
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದ ಚಾಮರಾಜನಗರ (Chamrajnagar) ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ಪುಟ್ಟರಂಗಶೆಟ್ಟಿ (Puttaranga Shetty) ಅವರಿಗೆ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ಒಲಿದಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಆರಿಸಿ ಬಂದಿರುವ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ಉಪ್ಪಾರ ಸಮುದಾಯಕ್ಕೆ ಸೇರಿದವರು. ಹೀಗಾಗಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದೇ ಎಣಿಸಲಾಗಿತ್ತು. ಆದರೆ ಕಡೇಗಳಿಗೆಯಲ್ಲಿ ತಪ್ಪಿದೆ. ಹೀಗಾಗಿ ಪುಟ್ಟರಂಗ ಶೆಟ್ಟಿ ಅವರನ್ನು ಉಪಸ್ಪೀಕರ್ ಮಾಡಲು ಪಕ್ಷ ನಿರ್ಧರಿಸಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳುವುದು ಒಂದೇ ಬಾಕಿ ಇದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಪುಟ್ಟರಂಗಶೆಟ್ಟಿ ಮಣಿಸಿದ್ದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸರ್ಕಾರದ ನೂತನ ಸಚಿವರ ಪಟ್ಟಿ ಇಲ್ಲಿದೆ
ಚಾಮರಾಜನಗರದಲ್ಲಿ ನಿರಂತರ 4 ಬಾರಿ ಶಾಸಕನಾದ ಮೊದಲಿಗರಾದ ಸಿ.ಪುಟ್ಟರಂಗಶೆಟ್ಟಿ ತಾವು ಸೋಲಿಲ್ಲದ ಸರದಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಸುಮಾರು ಹತ್ತೊಂಬತ್ತು ಹಂತದಲ್ಲಿ ನಡೆದ ಮತ ಎಣಿಕೆಯಲ್ಲಿ 7,383 ಮತ ಅಂತರದಲ್ಲಿ ಸಿ.ಪುಟ್ಟರಂಗಶೆಟ್ಟಿಗೆ ಜಯ ಸಾಧಿಸಿದ್ದು, ಸಿ.ಪುಟ್ಟರಂಗಶೆಟ್ಟಿ 83,136 ಮತಗಳನ್ನು ಪಡೆದಿದ್ದರೆ, ವಿ.ಸೋಮಣ್ಣ 75,753 ಮತಗಳನ್ನು ಪಡೆದಿದ್ದಾರೆ.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ