ರಾಯಚೂರು: ವಿಚಾರಣೆಗೆ ಬಂದ ಪೊಲೀಸರನ್ನೇ ಕಂಬಕ್ಕೆ ಕಟ್ಟಿ ಥಳಿಸಿದ ದಂಪತಿ; ಆರೋಪಿಗಳು ಅರೆಸ್ಟ್

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ಕೌಟುಂಬಿಕ ಕಲಹದ ವಿಚಾರಣೆಗೆ ತೆರಳಿದ್ದ ಎಎಸ್‌ಐ ಮತ್ತು ಪಿಎಸ್‌ಐ ಮೇಲೆ ದಂಪತಿ ಹಲ್ಲೆ ನಡೆಸಿದ್ದಾರೆ. ವಿಚಾರಣೆಗೆ ಬಂದ ಪೊಲೀಸರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರೂ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ವಿಚಾರಣೆಗೆ ಬಂದ ಪೊಲೀಸರನ್ನೇ ಕಂಬಕ್ಕೆ ಕಟ್ಟಿ ಥಳಿಸಿದ ದಂಪತಿ; ಆರೋಪಿಗಳು ಅರೆಸ್ಟ್
ವಿಚಾರಣೆಗೆ ಬಂದ ಪೊಲೀಸರ ಮೇಲೆ ದಂಪತಿಯಿಂದ ಹಲ್ಲೆ

Updated on: Nov 12, 2025 | 12:59 PM

ರಾಯಚೂರು, ನವೆಂಬರ್ 12: ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಟ್ಟೂರು ತಾಂಡಾದಲ್ಲಿ ವಿಚಾರಣೆಗೆ ತೆರಳಿದ್ದ ಪೊಲೀಸರ ಮೇಲೆ ದಂಪತಿ ಹಲ್ಲೆ ನಡೆಸಿದ ಘಟನೆ ಕೇಳಿ ಬಂದಿದೆ. ವಿಚಾರಣೆಗೆಂದು ಬಂದ ಎಎಸ್‌ಐನ ಮೊಬೈಲ್ ಕಸಿದು ಥಳಿಸಿದ್ದಲ್ಲದೇ, ಘಟನೆ ತಿಳಿದು ಸ್ಥಳಕ್ಕೆ ಬಂದ ಪಿಎಸ್​ಐ ಮೇಲೆಯೂ ದಂಪತಿ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಪೋಲಿಸರೆದುರೇ ದೂರುದಾರನ ಮಗನ ಮೇಲೆ ಹಲ್ಲೆ

ಒಂದೇ ತಾಂಡಾದ ಎರಡು ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ಹಿನ್ನೆಲೆ ರಾಮಪ್ಪ ದಂಪತಿಯ ಮೇಲೆ ಮಲ್ಲಪ್ಪ ಎಂಬುವವರು ದೂರು ನೀಡಿದ್ದರು.ಈ ಹಿನ್ನೆಲೆ ವಿಚಾರಣೆಗೆ ತೆರಳಿದ್ದ ಎಎಸ್‌ಐ ವೆಂಕಟಪ್ಪ ನಾಯಕ್ ಹಾಗೂ ತಂಡದ ಮೇಲೆ ಆರೋಪಿಗಳಾದ ರಾಮಪ್ಪ ಕೃಷ್ಣ (35) ಮತ್ತು ಪತ್ನಿ ಸಕ್ಕುಬಾಯಿ (30) ದೌರ್ಜನ್ಯ ಎಸಗಿದ್ದಾರೆ. ವಿಚಾರಣೆ ಸಮಯದಲ್ಲೇ ಏಕಾಏಕಿ ಕೋಪಗೊಂಡ ದಂಪತಿ ಎಎಸ್‌ಐ ಮೇಲೆ ಹಲ್ಲೆ ನಡೆಸಿ, ಅವರ ಬಟ್ಟೆ ಹರಿದು, ಮೊಬೈಲ್ ಒಡೆದು, ಕಂಬಕ್ಕೆ ಕಟ್ಟಿಹಾಕಿ ಹಿಂಸಾತ್ಮಕವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಪೊಲೀಸರ ಎದುರೇ ಮಲ್ಲಪ್ಪನ ಮಗ ರಾಘವೇಂದ್ರನನ್ನೂ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ . ಬಳಿಕ ಆರೋಪಿಗಳು ಎಎಸ್‌ಐಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆಂದು ಆರೋಪಿಸಲಾಗಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಮುದಗಲ್ ಠಾಣೆಯ ಪಿಎಸ್‌ಐ ವೆಂಕಟೇಶ್ ಅವರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದು, ಘಟನೆಯಿಂದ ಎಎಸ್‌ಐ ವೆಂಕಟಪ್ಪ ನಾಯಕ್ ಹಾಗೂ ಪಿಎಸ್‌ಐ ವೆಂಕಟೇಶ್ ಗಂಭೀರವಾಗಿ ಗಾಯಗೊಂಡು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನ ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ

ನಾಲ್ಕು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ಶಬ್ಬಿರ್ ನಗರದಲ್ಲಿ ಗ್ರಾಮಪಂಚಾಯತ್ ಸದಸ್ಯ ಖಿಜರ್ ಪಾಷ ಬರ್ಬರ ಹತ್ಯೆ ನಡೆದಿತ್ತು. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಲಿಗ್ರಾಮ ತಾಲೂಕಿನ ಹೊನ್ನೇನಹಳ್ಳಿಯ ಖಿಜರ್ ಪಾಷ, ಪ್ರಾರ್ಥನೆಗಾಗಿ ಶಬ್ಬಿರ್ ನಗರಕ್ಕೆ ಬಂದಿದ್ದರು. ಈ ವೇಳೆ ಏಜಾಜ್ ಪಾಷ ಮತ್ತು ಸಹಚರರು ಸೇರಿ ಅವರ ಹತ್ಯೆ ಮಾಡಿದ್ದರು. ಹುಣಸೂರು ಪೊಲೀಸರು ಮಹಮದ್ ಸಾದ್ (22) ಮತ್ತು ಮಹಮದ್ ರೆಹಾನ್ (21)ರನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಳಾದ ಏಜಾಜ್ ಪಾಷ, ಮುಜೀಬ್ ಮತ್ತು ಅಬ್ದುಲ್ಲಾರ ಹುಡುಕಾಟ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:39 pm, Wed, 12 November 25