ದೇವರ ಸನ್ನಿಧಾನದ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆ: 10 ರೂ. ಟಿಕೆಟ್, 200 ರೂ. ಕೊಟ್ರೆ ಎಲ್ಲ ಖುಲ್ಲಂ ಖುಲ್ಲಾ!

ಅದು ರಾಯಚೂರು ಜಿಲ್ಲೆಯ ಸುಕ್ಷೇತ್ರವಾಗಿದ್ದು, ಅಲ್ಲಿಗೆ ಅಕ್ಕ ಪಕ್ಕದ ಜಿಲ್ಲೆ, ರಾಜ್ಯದ ಭಕ್ತರು ಕೂಡ ಬಡುತ್ತಾರೆ. ಆ ದೇವಾಲಯಕ್ಕೆ ಸೇರಿದ ಉದ್ಯಾನದಲ್ಲಿ 10 ರೂ. ಟಿಕೆಟ್ ಬದಲು, 200 ರೂ. ಕೊಟ್ಟರೆ ಏನು ಬೇಕಾದರೂ ಮಾಡಬಹುದು! ಆ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಇದೀಗ ಜೋಡಿಯೊಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.

ದೇವರ ಸನ್ನಿಧಾನದ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆ: 10 ರೂ. ಟಿಕೆಟ್, 200 ರೂ. ಕೊಟ್ರೆ ಎಲ್ಲ ಖುಲ್ಲಂ ಖುಲ್ಲಾ!
ಲಿಂಗಸುಗೂರು ಅಮರೇಶ್ವರ ದೇವಸ್ಥಾನ ಸಮೀಪದ ಉದ್ಯಾನವನ
Updated By: Ganapathi Sharma

Updated on: Jul 25, 2025 | 7:49 AM

ರಾಯಚೂರು, ಜುಲೈ 25: ದೇವರ ಸನ್ನಿಧಿ ಎಂಬುದನ್ನೂ ನೋಡದೆ ವ್ಯಕ್ತಿ ಮತ್ತು ಮಹಿಳೆ ಖುಲ್ಲಂ ಖುಲ್ಲಾಂ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯ ರಾಯಚೂರಿನ (Raichur) ಲಿಂಗಸುಗೂರು (Lingsugur) ತಾಲೂಕಿನ ದೇವರಬೂಪುರ ಗ್ರಾಮದ ಅಮರೇಶ್ವರ ದೇವಾಲಯದ (Amareshwara Temple) ಪುಣ್ಯ ಸ್ಥಳದ ಉದ್ಯಾನವನದಲ್ಲಿ ಕಂಡುಬಂದಿದೆ. ಅನೈತಿಕ ಚಟುವಟಿಕೆ ನಡೆಸಲು ಬಂದವರು ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಜನರ ವಿಶ್ರಾಂತಿಗಾಗಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಉದ್ಯಾನವನ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಉದ್ಯಾನಕ್ಕೆ ಪ್ರವೇಶದರ 10 ರೂಪಾಯಿ ಇದೆ. ಆದರೆ 200 ರೂಪಾಯಿ ಕೊಟ್ಟರೆ ಇಲ್ಲಿ ಏನ್‌ಬೇಕಾದ್ರೂ ಮಾಡಬಹುದಾಗಿದೆ ಎಂಬ ಆರೋಪವಿದೆ. ಇದೀಗ ಜೋಡಿಯೊಂದು ಅನೈತಿಕ ಚಟುವಟಿಕೆ ವೇಳೆ ರೆಡ್​​​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಆರೋಪಗಳಿಗೆ ಪುಷ್ಟಿ ನೀಡಿದೆ.

ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕನ್ನಡ ಸಂಘಟನೆ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಅನೈತಿಕ ಚಟುವಟಿಕೆಯ ವಿಡಿಯೋ ಸಮೇತ ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ದೂರು ನೀಡಿದೆ. ಕೆಡಿಪಿ ಸಭೆಯಲ್ಲೂ ಈ ವಿಚಾರ ಸದ್ದು ಮಾಡಿದೆ. ಆದರೆ ಅರಣ್ಯ ಇಲಾಖೆ ಡಿಸಿಎಫ್‌ ಪ್ರವೀಣ್ ಹಾರಿಕೆಯ ಉತ್ತರ ನೀಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ದೂರಿನಲ್ಲಿ ಏನಿದೆ?

ಈ ಭಾಗದ ಆರಾಧ್ಯ ಧೈವ ಶ್ರೀ ಅಮರೇಶ್ವರ ಇಡೀ ಜಿಲ್ಲೆಗೆ ಹೆಸರು ವಾಸಿಯಾದ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ವಿಶ್ರಾಂತಿಗಾಗಿ ಈ ಹಿಂದೆ ದೈವಿ ಉದ್ಯಾನವನ ನಿರ್ಮಿಸಲಾಗಿತ್ತು, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ದೈವಿವನದಲ್ಲಿ ಅನೈತಿಕ ಚಟುವಟಿಕೆ, ವೇಶವಾಟಿಕೆಯಂತಹ ಚಟುವಟಿಕೆಗಳ ತಾಣವಾಗಿ ಮಾರ್ಪಟಿದೆ. ದೈವ ಭಕ್ತರ ಸ್ಥಳದಲ್ಲಿ ವೇಶವಾಟಿಕೆ ಮಾಡುತ್ತಿರುವುದು ಭಕ್ತರು ತಲೆತಗ್ಗಿಸುವಂತಹ ವಿಷಯವಾಗಿದೆ. ಅಲ್ಲದೇ ಈ ವನದಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರ ಪವಾಡೆಪ್ಪ ತಂ/ ಗಂಗಪ್ಪ ಶರಣ ಸಾ। ಗುಂತಗೋಳ ಇವರು ಉದ್ಯಾನವನಕ್ಕೆ ಬರುವ ಭಕ್ತರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾನೆ. ಹಣ ವಸೂಲಿಗೆ ಯಾವುದೇ ತರಹದ ಚೀಟಿ ನೀಡುವುದಿಲ್ಲ. ತಾನೇ ಅಧಿಕಾರಿಯಂತೆ ವರ್ತಿಸುತ್ತಿದ್ದಾನೆ. ಅಲ್ಲದೇ ಉದ್ಯಾನವನದಲ್ಲಿ ಕುರಿ. ಮೇಕೆಗಳನ್ನು ಮೇಯಿಸಲು ಬೀಡುತ್ತಿರುವುದು ಎಷ್ಟು ಸರಿ, ಈತನ ಕಾರಣದಿಂದಾಗಿ ಉದ್ಯಾನವನ ಹಾಳು ಉದ್ಯಾನವವಾಗಿ ಮಾರ್ಪಟಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ದೂರಿನಲ್ಲಿ ಉಲ್ಲೇಖಿಸಿದೆ.

ದೇಗುಲ ಸಮೀಪದ ಉದ್ಯಾನವನದಲ್ಲಿ ವೇಶ್ಯಾವಾಟಿಕೆ!

ದೈವಿಕವಾದ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆ, ವೇಶ್ಯಾವಾಟಿಕೆ ಚಟುವಟಿಕೆಗಳಿಗೆ ನಡೆಸಲು ಕಾವಲುಗಾರನಾಗಿ ಅವರಿಂದ 200 ರಿಂದ 300 ಹಣ ಪಡೆಯುತ್ತಿದ್ದಾನೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇವರೇ ಈ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಉದ್ಯಾನವನದಲ್ಲಿ ಆನೈತಿಕ ಹಾಗೂ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿರುವ ಹಾಗೂ ಭಕ್ತರಿಂದ ಹಣ ವಸೂಲಿ ಮಾಡುತ್ತಿರುವ ಸದರಿ ಸಿಬ್ಬಂದಿಯನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಬೇಕು ಹಾಗೂ ಇದಕ್ಕೆ ಬೆಂಬಲ ನೀಡುವ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ತಮ್ಮ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಈ ಮೂಲಕ ಎಚ್ಚರಿಸುತ್ತೇವೆ ಎಂಬುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ಪತಿ ತಾತಪ್ಪನಿಗೆ ಸಂಕಷ್ಟ!

ಮತ್ತೊಂದೆಡೆ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸದಸ್ಯ ಪಾಮನ್ನ ಮುರಾರಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಏನೇ ಇರಲಿ, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಉದ್ಯಾನವನದ ರಕ್ಷಣೆ ಮಾಡಬೇಕಿದೆ. ದಂಧೆಗೆ ಅವಕಾಶ ಮಾಡಿಕೊಡ್ತಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ