ರಾಯಚೂರು: ರಾಜ್ಯದಲ್ಲಿ 108 ಆಂಬುಲೆನ್ಸ್ (Ambulance) ಸೇವೆ ಇರುವುದು ಜನರ ತುರ್ತು ಸೇವೆಗೆ. ಆದರೆ ರಾಯಚೂರು ಜಿಲ್ಲೆಯಲ್ಲಿ 108 ಸೇವೆಯೇ ಇಲ್ಲದಂತಾಗಿದೆ. ಏಕೆಂದರೆ ಇಲ್ಲಿ ಆಂಬುಲೆನ್ಸ್ ಚಾಲಕ ಇದ್ದರೆ,ಆಂಬುಲೆನ್ಸ್ ಇಲ್ಲ, ಆಂಬುಲೆನ್ಸ್ ಇರುವ ಕಡೆ ಚಾಲಕ ಇಲ್ಲ ಎನ್ನುವಂತೆ ಆಗಿದೆ. ಹೀಗಿರುವಾಗ ಬೇರೆ ಕಡೆಯಿಂದ ಆಂಬುಲೆನ್ಸ್ ಕೆರೆಸಿದರು. ಅದು ರೋಗಿಗಳು ಇರುವ ಸ್ಥಳಕ್ಕೆ ಬರುವಷ್ಟರಲ್ಲಿ ಎಷ್ಟೋ ಜೀವಗಳು ಉಸಿರು ಚೆಲ್ಲುತ್ತಿವೆ.
ರಾಯಚೂರು ಜಿಲ್ಲೆಯಾದ್ಯಂತ ಒಟ್ಟು 50 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಮುದಾಯ ಆರೋಗ್ಯ ಕೇಂದ್ರ ಹಾಗೂ 4 ತಾಲ್ಲೂಕು ಆರೋಗ್ಯ ಕೇಂದ್ರಗಳು ಇವೆ. ಆದರೆ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 50 ಆಂಬುಲೆನ್ಸ್ ಇರಬೇಕು. ಆದರೆ 40 ಕಡೆಗಳಲ್ಲಿ ಆಂಬುಲೆನ್ಸ್ಗಳೇ ಇಲ್ಲ. ಇದೇ ಕಾರಣಕ್ಕೆ ಅಪಘಾತ ಆದಾಗ, ಹೆರಿಗೆ ವೇಳೆ ಆಂಬುಲೆನ್ಸ್ ಇಲ್ಲದ ಕಾರಣ ಜನ ಅಕ್ಷರಶಃ ಪರದಾಡುತ್ತಿದ್ದಾರೆ. ನಿನ್ನೆ ಮಸ್ಕಿ ಬಳಿ ಅಪಘಾತ ಸಂಭವಿಸಿದ್ದು, ಆಂಬುಲೆನ್ಸ್ ಬರುವುದು ವಿಳಂಬವಾಗಿದ್ದಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊರೊನಾ ಎರಡನೇ ಅಲೆ ವೇಳೆ ರಾಯಚೂರು ಜಿಲ್ಲಾಡಳಿತ ಭಾರೀ ಬೆಲೆ ತೆತ್ತಿತ್ತು. ಇದರಲ್ಲಿ ಸೊಂಕಿತರನ್ನು ಕರೆದೊಯ್ಯಲು ಆಂಬುಲೆನ್ಸ್ ಕೊರತೆ ಇದ್ದದ್ದು ಒಂದು ಕಾರಣ. ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ಬಾರದೇ ಇರುವುದು, ಆಂಬುಲೆನ್ಸ್ ಬಂದರು ವೆಂಟಿಲೇಟರ್ ಸಮಸ್ಯೆ, ಒಮ್ಮೊಮ್ಮೆ ಆಂಬುಲೆನ್ಸ್ ಪಕ್ಕದ ತಾಲ್ಲೂಕು ಆಸ್ಪತ್ರೆಯಿಂದ ಬರುವಷ್ಟರಲ್ಲಿ ಕೊರೊನಾ ಸೊಂಕಿತರು ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದು ಎಲ್ಲವೂ ನಡೆದಿದೆ. ಹೀಗಿದ್ದರೂ ಎಚ್ಚೆತ್ತುಕೊಳ್ಳದ ರಾಯಚೂರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೊರಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ತಾಲ್ಲೂಕಿನಲ್ಲಿ 7, ಸಿಂಧನೂರು ತಾಲ್ಲೂಕಿನಲ್ಲಿ 9, ಲಿಂಗಸುಗೂರು ತಾಲ್ಲೂಕಿನಲ್ಲಿ 11, ದೇವದುರ್ಗ ತಾಲ್ಲೂಕಿನಲ್ಲಿ 6 ಹಾಗೂ ಮಾನ್ವಿ ತಾಲ್ಲೂಕಿನಲ್ಲಿ 7 ಆಂಬುಲೆನ್ಸ್ಗಳು ಹಾಗೂ ಚಾಲಕರ ಕೊರತೆ ಇದೆ. ಈಗ ಕೊರೊನಾ ಮೂರನೇ ಅಲೆ ಭೀತಿ ಕೂಡ ಎದುರಾಗಿದೆ. ಇನ್ನಾದರು ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ವರದಿ: ಭೀಮೇಶ್ ಪೂಜಾರ್
ಇದನ್ನೂ ಓದಿ:
ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ಐವರಿಗೆ ಪ್ರತ್ಯೇಕ ವ್ಯವಸ್ಥೆಯ ಗೊಂದಲ: ಪೋಷಕರ ಆಕ್ರೋಶ
Published On - 12:23 pm, Wed, 12 January 22