ಬೆಂಗಳೂರು: ಸಚಿವ ನಾರಾಯಣ ಗೌಡ ಮತ್ತು ಶಾಸಕ ಬೆಳ್ಳಿಪ್ರಕಾಶ್ ಮಧ್ಯೆ ಕಿತ್ತಾಟವಾಗಿದೆ. ಉಪಾಹಾರ ಸೇವನೆಯ ವೇಳೆ ಈ ಇಬ್ಬರೂ ನಾಯಕರು ಪರಸ್ಪರ ಕಾಲೆಳೆದುಕೊಂಡು ಕೂಗಾಡಿದ್ದಾರೆ.
ನಿನ್ನಂತಹ ಅಸಮರ್ಥನನ್ನು ನೋಡಿಯೇ ಇಲ್ಲ: ನಾರಾಯಣ ಗೌಡ
ವಿಧಾನಸೌಧದ ಮೊದಲ ಮಹಡಿಯ ಕ್ಯಾಂಟೀನ್‌ನಲ್ಲಿ ಅನುದಾನದ ವಿಚಾರವಾಗಿ ಸಚಿವ ನಾರಾಯಣಗೌಡ ಮತ್ತು ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಗಲಾಟೆ ಮಾಡಿಕೊಂಡಿದ್ದಾರೆ. ನಿನ್ನಂತಹ ಅಸಮರ್ಥನನ್ನು ನಾನು ನೋಡಿಯೇ ಇಲ್ಲ ಎಂದು ಬೆಳ್ಳಿ ಪ್ರಕಾಶ್ ವಿರುದ್ಧ ಸಚಿವ ನಾರಾಯಣಗೌಡ ರೇಗಾಡಿದ್ದಾರೆ. ಕಂಡಿದ್ದೇನೆ ಸುಮ್ನಿರಪ್ಪಾ ಎಂದು ಬೆಳ್ಳಿ ಪ್ರಕಾಶ್ ಕೂಗಾಡಿದ್ದಾರೆ. ಇಬ್ಬರನ್ನೂ ಕಂಡ ಇತರೆ ಸಚಿವರು, ಶಾಸಕರು ಸಮಾಧಾನ ಪಡಿಸಲು ಮುಂದಾದ ಸನ್ನಿವೇಶ ಇಂದು ವಿಧಾನಸೌಧದಲ್ಲಿ ನಡೆದಿದೆ. ಇಬ್ಬರೂ ನಾಯಕರು ಏಕವಚನದಲ್ಲಿ ಕಿತ್ತಾಡಿಕೊಂಡಿದ್ದಾರೆ.
ಅಲ್ಲದೆ ಗದ್ದಲದ ವೇಳೆ ಕ್ಯಾಂಟೀನ್‌ನಲ್ಲಿ ಸಚಿವರಾದ ಕೆಎಸ್. ಈಶ್ವರಪ್ಪ, ಸಿಟಿ. ರವಿ, ವಿ. ಸೋಮಣ್ಣನವರು ಕುಳಿತಿದ್ದ ಕುರ್ಚಿಗಳನ್ನು ತಳ್ಳಿ ನಾರಾಯಣ ಗೌಡ ಮತ್ತು ಬೆಳ್ಳಿ ಪ್ರಕಾಶ್ ಬೈದಾಡಿಕೊಂಡಿದ್ದಾರೆ. ಪರಸ್ಪರ ಹೊಡೆದಾಟದ ಹಂತಕ್ಕೆ ಸಚಿವ ಮತ್ತು ಆಡಳಿತ ಪಕ್ಷದ ಶಾಸಕ ಜಗಳ ತಿರುಗಿತ್ತು. ಗಲಾಟೆ ವೇಳೆ ಅವಾಚ್ಯ ಶಬ್ದಗಳನ್ನೂ ಸಹ ಬಳಸಿದ್ದಾರೆ.
ಗಲಾಟೆ ವೇಳೆ ಕ್ಯಾಂಟೀನ್ ಪ್ರವೇಶಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ಗಲಾಟೆ ಕಂಡು ಒಂದು ಕ್ಷಣ ದಿಗಿಲು ಬಡಿದವರಂತೆ ಮಂಕಾದ್ರು. ಕೂಗಾಟದ ಬಳಿಕ ಬೆಳ್ಳಿ ಪ್ರಕಾಶ್ ಸದನದೊಳಕ್ಕೆ ತೆರಳಿದ್ರು. ಆದರೆ ನಾರಾಯಣ ಗೌಡ ಕ್ಯಾಂಟೀನ್ನಲ್ಲೇ ಉಳಿದುಕೊಂಡ್ರು.
ಕ್ಯಾಂಟೀನ್ ಗಲಾಟೆಗೆ ಕಾರಣ:
ಅನುದಾನಕ್ಕಾಗಿ ಶಾಸಕ ಬೆಳ್ಳಿ ಪ್ರಕಾಶ್ ಹಲವು ಬಾರಿ ಸಚಿವ ನಾರಾಯಣ ಗೌಡರ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ರು. ಜೊತೆಗೆ ಸಚಿವರಿಗೆ ಕರೆ ಮಾಡಿದ್ರೂ ಫೋನ್ ರಿಸೀವ್ ಮಾಡದೆ ಸತಾಯಿಸಿದ್ರು. ಹೀಗಾಗಿ ಕ್ಷೇತ್ರದ ಕೆಲಸ ಆಗದೇ ಬೆಳ್ಳಿ ಪ್ರಕಾಶ್ ಅಸಹಾಯಕರಾಗಿದ್ರು.
ಬೆಳ್ಳಿ ಪ್ರಕಾಶ್ ಕೈ ಮಾಡಲು ಮುಂದಾದಾಗ ಕೈ ಶಾಸಕರು ತಡೆದರು!
ವಿಧಾನಸಭೆ ಕ್ಯಾಂಟೀನ್‌ನಲ್ಲಿ ಸಚಿವ ನಾರಾಯಣಗೌಡ ಕಂಡ ತಕ್ಷಣ ಮಾತಾಡಿಸಲು ಮುಂದಾಗಿದ್ದಾರೆ. ಮಾತುಕತೆ ವೇಳೆ ಕೆಲಸ ಇದ್ರೆ ಆಫೀಸ್ಗೆ ಬಂದು ಮಾತಾಡು ಎಂದು ಸಚಿವ ನಾರಾಯಣ ಗೌಡ ಉತ್ತರಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಬೆಳ್ಳಿ ಪ್ರಕಾಶ್ ಅವರು ನಾರಾಯಣ ಗೌಡ ಮೇಲೆ ಕೈ ಮಾಡಲು ಮುಂದಾದ್ರು. ತಕ್ಷಣ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಮತ್ತು ಜೆಡಿಎಸ್ ಅನ್ನದಾನಿ ಬೆಳ್ಳಿ ಪ್ರಕಾಶ್ ಅವರನ್ನು ತಡೆದಿದ್ದಾರೆ.
ಗಲಾಟೆಗೆ ಪ್ರತಿಕ್ರಿಯೆ ಕೊಡದ ಬೆಳ್ಳಿ ಪ್ರಕಾಶ್:
ಗಲಾಟೆ ಬಗ್ಗೆ ಬೆಳ್ಳಿ ಪ್ರಕಾಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇದು ಅಣ್ಣ ತಮ್ಮಂದಿರ ಜಗಳ ಎಂದು ಮಾಧ್ಯಮಗಳಿಗೆ ಕೈ ಮುಗಿದು ವಿಧಾನಸೌಧದಿಂದ ಹೊರನಡೆದಿದ್ದಾರೆ.
Published On - 2:06 pm, Mon, 21 September 20