ರಾಯಚೂರು: ಜಿಲ್ಲೆಯ ಅರಕೇರಾ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬಾಲಕ ಸಾವಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಡಿ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿಯ ಪಿಡಿಒ ರೇಣುಕಾ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ್ ಆದೇಶ ಹೊರಡಿಸಿದ್ದಾರೆ. ಇನ್ನು ಮೃತ ಬಾಲಕನ ತಂದೆ ಈಶ್ವರಪ್ಪ ದೇವದುರ್ಗ ಠಾಣೆಯಲ್ಲಿ ದೂರು ದಾಖಲು ಪಿಡಿಒ ವಿರುದ್ಧ ದೂರು ದಾಖಲಿಸಿದ್ದಾರೆ. ಪಿಡಿಒ ರೇಣುಕಾ ಅವರ ನಿರ್ಲಕ್ಷ್ಯವೇ ನನ್ನ ಮಗನ ಸಾವಿಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಡಿಯುವ ನೀರಿನ ಪೈಪ್ ಒಡೆದಿರುವ ಬಗ್ಗೆ ಗ್ರಾಮಸ್ಥರು ಪಿಡಿಒಗೆ ಮಾಹಿತಿ ನೀಡಿದ್ದರು. ಆದರೂ ಕೂಡ ಪೈಪ್ ಸರಿಪಡಿಸದೆ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಪೈಪಿನೊಳಕೆ ಪಕ್ಕದಲ್ಲೇ ಇದ್ದ ಚರಂಡಿ ನೀರು ಸೇರಿಕೊಂಡು ನೀರು ಕಲುಷಿತಗೊಂಡಿದೆ. ಈ ನೀರನ್ನು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಬಾಲಕ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿರವಾರದಲ್ಲಿ ಅನುಮಾನಾಸ್ಪದವಾಗಿ ತಂದೆ, ಇಬ್ಬರು ಮಕ್ಕಳು ಸಾವು
ನಿನ್ನೆ ಮೇ.26 ರಂದು ಬೆಳಿಗ್ಗೆ ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 30 ಜನ ಅಸ್ವಸ್ಥರಾದ ಘಟನೆ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿತ್ತು. ಹನುಮೇಶ್(5) ಮೃತ ಬಾಲಕ. ಇನ್ನು ಅಸ್ವಸ್ಥರಾದವರಿಗೆ ಸಿರವಾರ, ದೇವದುರ್ಗ, ಅರಕೇರಾ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ಈ ಘಟನೆಗೆ ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ಆರೋಪ ಕೇಳಿಬಂದಿದೆ. ಅಲ್ಲದೇ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ (Health Department) ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿತ್ತು.
ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಬೀಡು ಬಿಟ್ಟಿದ್ದು, ಮಕ್ಕಳು, ವೃದ್ಧರು ಮೇಲೆ ನಿಗಾ ಇರಿಸಿದ್ದರು. ರೋಗದ ಲಕ್ಷಣಗಳಿರುವವರಿಗೆ ಗ್ಲುಕೋಸ್ ಜೊತೆ, ಔಷಧಿ ನೀಡುತ್ತಿದ್ದರು. ಇನ್ನು ಘಟನಾ ಸ್ಥಳಕ್ಕೆ ದೇವದುರ್ಗ ಕ್ಷೇತ್ರದ ಜೆಡಿಸ್ ಶಾಸಕಿ ಕರಿಯಮ್ಮ ನಾಯಕ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಇದೆ ವೇಳೆ ಮೃತ ಬಾಲಕ ಹನುಮೇಶ್ ಕುಟುಂಬಸ್ಥರಿಗೆ ಶಾಸಕಿ ಕರಿಯಮ್ಮ ನಾಯಕ್ ಸಾಂತ್ವಾನ ಹೇಳಿದ್ದರು.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶಾಸಕಿ ಕರಿಯಮ್ಮ ನಾಯಕ್ ಅಧಿಕಾರಿಗಳ ಜೊತೆ ಚರ್ಚಿಸಿ ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತೆ. ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಓ ಅವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ