Karnataka Cabinet expansion: 24 ಶಾಸಕರಿಗೆ ಒಲಿದ ಮಂತ್ರಿಗಿರಿ ಭಾಗ್ಯ, ಇಂದು ರಾಜಭವನದಲ್ಲಿ ಪ್ರಮಾಣವಚನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಇಂದು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬೆಂಗಳೂರು: ಕಳೆದ ಎರಡು ದಿನಗಳ ಕಾಲ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದೆ. ಈ 24 ಮಂದಿ ಇಂದು (ಮೇ.27) ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮ೦ತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ಒಳಗೊಂಡ ಹಾಲಿ ಅಸ್ತಿತ್ವವಿರುವ 10 ಮಂದಿಯ ಸಚಿವ ಸಂಪುಟಕ್ಕೆ ಶನಿವಾರ 24 ಮಂದಿ ಸೇರ್ಪಡೆಯಾದರೆ ಪರಿಪೂರ್ಣ ಸಂಪುಟ ರಚನೆಯಾದಂತೆ ಆಗುತ್ತದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಸಚಿವ ಸ್ಥಾನಗಳನ್ನು ಖಾಲಿ ಉಳಿಸಿ ಕೊಳ್ಳುವ ಸಂಪ್ರದಾಯಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳ ತೀವ್ರ ಒತ್ತಡದ ಕಾರಣಕ್ಕೆ ತಿಲಾಂಜಲಿ ನೀಡಲಾಗಿದೆ.
ಜಾತಿ, ಪ್ರದೇಶ, ಹಿರಿತನ ಒಳಗೊಂಡು ನಾನಾ ಮಾನದಂಡಗಳಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪಟ್ಟಿ ಹಿಡಿದುಕೊಂಡು ಬುಧವಾರ ಸಂಜೆ ದೆಹಲಿಗೆ ಹಾರಿದ್ದರು. ಇನ್ನು ದೆಹಲಿಗೆ ಬಂದಿದ್ದ ನಾಯಕರೊಂದಿಗೆ ಕೆ.ಸಿ.ವೇಣುಗೋಪಾಲ್ ತಡರಾತ್ರಿ ಒಂದು ಸುತ್ತಿನ ಸಭೆ ನಡೆಸಿದ್ದರು. ಗುರುವಾರ ಮತ್ತೆ ವೇಣುಗೋಪಾಲ್ ನಿವಾಸದಲ್ಲಿ 2ನೇ ಸುತ್ತಿನ ಸಭೆ ನಡೆಯಿತು.
ಇದನ್ನೂ ಓದಿ: ರಾಜಭವನದ ಸುತ್ತಮುತ್ತ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆ ಹೀಗಿದೆ
ಈ ಬಳಿಕ ನಿನ್ನೆ ಮೇ. 27 ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಚರ್ಚೆ ಬಳಿಕ 24 ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಇನ್ನು ಸಚಿವರ ಯಾದಿ ಕಸರತ್ತು ಪೂರ್ಣಗೊಂಡ ಬಳಿಕ ರಾಜ್ಯಪಾಲರ ಲಭ್ಯತೆಯ ಬಗ್ಗೆ ಸರಕಾರ ಮಾಹಿತಿ ಕೇಳಿ ಪಡೆದುಕೊಂಡಿದೆ. ಭಾನುವಾರ ನೂತನ ಪಾರ್ಲಿಮೆಂಟ್ ಕಟ್ಟಡ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಶನಿವಾರ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದಾರೆ.
ನೂತನ ಸಚಿವರ ಪಟ್ಟಿ
- ಹೆಚ್.ಕೆ.ಪಾಟೀಲ್
- ಕೃಷ್ಣಭೈರೇಗೌಡ
- ಚಲುವರಾಯಸ್ವಾಮಿ
- ಪಿರಿಯಾಪಟ್ಟಣ ವೆಂಕಟೇಶ್
- ಡಾ.ಹೆಚ್.ಸಿ.ಮಹದೇವಪ್ಪ
- ಈಶ್ವರ ಖಂಡ್ರೆ
- ಕೆ.ಎನ್.ರಾಜಣ್ಣ
- ದಿನೇಶ್ ಗುಂಡೂರಾವ್
- ಶರಣಬಸಪ್ಪ ದರ್ಶನಾಪುರ
- ಶಿವಾನಂದ ಪಾಟೀಲ್
- ಆರ್.ಬಿ.ತಿಮ್ಮಾಪುರ
- ಎಸ್.ಎಸ್.ಮಲ್ಲಿಕಾರ್ಜುನ
- ಶಿವರಾಜ ತಂಗಡಗಿ
- ಡಾ.ಶರಣ ಪ್ರಕಾಶ್ ಪಾಟೀಲ್
- ಮಂಕಾಳು ವೈದ್ಯ
- ಲಕ್ಷ್ಮೀ ಹೆಬ್ಬಾಳ್ಕರ್
- ರಹೀಂ ಖಾನ್
- ಡಿ.ಸುಧಾಕರ್
- ಸಂತೋಷ್ ಲಾಡ್
- ಬೋಸರಾಜು
- ಬಿ.ಎಸ್.ಸುರೇಶ್
- ಮಧು ಬಂಗಾರಪ್ಪ
- ಎಂ.ಸಿ.ಸುಧಾಕರ್
- ಬಿ.ನಾಗೇಂದ್ರ
ರಾಜಭವನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್
ರಾಜಭವನ ಸುತ್ತಮುತ್ತ ಭದ್ರತೆಗಾಗಿ 2700 ಪೊಲಿಸ್ ಸಿಬ್ಬಂಧಿಯನ್ನು ನಿಯೋಜನೆ ಮಾಡಲಾಗಿದೆ. 17 ಡಿಸಿಪಿ, 37 ಎಸಿಪಿ, 114 ಇನ್ಸ್ ಪೆಕ್ಟರ್ , 208 ಪಿಎಸ್ಐ, ಸೇರಿ 2700 ಪೊಲೀಸರನ್ನು ನಿಯೋಜಿಸಲಾಗಿದೆ. ಮಫ್ತಿಯಲ್ಲೂ 200 ಕ್ಕೂ ಅಧಿಕ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಡಿಸ್ವಾಟ್, ವಾಟರ್ಜೆಟ್ ನಿಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 am, Sat, 27 May 23