ರಾಯಚೂರು: ಹೊಸ ವರ್ಷದ ದಿನವೇ ಹಾಸ್ಟೆಲ್ (Hostel)ಗೆ ನುಗ್ಗಿ ಕಿಡಿಗೇಡಿಗಳ ಗುಂಪೊಂದು ವಿದ್ಯಾರ್ಥಿಗಳ (students) ಮೇಲೆ ಹಲ್ಲೆ ನಡೆಸಿರೊ ಘಟನೆ ರಾಯಚೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು (Lingasugur Raichur) ಪಟ್ಟಣದ ಹೊರ ವಲಯದ ಸರ್ಕಾರಿ ಹಾಸ್ಟೆಲ್ ನಲ್ಲಿ ನಡೆದಿದೆ. ಜನವರಿ 1 ರ ರಾತ್ರಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು, ಹೊಸ ವರ್ಷಾಚರಣೆ ಮಾಡಿದ್ದರು. ಅದೇ ವೇಳೆ ಕಿಡಿಗೇಡಿಗಳ ಗುಂಪೊಂದು ಹಾಸ್ಟೆಲ್ ಗೆ ಎಂಟ್ರಿ ಕೊಟ್ಟಿತ್ತು.
ಆಗ ಆ ಕಿಡಿಗೇಡಿಗಳ ಗುಂಪು ವಿದ್ಯಾರ್ಥಿಯೊಬ್ಬನ ಕುರಿತು ಮಾಹಿತಿ ಕೇಳಿದ್ದಾರೆ. ಆಗ ಅಲ್ಲಿದ್ದ ತಿಮ್ಮನಗೌಡ ಹಾಗೂ ವೆಂಕಟೇಶ್ ಅನ್ನೊ ವಿದ್ಯಾರ್ಥಿಗಳು ಕಿಡಿಗೇಡಿಗಳು ಕೇಳಿದ ಮಾಹಿತಿ ನೀಡಲು ಆಕ್ಷೇಪಿಸಿದ್ದಾರೆ. ಆಗ ಆ ಏಳೆಂಟು ಜನ ಕಿಡಿಗೇಡಿಗಳ ತಂಡ, ತಿಮ್ಮನಗೌಡ ಹಾಗೂ ವೆಂಕಟೇಶ್ ಸೇರಿ ಮೂರ್ನಾಲ್ಕು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ತಿಮ್ಮನಗೌಡ ಹಾಗೂ ವೆಂಕಟೇಶ್ ಗೆ ರಕ್ತಸಿಕ್ತ ಗಾಯಗಳಾಗಿದ್ದು ಹಾಸ್ಟೆಲ್ ನಲ್ಲಿ ಕೆಳಗೆಬಿದ್ದು ಒದ್ದಾಡಿ, ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಕಿಡಿಗೇಡಿಗಳ ತಂಡ ಹಾಸ್ಟೆಲ್ ನಿಂದ ಎಸ್ಕೇಪ್ ಆಗಿತ್ತು. ಭೀಕರವಾಗಿ ಗಾಯಗೊಂಡಿದ್ದ ತಿಮ್ಮನಗೌಡ ಹಾಗೂ ವೆಂಕಟೇಶ್ ಇಬ್ಬರನ್ನ ಕೂಡಲೇ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರಿಗೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ಕೂಡಲೇ ಅವರನ್ನ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲಾಗಿದೆ. ಸದ್ಯ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇಬ್ಬರೂ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಲಿಂಗಸುಗೂರು ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಐದು ಜನ ಆರೋಪಿಗಳನ್ನ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Thu, 5 January 23