ರಾಯಚೂರು: ಆಕೆ ದುಡಿದು ಸಂಸಾರ ನಡೆಸುತ್ತಿದ್ದ ವಿಶೇಷಚೇತನ ಮಹಿಳೆ. ಆದರೆ ಡಿಸೆಂಬರ್ 5 ರಂದು ಸಂಜೆ ನಡೆದ ಭೀಕರ ಅಪಘಾತದಿಂದ ಶಾಶ್ವತವಾಗಿ ಹಾಸಿಗೆ ಹಿಡಿಯುವಂತೆ ಆಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಸಂತೋಷಮ್ಮ ಎಂಬ ವಿಶೇಷಚೇತನ ಮಹಿಳೆಗೆ ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿ ಅಪಘಾತವಾಗಿದೆ. ಆದರೆ ಇದು ಕೇವಲ ಅಪಘಾತವಲ್ಲ ಹಿಟ್ ಅಂಡ್ ರನ್ ಕೇಸ್. ಸದ್ಯ ಈ ಅಪಘಾತದ (Accident) ಭಯಾನಕ ದೃಶ್ಯ ಡಿವಿ9 ಡಿಜಿಟಲ್ಗೆ ಸಿಕ್ಕಿದೆ.
ಇದೇ ಡಿಸೆಂಬರ್ 5 ರ ಸಂಜೆ ಹೊತ್ತಿಗೆ ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ವಿಶೇಷಚೇತನ ಮಹಿಳೆ ಸಂತೋಷಮ್ಮ ಅವರ ನಾಲ್ಕು ಚಕ್ರದ ಬೈಕ್ಗೆ ಕಾರ್ ಡಿಕ್ಕಿಯಾಗಿದೆ. ಕಾರ್ ಡಿಕ್ಕಿ ರಭಸಕ್ಕೆ ಬೈಕ್ನಿಂದ ಪುಟಿದು ಸಂತೋಷಮ್ಮ ಕೆಳಬಿದ್ದಿದ್ದಾರೆ. ನಂತರ ಆಕೆ ಮೇಲೆ ಹರಿಯುತ್ತಿದ್ದ ಬೈಕ್ ಅನ್ನು ಅಲ್ಲಿದ್ದ ಸ್ಥಳೀಯರು ತಡೆದಿದ್ದಾರೆ. ಆದರೆ ಜನಸೇರುತ್ತಿದ್ದಂತೆ ಅಪಘಾತ ಮಾಡಿದ, ಕಾರು ಚಾಲಕ ಪರಾರಿಯಾಗಿದ್ದಾನೆ.
ಆಗ ಸ್ಥಳದಲ್ಲಿದ್ದ ಓರ್ವ ಪೊಲೀಸ್ ಕಾನ್ಸ್ಟೇಬಲ್ ತಮ್ಮ ವ್ಯಾಪ್ತಿ ಅಲ್ಲ ಎಂದು ಕಾರು ಚಾಲಕನನ್ನು ಹಿಡಿಯದೆ ನಿರ್ಲಕ್ಷ್ಯ ಮಾಡಿದ್ದಾರೆ. ಈ ಅಪಘಾತದಿಂದ ಸಂತೋಷಮ್ಮಳ ಎಡಗಾಲು ಮುರಿದಿದೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ಮೀನಮೇಷ ಎಣಿಸುತ್ತಿದ್ದು, ನೇತಾಜಿ ನಗರ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ಹಗ್ಗಜಗ್ಗಾಟ ಆಡುತ್ತಿದ್ದಾರೆ. ಆದರೆ ಅಪಘಾತದಿಂದ ವಿಶೇಷಚೇತನ ಮಹಿಳೆ ಸಂತೋಷಮ್ಮ ಆಸ್ಪತ್ರೆಗೆ ಹಣ ಕಟ್ಟಲಾಗದೇ ಮನೆಯಲ್ಲೇ ಹಾಸಿಗೆ ಹಿಡಿದಿದ್ದು, ಕಣ್ಣಿರು ಹಾಕುತ್ತಿದ್ದಾರೆ.
ಬಾಗಲಕೋಟೆ: ಬಾವಿಗೆ ಬಿದ್ದ ಟ್ರ್ಯಾಕ್ಟರ್ ಎಂಜಿನ್; ಸ್ಥಳದಲ್ಲೇ ಸಾವನ್ನಪ್ಪಿದ ಚಾಲಕ
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಟ್ರ್ಯಾಕ್ಟರ್ ಎಂಜಿನ್ ಬಾವಿಗೆ ಬಿದ್ದಿದ್ದು, ಚಾಲಕ ದೇವಪ್ಪ ರಾಠೋಡ್(26) ಸಾವನ್ನಪ್ಪಿದ್ದಾರೆ. ಬಾವಿಗೆ ಟ್ರ್ಯಾಕ್ಟರ್ ಸಮೀಪಿಸುತ್ತಿದ್ದಂತೆ ಟ್ರ್ಯಾಕ್ಟರ್ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಳಕಲ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಹುಣಶ್ಯಾಳ ಗ್ರಾಮದವರಾದ ದೇವಪ್ಪ ರಾಠೋಡ್ ಹಾಗೂ ಮಂಜುನಾಥ ರಾಠೋಡ್ ಇಬ್ಬರು ಕಬ್ಬು ಕಡಿಯುವ ಕಾರ್ಮಿಕರು. ಚಂದ್ರಶೇಖರ್ ಕಂಟಿ ಎಂಬುವವರ ಹೊಲದ ಬಾವಿಯಲ್ಲಿ ತಿರುವು ವೇಳೆ ನಿಯಂತ್ರಣ ತಪ್ಪಿ ಬಾವಿಗೆ ಟ್ರ್ಯಾಕ್ಟರ್ ಸಮೇತ ದೇವಪ್ಪ ರಾಠೋಡ್ ಬಿದ್ದಿದ್ದಾರೆ. ಇಳಕಲ್ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
700 ಕಿ.ಮೀ.ದೂರದ ಊರಿಗೆ ವಿಶೇಷಚೇತನನನ್ನು ಕಳುಹಿಸಿಕೊಟ್ಟ ತಹಶೀಲ್ದಾರ್; ಲಾಕ್ಡೌನ್ ನಡುವೆಯೂ ಮನವಿಗೆ ಸ್ಪಂದನೆ
Published On - 11:36 am, Sun, 26 December 21