
ರಾಯಚೂರು, (ಡಿಸೆಂಬರ್ 12): ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯ ನಾಟಕವಾಡಿ ಮೋಸ ಮಾಡಿದ ಆರೋಪದ ಮೇಲೆ ಯುವಕನೊಬ್ಬನ ಅದ್ಧೂರಿ ಮದುವೆಯನ್ನು (Marriage) ಸಂತ್ರಸ್ತ ಯುವತಿ ನಿಲ್ಲಿಸಿದ ಘಟನೆ ರಾಯಚೂರು (Raichur) ನಗರದಲ್ಲಿ ನಡೆದಿದೆ. ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ರಿಷಬ್, ಕೊಪ್ಪಳದ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸಿ ಕೈಕೊಟ್ಟಿದ್ದು, ಇದೀಗ ಬೇರೆ ಯುವತಿ ಜತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಯಿಸಿ ಸ್ಥಳಕ್ಕೆ ಬಂದು ಇಂದು(ಡಿಸೆಂಬರ್ 12) ನಡೆಯಬೇಕಿದ್ದ ಮದುವೆ ನಿಲ್ಲಿಸಿದ್ದಾಳೆ. ಸದ್ಯ ಪ್ರಿಯಕರನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ರಾಯಚೂರು ಮೂಲದ ರಿಷಬ್. ಸಂತ್ರಸ್ತ ಯುವತಿ ಕೊಪ್ಪಳ ಮೂಲದವರಾಗಿದ್ದು, ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಇಬ್ಬರ ಪರಿಚಯವಾಗಿದೆ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆ ಬಳಿಕ ಪ್ರೀತಿಯ ಹೆಸರಿನಲ್ಲಿ ಯುವಕ ರಿಷಬ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹೀಗಾಗಿ ಯುವತಿ ಗರ್ಭಿಣಿಯಾಗಿದ್ದು, ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಪ್ರೇಯಿಸಿ ಗಂಭೀರ ಆರೋಪ ಮಾಡಿದ್ದಾಳೆ. ಬಳಿಕ ಆರೋಪಿ ರಿಷಬ್ ದೇವಸ್ಥಾನವೊಂದರಲ್ಲಿ ಯುವತಿಯನ್ನು ಮದುವೆಯಾಗಿದ್ದಾನೆ. ಆದರೆ, ನಂತರ ಆಕೆಯನ್ನು ಕಡೆಗಣಿಸಿ ಬೇರೊಂದು ಯುವತಿ ಜೊತೆ ಮದುವೆಯಾಗಲು ಮುಂದಾಗಿದ್ದಾನೆ. ಹೀಗಂತ ಸಂತ್ರಸ್ತೆ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ರಿಷಬ್ ಇಂದು (ಡಿಸೆಂಬರ್ 12) ರಾಯಚೂರು ನಗರದಲ್ಲಿ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ಸಕಲ ಸಿದ್ಧತೆ ಮಾಡಿಕೊಂಡಿದ್ದ. ಎಲ್ಲ ಸಂಬಂಧಿಕರು ಸಹ ಸೇರಿದ್ದು, ಮನೆಯಲ್ಲಿ ಮದುವೆ ಸಂಭ್ರಮ ಮಾಡಿತ್ತು. ಆದ್ರೆ, ಮತ್ತೊಂದೆಡೆ ರಿಷಬ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ನೋಡಿ ಕೂಡಲೇ ಕೊಪ್ಪಳದಿಂದ ನೇರವಾಗಿ ರಾಯಚೂರಿಗೆ ಓಡೋಡಿ ಬಂದಿದ್ದಾಳೆ. ಇನ್ನೇನು ರಿಷಬ್ ತಾಳಿ ಕಟ್ಟುವ ಶುಭ ವೇಳೆಯಲ್ಲೇ ಪ್ರೇಯಿಸಿ ಎಂಟ್ರಿ ಕೊಟ್ಟಿದ್ದು, ಮದುವೆ ನಿಲ್ಲಿಸಿದ್ದಾಳೆ.
ಬಳಿಕ ಯುವತಿ ರಿಷಬ್ ಅಸಲಿ ಮುಖವನ್ನು ಆತನ ಕುಟುಂಬದ ಸದಸ್ಯರು ಹಾಗೂ ಮದ್ವೆಗೆ ಬಂದಿದ್ದವರ ಮುಂದೆ ಬಿಚ್ಚಿಟ್ಟಿದ್ದಾಳೆ. ಇದರಿಂದ ಸದ್ಯಕ್ಕೆ ಮದುವೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದ್ದು, ಇದು ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.