವರ್ಗದ ಆಯೋಗ ಅಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಿದ್ದೇವೆ. ಇವತ್ತು ಸಹಿ ಮಾಡಿ ಕಳಿಸಿದ್ದೇವೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಫೆಬ್ರವರಿ 29ರ ತನಕ ಅವಧಿ ವಿಸ್ತರಣೆ ಸಂಬಂಧ ಮನವಿ ಮಾಡಿದ್ದರು. ಹೀಗಾಗಿ ಕ್ರಮ ಕೈಗೊಂಡಿದ್ದೇವೆ. ಆಯೋಗದ ಅಧ್ಯಕ್ಷರು ಸಮಯ ಕೇಳಿದ ಮೇಲೆ ಕೊಡಬೇಕಲ್ಲವೇ? ಎಂದಿದ್ದಾರೆ.
ಏಕೆ ಅವಧಿ ವಿಸ್ತರಣೆ?
ಹಿಂದುಳಿದ ವರ್ಗದ ಆಯೋಗವು ಕಾಂತರಾಜ್ ಅವರ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಈ ಹಿಂದೆಯೇ ತೀರ್ಮಾನಿಸಿತ್ತು. ಆದ್ರೆ, ಕೆಲ ಕಡತಗಳು ಕಾಣೆಯಾಗಿವೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ಆಯೋಗವು ಮೂಲ ದಾಖಲೆಗಳ ಮೂಲಕ ಹೊಸ ಕಡತಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿದೆ. ಹೀಗಾಗಿ ಕೆಲ ದಿನಗಳ ಕಾಲ ಸಮಯ ಕೇಳಿದೆ. ಇದರ ಮಧ್ಯೆ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅವಧಿ ಇಂದಿಗೆ ಮುಕ್ತಾಯವಾಗಲಿತ್ತು. ಹೀಗಾಗಿ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಸ್ವೀಕರಿಸಲು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿ ಮತ್ತೆ ವಿಸ್ತರಣೆ ಮಾಡಲಾಗಿದೆ.
ಅಪಸ್ವರ ಮಧ್ಯೆಯೇ ವರದಿ ಸ್ವೀಕರಿಸಲು ಸಿಎಂ ನಿರ್ಧಾರ
ಜಾತಿ ಗಣತಿ ವರದಿ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳಿ ಬರುತ್ತಲೇ ಇದೆ. ಪ್ರಮುಖವಾಗಿ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗರು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸರ್ಕಾರದಲ್ಲಿಯೂ ಸಹ ಈ ಎರಡು ಸಮುದಾಯದ ಸಚಿವರು ವರದಿ ಸ್ವೀಕರಿಸುವುದು ಬೇಡ ಎಂದೇ ಹೇಳುತ್ತಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಇದಕ್ಕೆ ಹಾಕಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ವರದಿಯನ್ನು ಸ್ವೀಕಾರ ಮಾಡಿಯೇ ಸಿದ್ಧ ಎಂದು ಹೇಳಿಕೊಂಡು ಬಂದಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಲೋಕಸಭಾ ಚುನಾವಣೆಗೆ ಮುನ್ನವೇ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಸಿಎಂ ವರದಿ ಬಿಡುಗಡೆಗೆ ಉತ್ಸಾಹ ತೋರಿದ್ದಾರೆ.
ಮೊನ್ನೇ ಅಷ್ಟೇ ಚಿತ್ರದುರ್ಗದಲ್ಲಿ ಶೋಶಿತ ಸಮುದಾಯಗಳು ಬೃಹತ್ ಸಮಾವೇಶ ಮಾಡಿದ್ದು ಕಾಂತರಾಜ್ ಜಾತಿ ಗಣತಿ ವರದಿ ಸ್ವೀಕಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ಸ್ಪಂದಿಸಿ ಜಾತಿ ಗಣತಿ ವರದಿ ಸ್ವೀಕಾರ ಮಾಡೇ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.
Published On - 7:07 pm, Wed, 31 January 24