ರಾಯಚೂರು: ತಂದೆ ಮತ್ತು ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು ನಡೆಸಿದ ತನಿಖೆ ವೇಳೆ ತಂಬಾಕು ವಿಚಾರದಲ್ಲಿ ಆದ ಕೌಟುಂಬಿಕ ಜಗಳವೇ (Family dispute) ಮೂವರ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ನಿನ್ನೆ ಮುದಕಪ್ಪ (60), ಶಿವು (23), ಬಸವರಾಜ್ (20) ಸಾವನ್ನಪ್ಪಿದ್ದರು. ಶಿವು ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದ. ಈತನ ಪತ್ನಿ ತಂಬಾಕು ಕೇಳಿದ್ದಕ್ಕೆ ಆರಂಭವಾದ ಜಗಳ ಮೂವರ ಸಾವಿನಲ್ಲಿ ಅಂತ್ಯವಾಗಿದೆ.
ಕುಟುಂಬಸ್ಥರ ಎದುರೇ ಶಿವು ಪತ್ನಿ ಮಾಯಮ್ಮ ತಂಬಾಕು ಕೇಳಿದ್ದಾಳೆ. ಇದರಿಂದ ಇರಿಸು ಮುರಿಸುಗೆ ಒಳಗಾದ ಶಿವು ಪತ್ನಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಮಾಯಮ್ಮ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮಾವ ಮುದುಕಪ್ಪ, ಕರೆಗೆ ಹಾರಿ ಮಾಯಮ್ಮಳನ್ನು ರಕ್ಷಿಸಿ ಮೇಲಕ್ಕೆ ತಂದಿದ್ದರು. ನಂತರ ಮತ್ತೆ ಆತ್ಮಹತ್ಯೆಗೆ ಯತ್ನಿಸಿದಾಗಲೂ ಮುದುಕಪ್ಪ ಆಕೆಯನ್ನು ರಕ್ಷಿಸಿದ್ದಾರೆ.
ಪತ್ನಿ ಆತ್ಮಹತ್ಯೆ ಹೈಡ್ರಾಮಾ ಸಹಿಸಲಾಗದೇ ಅದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಶಿವು ಯತ್ನಿಸಿದ್ದಾನೆ. ಈ ವೇಳೆ ಈಜು ಬಾರದ ಸಹೋದರ ಬಸವರಾಜ್ ಶಿವು ರಕ್ಷಣೆಗಾಗಿ ಕೆರೆಗೆ ಹಾರಿದ್ದಾನೆ. ಮೇಲೆ ಬರಲಾಗದೆ ಒದ್ದಾಡುತ್ತಿರುವುದನ್ನು ಕಂಡು ತಂದೆ ಮುದುಕಪ್ಪ ವಂಶದ ಕುಡಿಗಳನ್ನು ಕಾಪಾಡಲು ಕೆರೆಗೆ ಹಾರಿದ್ದಾರೆ. ಕೂಡಲೇ ಈಜು ಬಾರದ ಮಕ್ಕಳು ತಂದೆಯನ್ನು ಬಿಗಿಯಾಗಿ ಹಿಡಿದುಕೊಂಡ ಹಿನ್ನೆಲೆ ಈಜು ಬಂದರೂ ಈಜಲಾಗದೆ ಮಕ್ಕಳೊಂದಿಗೆ ತಂದೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ತಂದೆ ಮತ್ತು ಇಬ್ಬರು ಮಕ್ಕಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೂವರ ಶವವನ್ನು ಹೊರತೆಗೆದಿದ್ದರು. ಪ್ರಕರಣ ದಾಖಲಿಸಿಕೊಂಡ ಸಿರವಾರ ಠಾಣಾ ಪೊಲೀಸರು ತನಿಖೆ ಭಾಗವಾಗಿ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ