ರಾಯಚೂರು: ಜಿಲ್ಲೆಯ ಅರಕೇರಾ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಸಾವಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ (Health Department) ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿದೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಬೀಡು ಬಿಟ್ಟಿದ್ದು, ಮಕ್ಕಳು, ವೃದ್ಧರು ಮೇಲೆ ನಿಗಾ ಇರಿಸಿದ್ದಾರೆ. ರೋಗದ ಲಕ್ಷಣಗಳಿರುವವರಿಗೆ ಗ್ಲುಕೋಸ್ ಜೊತೆ, ಔಷಧಿ ನೀಡುತ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ದೇವದುರ್ಗ ಕ್ಷೇತ್ರದ ಜೆಡಿಸ್ ಶಾಸಕಿ ಕರಿಯಮ್ಮ ನಾಯಕ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದೆ ವೇಳೆ ಮೃತ ಬಾಲಕ ಹನುಮೇಶ್ ಕುಟುಂಬಸ್ಥರಿಗೆ ಶಾಸಕಿ ಕರಿಯಮ್ಮ ನಾಯಕ್ ಸಾಂತ್ವಾನ ಹೇಳಿದ್ದಾರೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶಾಸಕಿ ಕರಿಯಮ್ಮ ನಾಯಕ್ ಅಧಿಕಾರಿಗಳ ಜೊತೆ ಚರ್ಚಿಸಿ ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತೆ. ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಓ ಅವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ
ಇಂದು (ಮೇ.26) ಬೆಳಿಗ್ಗೆ ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿತ್ತು. ಹನುಮೇಶ್(5) ಮೃತ ಬಾಲಕ. ಇನ್ನು ಅಸ್ವಸ್ಥರಾದವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದು, ಜಿಲ್ಲೆಯ ಅರಕೇರಾ, ದೇವದುರ್ಗ, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಈ ಘಟನೆಗೆ ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕೃಷಿ ಮತ್ತು ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ರಾಯಚೂರು ದೇಶದಲ್ಲಿ ಮೊದಲ ಸ್ಥಾನ
ಹಾವೇರಿ: ಮೇ. 24 ರಂದು ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಚಪ್ರದಹಳ್ಳಿ ಗ್ರಾಮದಲ್ಲಿ ನಡೆದ ಮದುವೆ ಆರಕ್ಷತೆಯ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ 42 ಜನ ಅಸ್ವಸ್ಥರಾಗಿ ಆಸ್ಪತ್ರಗೆ ದಾಖಲಾಗಿದ್ದರು. ಕಳೆದ ಸೋಮವಾರ ಹರಿಹರ ತಾಲೂಕು ವಾಸನ ಎಂಬ ಗ್ರಾಮದಲ್ಲಿ ಮದುವೆ ನಡೆದಿತ್ತು.
ಚಪ್ರದಹಳ್ಳಿ ಗ್ರಾಮದ ಶಂಕರಪ್ಪ ಹಿತ್ತಲಮನಿ ಎಂಬುವವರ ಪುತ್ರಿಯ ಮದುವೆ ಮುಗಿಸಿಕೊಂಡು ಸ್ವಗ್ರಾಮ ಚಪ್ರದಹಳ್ಳಿಗೆ ವಾಪಾಸಾಗಿದ್ದ ಗ್ರಾಮಸ್ಥರು ವಧುವಿನ ಮನೆಯಲ್ಲಿ ನಡೆದ ಆರಕ್ಷತೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಾರ್ಯಕ್ರಮಕ್ಕೆ ಬಂದವರೆಲ್ಲ ಭರ್ಜರಿ ಊಟ ಸೇವಿಸಿದ್ದರು. ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ಜನರಿಗೆ ಮೇ.23ರ ರಾತ್ರಿ ಅಸ್ವಸ್ಥತೆ ಕಾಣಿಸಿಕೊಂಡಿತ್ತು.
ಫುಡ್ ಪಾಯ್ಸನ್ ಉಂಟಾಗಿ ವಾಂತಿ-ಬೇಧಿ ಕಾಣಿಸಿಕೊಂಡು 42 ಜನ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಅಸ್ವಸ್ಥಗೊಂಡವರ ಕುಟುಂಬಸ್ಥರು ರಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆದರೆ, ರಾತ್ರಿ ಸೂಕ್ತ ಚಿಕಿತ್ಸೆಯೇ ದೊರೆತಿಲ್ಲ. ಆಸ್ಪತ್ರೆಯಲ್ಲಿದ್ದ ಒಬ್ಬರೇ ನರ್ಸ್ ತಮ್ಮ ಕೈಲಾದಷ್ಟು ಚಿಕಿತ್ಸೆ ಕೊಟ್ಟಿದ್ದರು. ಈ ವೇಳೆ ರಟ್ಟಿಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಾ ಅವರಿಗೆ ಕರೆ ಮಾಡಿದ್ದರೂ ಸ್ಪಂದಿಸಿರಲಿಲ್ಲ.
ಜನರ ಒತ್ತಾಯದ ಮೇರೆಗೆ ರಟ್ಟಿಹಳ್ಳಿ ಪಕ್ಕದ ಹಳ್ಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತೇವೆ ಅಂದರೂ ರಟ್ಟಿಹಳ್ಳಿ ವೈದ್ಯೆ ಡಾ. ಪುಷ್ಪ ನಿರಾಕರಿಸಿದ್ದರು.ಇತ್ತ ವಿಷಯ ಗೊತ್ತಿದ್ದರೂ ಮೇ.24ರ ಬೆಳಿಗ್ಗೆ 11 ಗಂಟೆ ಆದರು, ಚಿಕಿತ್ಸೆಗೆ ಬಾರದೇ ಡಾ.ಪುಷ್ಪ ನಿರ್ಲಕ್ಷ್ಯ ವಹಿಸಿದ್ದರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಹಿನ್ನಲೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Fri, 26 May 23