ಬೆಂಗಳೂರು, ಮಾರ್ಚ್ 21: ನಗರ್ತಪೇಟೆಯಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪ ಹಿನ್ನಲೆ ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಮತ್ತು ಶಾಸಕ ರಾಮಮೂರ್ತಿ ಸೇರಿ 44 ಜನರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಹಲಸೂರು ಗೇಟ್ ಠಾಣೆ ಪಿಐ ಹನುಮಂತ ಭಜಂತ್ರಿ ದೂರು ಆಧರಿಸಿ ಐಪಿಸಿ ಸೆಕ್ಷನ್ 143, 149, 188, 283, 290, 268ರಡಿ ಎಫ್ಐಆರ್ ದಾಖಲಿಸಲಾಗಿದೆ. ಹೈಕೋರ್ಟ್ ಆದೇಶದಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವಂತಿಲ್ಲ. ಆದರೂ ಸಹ ಮುಖೇಶ್ ಹಲ್ಲೆ ಸಂಬಂಧ ಪ್ರತಿಭಟನೆ ಮಾಡಲಾಗಿತ್ತು.
ಬೆಂಗಳೂರಿನ ನಗರ್ತ ಪೇಟೆಯಲ್ಲಿ ಮೊಬೈಲ್ ಶಾಪ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ ರಾಜಕೀಯ ಸ್ವರೂಪಕ್ಕೆ ತಿರುಗಿದೆ. ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ ನಡೆಸಿದ್ದರು. ಬಳಿಕ ನಗರ್ತ ಪೇಟೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಭೇಟಿ ನೀಡಿದ್ದು ಈ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿತ್ತು.
ಇದನ್ನೂ ಓದಿ: ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ ಪ್ರಕರಣ: ಹಿಂದೂ ಕಾರ್ಯಕರ್ತರಿಂದ ರ್‍ಯಾಲಿ, ನಗರತ್ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ
ಹಲ್ಲೆ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ನಿನ್ನೆ ನಗರ್ತಪೇಟೆಯಲ್ಲಿ ಹನುಮಾನ್ ಚಾಲಿಸ್ ರ‍್ಯಾಲಿಗೆ ಕರೆ ನೀಡಿದ್ದರು. ಅಂಗಡಿಗಳನ್ನ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಹಲ್ಲೆಗೊಳಗಾದ ಮುಖೇಶ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ.
ಇದನ್ನೂ ಓದಿ: ಶೋಭಾಗೆ ಸಂಕಷ್ಟ: ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ತಮಿಳಿಗರೆಂಬ ಹೇಳಿಕೆ ವಿರುದ್ಧ ಡಿಎಂಕೆ ದೂರು
ಚುನಾವಣೆ ನೀತಿ ಸಂಹಿತೆಯಿಂದಾಗಿ, ಪ್ರತಿಭಟನೆಗೆ ಅವಕಾಶ ಇಲ್ಲ. ಹೀಗಾಗಿ ಮುಖೇಶ್ ಸೇರಿದಂತೆ ಕೆಲವರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾದ್ದರು. ಇದೇ ವೇಳೆ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಹ ಆಗಮಿಸಿದ್ರು. ಈ ವೇಳೆ ಸೇರಿದ ಜನರ ಘೋಷಣೆ, ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗಿತ್ತು. ಈ ವೇಳೆ ಕಾಂಗ್ರೆಸ್ ವಿರುದ್ಧ ಗುಡುಗುತ್ತಾ ಯಾರೋ ತಮಿಳುನಾಡಿನಿಂದ ಬರ್ತಾರೆ ನಮ್ಮ ಕೆಫೆಯಲ್ಲಿ ಬಾಂಬ್ ಇಡ್ತಾರೆ ಅಂತ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಇದೇ ಮಾತು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.
ಶೋಭಾ ಕರಂದ್ಲಾಜೆ ಅಂಡ್ ಟೀಂ ಅನ್ನ ಪೊಲೀಸರು ವಶಕ್ಕೆ ಪಡೀತಿದ್ದಂತೆ, ಸಂಸದ ತೇಜಸ್ವಿ ಸೂರ್ಯ ಸಹ ಸ್ಥಳಕ್ಕೆ ಆಗಮಿಸಿದ್ರು. ಆಗಲೂ ಹೈಡ್ರಾಮಾ ನಡೀದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:13 pm, Thu, 21 March 24