ರಾಯಚೂರಿನಲ್ಲಿ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿದ್ದ ಅಪರಿಚಿತರ ಗ್ಯಾಂಗ್​​: ಕ್ರಮಕ್ಕೆ ಪೊಲೀಸರಿಗೆ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2025 | 5:24 PM

ದೇವದುರ್ಗದ ಜೆಡಿಎಸ್ ಶಾಸಕಿ ನಿವಾಸಕ್ಕೆ ಅಪರಿಚಿತರು ನುಗ್ಗಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜನವರಿ 23 ರ ರಾತ್ರಿ, ಅಪರಿಚಿತ ಗುಂಪೊಂದು ಶಾಸಕಿ ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿದ್ದರು. ನೆರೆಹೊರೆಯವರ ಕೂಗಾಟದಿಂದಾಗಿ ಅಪರಿಚಿತರು ಪತ್ತೆಯಾಗುವ ಮುನ್ನ ಪರಾರಿಯಾಗಿದ್ದಾರೆ. ಸದ್ಯ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿ, ತನಿಖೆಗೆ ಆಗ್ರಹಿಸಲಾಗಿದೆ.

ರಾಯಚೂರಿನಲ್ಲಿ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿದ್ದ ಅಪರಿಚಿತರ ಗ್ಯಾಂಗ್​​: ಕ್ರಮಕ್ಕೆ ಪೊಲೀಸರಿಗೆ ಸೂಚನೆ
ರಾಯಚೂರಿನಲ್ಲಿ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿದ್ದ ಅಪರಿಚಿತರ ಗ್ಯಾಂಗ್​​: ಕ್ರಮಕ್ಕೆ ಪೊಲೀಸರಿಗೆ ಸೂಚನೆ
Follow us on

ರಾಯಚೂರು, ಜನವರಿ 24: ಜೆಡಿಎಸ್ ಶಾಸಕಿ (JDS MLA) ಮನೆಗೆ ಅಪರಿಚಿತರು ಪ್ರವೇಶಿಸಿ ಆತಂಕ ಹುಟ್ಟಿಸಿದ್ದ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ ​​ ಅವರ ನಿವಾಸದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಶಾಸಕಿ ಮನೆಯ ಕೂಗಳತೆ ದೂರದಲ್ಲಿ ಬೈಕ್ ನಿಲ್ಲಿಸಿದ್ದ ಅಪರಿಚಿತರ ತಂಡ, ಹಿಂಬಾಗಿಲಿನಿಂದ ಮನೆಗೆ ಎಂಟ್ರಿ ಕೊಟ್ಟಿದೆ. ಈ ವೇಳೆ ಅಕ್ಕಪಕ್ಕದವರು ಕೂಗಿದಾಗ ಅಪರಿಚಿತರು ಪರಾರಿಯಾಗಿದ್ದಾರೆ. ಘಟನೆ ಬಳಿಕ ನಿನ್ನೆ ದೇವದುರ್ಗ ಪೊಲೀಸರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಮಾಹಿತಿ ನೀಡಿದ್ದಾರೆ. ಅಪರಿಚಿತರು ಯಾಕೆ ನಮ್ಮ ಮನೆಗೆ ನುಗ್ಗಿದ್ದರು ಎಂದು ತನಿಖೆ ನಡೆಸಿ, ಅವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ನನಗೆ ಭಯ ಇದೆ: ಶಾಸಕಿ ಕರೆಮ್ಮ ಜಿ.ನಾಯಕ

ಈ ಬಗ್ಗೆ ಶಾಸಕಿ ಕರೆಮ್ಮಾ ನಾಯಕ್ ಹೇಳಿಕೆ ನೀಡಿದ್ದು, ಇದೇ ಜನವರಿ‌ 22ರ ತಡ ರಾತ್ರಿ ಘಟನೆ ನಡೆದಿದೆ. ನಮ್ಮ ಮನೆಯಲ್ಲಿರುವವರು ನೋಡಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ವಿಚಾರ ನನಗೆ ಬೆಳಿಗ್ಗೆ ಗೊತ್ತಾಗಿದೆ. ಮೂರು ಜನ ಅಪರಿಚಿತರು ನಾನು ಮಲಗಿದ್ದ ಕೊಣೆ ಹೊರಗೆ ಬಂದಿದ್ದಾರೆ. ಈ ಹಿಂದೆ ಸಾಕಷ್ಟು ಘಟನೆಗಳು ನನ್ನ ವಿರುದ್ಧ ನಡೆದಿವೆ. ಆದರೆ ಮೊನ್ನೆ ರಾತ್ರಿ ಆಗಿದ್ದು ಗಂಭೀರವಾದ ಘಟನೆ. ನನಗೆ ಭಯ ಇದೆ. ನಾನೊಬ್ಬ ದಲಿತ ಸಮುದಾಯಕ್ಕೆ ಸೇರಿರುವ ಮಹಿಳೆ. ಪೊಲೀಸ್ ಇಲಾಖೆ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ ಗೊತ್ತಿಲ್ಲ. ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಟಿ ವಾಹನ: ಭಕ್ತರಿಗೆ ಗಾಯ

ಮಂತ್ರಾಲಯಕ್ಕೆ ಹೊರಟಿದ್ದ ಟಿಟಿ ವಾಹನ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿ ಇರುವಂತಹ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಸಮೀಪದಲ್ಲೇ ನಡೆದಿದೆ. ಅಪಘಾತದಲ್ಲಿ ಮೈಸೂರಿನ ಹುಣಸೂರು ಮೂಲದ ಭಕ್ತರಿಗೆ ಗಾಯಗಳಾಗಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಶವ ಪತ್ತೆ: 3 ಮಕ್ಕಳ ತಾಯಿಯನ್ನ ಕೊಂದು ಬಿಸಾಡಿರುವ ದುಷ್ಕರ್ಮಿಗಳು

10ಕ್ಕೂ ಹೆಚ್ಚು ಜನರಿದ್ದ ಕುಟುಂಬ ಹುಣಸೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದರು. ಇಂದು ಬೆಳಿಗ್ಗೆ ಮಂತ್ರಾಲಯದ ಸಮೀಪ ಚಾಲಕನ ನಿಯಂತ್ರಣ ತಪ್ಪಿ, ಟಿಟಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಟಿ ಚಾಲಕ, ಪ್ರಯಾಣಿಕರಾದ ಮಂಜುನಾಥ್, ಸುಜಾತಾ, ಗಿರಿಧರ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ 

ಮತ್ತೊಂದು ಪ್ರಕಣದಲ್ಲಿ ಲಾರಿ ಅಡಿ ಸಿಲುಕಿದ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಹೊರ ಭಾಗದಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್​ ಸವಾರನ ಮೃತದೇಹ ಛಿದ್ರ ಛಿದ್ರವಾಗಿದೆ. ಲಕ್ಷ್ಮಣ್ (35) ಮೃತ ಬೈಕ್ ಸವಾರ. ಮೃತ ಲಕ್ಷ್ಮಣ್ ಮಾನ್ವಿ ತಾಲ್ಲೂಕಿನ ಬೈಲ ಮರ್ಚಡ್ ಗ್ರಾಮದ ನಿವಾಸಿ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:40 pm, Fri, 24 January 25