ರಾಜ್ಯದಲ್ಲಿ ಮೊದಲ ಹಂತದ ನೆರೆ ಹಾವಳಿಯಿಂದಾಗಿ ರೂ. 8,070 ಕೋಟಿ ಹಾನಿ ಉಂಟಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು, ರಾಜ್ಯದ್ಯಂತ ಮೊದಲ ಹಂತದ ಪ್ರವಾಹದಿಂದ ರೂ. 8070 ಕೋಟಿ ಹಾನಿಯಾಗಿದೆ, ಎನ್ ಡಿ ಆರ್ ಎಫ್ ನಿಯಮಾವಳಿ ಪ್ರಕಾರ ರಾಜ್ಯಕ್ಕೆ ರೂ. 643 ಕೋಟಿ ಹಣ ದೊರೆಯಲಿದ್ದು, ಕೇಂದ್ರ ಸರಕಾರ ಈಗಾಗಲೇ ರೂ 375 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದರು.
ಪರಿಹಾರ ನೀಡಲು ಸರ್ಕಾರದಲ್ಲಿ ಹಣದ ಅಭಾವವಿಲ್ಲ, ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಲು ನಾಳೆ ಮುಖ್ಯಮಂತ್ರಿಗಳು ದೆಹಲಿಗೆ ಹೋಗಲಿದ್ದಾರೆ ಎಂದ ಅಶೋಕ, ಎರಡನೆಯ ಹಂತದ ಮಳೆ ಹಾನಿ ಸಮೀಕ್ಷೆ ಸಹ ಇಷ್ಟರಲ್ಲೇ ನಡೆಸಲಾಗುವುದು ಅಂತ ಹೇಳಿದರು.
ಜನರು ಹಾಗು ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಮುದಗಲ್ ಹಾಗು ಗಬ್ಬೂರುಗಳಿಗೂ ತಾಲೂಕು ಸ್ಥಾನಮಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.