ರಾಯಚೂರು ದರ್ವೇಶ್​ ಗ್ರೂಪ್​ ಕಂಪನಿ ಪ್ರಕರಣ: ಓರ್ವನ ಮನೆಯಲ್ಲಿ 2 ಕೋಟಿ ಪತ್ತೆ

| Updated By: ವಿವೇಕ ಬಿರಾದಾರ

Updated on: Jul 29, 2024 | 9:39 AM

ದರ್ವೇಶ್​ ಗ್ರೂಪ್​ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಓರ್ವ ವ್ಯಕ್ತಿಯ ಮನೆಯಲ್ಲಿ 2 ಕೋಟಿ ರೂ. ಹಣ ಪತ್ತೆಯಾಗಿದೆ. ವಂಚನೆ ಪ್ರಕರಣ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಯಚೂರು ದರ್ವೇಶ್​ ಗ್ರೂಪ್​ ಕಂಪನಿ ಪ್ರಕರಣ: ಓರ್ವನ ಮನೆಯಲ್ಲಿ 2 ಕೋಟಿ ಪತ್ತೆ
ದರ್ವೇಶ್ ಕಂಪನಿ
Follow us on

ರಾಯಚೂರು, ಜುಲೈ 29: ದರ್ವೇಶ್​ ಗ್ರೂಪ್​ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಅಧಿಕಾರಿಗಳು ಮಹಮ್ಮದ್ ಶಾಮೀದ್, ಮೋಸಿನ್, ಅಜರ್ ಅಲಿ ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ತಮಗೆ ಪರಿಚಯವಿದ್ದ ಓರ್ವ ವ್ಯಕ್ತಿಯ ಮನೆಯಲ್ಲಿ 2 ಕೋಟಿ ರೂ. ಹಣ ಇರುವುದಾಗಿ ಬಾಯಿ ಬಿಟ್ಟರು. ಆರೋಪಿಗಳು ಸೂಚಿಸಿರುವ ರಾಯಚೂರು ನಗರದ ಎಲ್.​​ಬಿ.ಎಸ್ ನಗರದಲ್ಲಿದರುವ ಓರ್ವ ವ್ಯಕ್ತಿಯ ಮನೆಯಲ್ಲಿ ಶೋಧಕಾರ್ಯ ನಡೆಸಿದಾಗ 2 ಕೋಟಿ ರೂ. ಪತ್ತೆಯಾಗಿದೆ. ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಕಂಪನಿ ಮಾಲೀಕ ಮೊಹಮ್ಮದ್ ಹುಸೇನ್ ಸುಜಾ ನಾಪತ್ತೆಯಾಗಿದ್ದಾನೆ. ಸಿಐಡಿ ಎಸ್​ಪಿ ಪುರುಷೋತ್ತಮ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಮೊಹಮ್ಮದ್​ಗಾಗಿ ಹುಡುಕಾಟ ನಡೆಸಿದ್ದಾರೆ.

ಏನಿದು ಪ್ರಕರಣ

ನಗರದ ಹೈದರಾಬಾದ್ ರಸ್ತೆಯಲ್ಲಿರುವ ದರ್ವೇಶ್ ಗ್ರೂಪ್ ಕಂಪನಿ 2022ರಿಂದ ಕಾರ್ಯನಿರ್ವಹಿಸುತ್ತಿದೆ. ಮೊಹಮ್ಮದ್ ಹುಸೇನ್ ಸುಜಾ, ಸಯ್ಯದ್ ಮಸ್ಕಿನ್ ಹಾಗೂ ಸಯ್ಯದ್ ಎಂಬುವರು ಈ ಕಂಪನಿ ನಡೆಸುತ್ತಿದ್ದರು. ಕಂಪನಿ ಶೇ10 ಹಾಗೂ 10 ಕ್ಕಿಂತ ಹೆಚ್ಚು ಬಡ್ಡಿ ನೀಡುವುದಾಗಿ ಹೇಳಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗುತ್ತಿತ್ತು.

ಇದನ್ನೂ ಓದಿ: ವಾಲ್ಮೀಕಿ ಹಗರಣ: ಇಡಿ ತನಿಖೆ ವೇಳೆ ಬಯಲಾಗ್ತಿದೆ ಹಗರಣದ ಒಂದೊಂದೇ ಸತ್ಯ

ಆಟೋ, ಕ್ಯಾಬ್ ಚಾಲಕರು, ಗಾರೆ ಕೆಲಸದವರು ಹೀಗೆ ಬಡ ವರ್ಗದ ಜನರೇ ಹೆಚ್ಚಾಗಿ ಹೂಡಿಕೆ ಮಾಡಿದ್ದರು. ಕೆಲವೊಬ್ಬರು ಮನೆಯನ್ನ ಅಡವಿಟ್ಟು, ಹಣ ತಂದು ಹೆಚ್ಚಿನ ಬಡ್ಡಿ ಆಸೆಗೆ ಹೂಡಿಕೆ ಮಾಡಿದ್ದಾರೆ. ಆದರೆ, ಕಳೆದ ಕೆಲ ತಿಂಗಳುಗಳಿಂದ ಸರಿಯಾಗಿ ಬಡ್ಡಿ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೇ ಹಣಕಾಸಿನ ವಿಚಾರವಾಗಿ ಸೋಮವಾರ ಜು.22 ರಂದು ದರ್ವೇಶ್ ಗ್ರೂಪ್ ಕಚೇರಿಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿತ್ತು. ಕಳೆದ ಕೆಲ ತಿಂಗಳುಗಳಿಂದ ದರ್ವೇಶ್ ಗ್ರೂಪ್ ಹೂಡಿಕೆದಾರರಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲವಂತೆ. ಹಣ ಹೂಡಿಕೆ ಮಾಡಿಸಿಕೊಳ್ಳೊವಾಗ ಇದ್ದ ಕಾಳಜಿ, ಇತ್ತೀಚೆಗೆ ಕಂಪನಿಗೆ ಇರಲಿಲ್ಲ. ಕಂಪನಿಯ ಮಾಲಿಕ ಜನರ ಕೈಗೆ ಸಿಗುತ್ತಿಲ್ಲ. ಇತ್ತ ತಿಂಗಳು ತಿಂಗಳು ಬಂದು ಬೀಳುತ್ತಿದ್ದ ಬಡ್ಡಿ ಕೂಡ ಬಂದಿಲ್ಲ.

ಘಟನೆ ಬಗ್ಗೆ ರಾಯಚೂರಿನ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದರ್ವೇಶ್ ಕಂಪನಿಯ ಮಾಲೀಕರಾದ ಮೊಹಮ್ಮದ್ ಹುಸೇನ್ ಸುಜಾ, ಸಯ್ಯದ್ ಮಸ್ಕಿನ್ ಹಾಗೂ ಸಯ್ಯದ್ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ