ಅಸಮರ್ಪಕ ವಿದ್ಯುತ್ ಪೂರೈಕೆ, ಧರಣಿನಿರತ ರೈತ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ

| Updated By: Rakesh Nayak Manchi

Updated on: Oct 17, 2023 | 6:12 PM

ಮಳೆ ಅಭಾವದಿಂದಾಗಿ ವಿದ್ಯುತ್ ಉತ್ಪಾದನೆಯನ್ನು ಕುಂಠಿತಗೊಂಡಿದ್ದು, ಕರ್ನಾಟಕ ರಾಜ್ಯಾದ್ಯಂತ ಲೋಡ್​ ಶೆಡ್ಡಿಂಗ್ ಸಮಸ್ಯೆ ಎದುರಿಸಲಾಗುತ್ತಿದೆ. ದಿನಕ್ಕೆ 7 ಗಂಟೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಇದೀಗ 5 ಗಂಟೆಗೆ ಇಳಿಕೆಯಾಗಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸದ ಹಿನ್ನೆಲೆ ಧರಣಿ ಕೈಗೊಂಡಿದ್ದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

ಅಸಮರ್ಪಕ ವಿದ್ಯುತ್ ಪೂರೈಕೆ, ಧರಣಿನಿರತ ರೈತ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ
Follow us on

ರಾಯಚೂರು, ಅ.17: ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ಧರಣಿನಿರತ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ (Farmer Suicide) ಯತ್ನಿಸಿದ ಘಟನೆ ರಾಯಚೂರು (Raichur) ನಗರದ ಜೆಸ್ಕಾಂ ಕಚೇರಿ ಬಳಿ ಇಂದು ನಡೆದಿದೆ. ಮಳೆ ಅಭಾವದಿಂದಾಗಿ ವಿದ್ಯುತ್ ಉತ್ಪಾದನೆಯನ್ನು ಕುಂಠಿತಗೊಂಡಿದ್ದು, ಕರ್ನಾಟಕ ರಾಜ್ಯಾದ್ಯಂತ ಲೋಡ್​ ಶೆಡ್ಡಿಂಗ್ ಸಮಸ್ಯೆ ಎದುರಿಸಲಾಗುತ್ತಿದೆ. ದಿನಕ್ಕೆ 7 ಗಂಟೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಇದೀಗ 5 ಗಂಟೆಗೆ ಇಳಿಕೆಯಾಗಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಇದೇ ಕಾರಣಕ್ಕೆ ಇಂದು ಜೆಸ್ಕಾಂ ಕಚೇರಿ ಬಳಿ ರೈತರು ಧರಣಿ ನಡೆಸುತ್ತಿದ್ದರು. ಧರಣಿನಿರತ ರೈತ ತಿಮ್ಮಪ್ಪ ಅವರು ಮಧ್ಯಾಹ್ನ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಜಮೀನಿಗೆ ಬಂದ ಕೇಂದ್ರ ಬರ ತಂಡದ ಅಧಿಕಾರಿಗಳ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ರೈತ

ಆಸ್ಪತ್ರೆಯಲ್ಲಿ ಮಾತನಾಡಿದ ರೈತ ತಿಮ್ಮಪ್ಪ, 12 ಗಂಟೆ ವಿದ್ಯುತ್ ನೀಡುವುದಾಗಿ ಹೇಳಿ ಸರ್ಕಾರ ನೀಡುತ್ತಿಲ್ಲ. ಹೀಗಾಗಿ ಬಹಳ ಜನ ರೈತರು ಪ್ರತಿಭಟಿಸಿಲು ಬಂದಿದ್ದರು. ಕೆಲವರು ವಿಷ ಕುಡಿಯಲು ಮುಂದಾಗಿದ್ದರು. ಸರ್ಕಾರದ ನಡೆ ಖಂಡಿಸಿ ಬೇಸರದಿಂದ ಹೊಲಕ್ಕೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ್ದೇನೆ. ಬಳಿಕ ಮೂರ್ಚೆ ಬಂತು, ನಂತರ ವಾಂತಿ ಬೇಧಿ ಆಯ್ತು ಎಂದರು.

ಈ ಬಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನೀರಿನ ಕೊರತೆ ಉಂಟಾಗಿ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಸಮಸ್ಯೆ ಉಂಟಾಗಿದ್ದು, ರೈತರು ಪರದಾಡುವಂತಾಗಿದೆ.

ವಿದ್ಯುತ್ ಅಭಾವದ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿರುವ ರಾಜ್ಯ ಸರ್ಕಾರ, ರೈತರ ಹೊಲಗಳಿಗೆ ನೀಡುತ್ತಿದ್ದ 7 ಗಂಟೆ ವಿದ್ಯುತ್ ಅನ್ನು 5 ಗಂಟೆಗೆ ಇಳಿಸಿದೆ. ಹಲವೆಡೆ ಯಾವಾಗ ಕರೆಂಟ್ ಬರುತ್ತೋ, ಯಾವಾಗಾ ಹೋಗುತ್ತೋ ಗೊತ್ತಾಗುತ್ತಿಲ್ಲ. ಸದ್ಯ ವಿದ್ಯುತ್ ಸಮಸ್ಯೆ ರೈತರನ್ನು ಕಾಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ