
ರಾಯಚೂರು, ಜೂನ್ 09: ತಾಂತ್ರಿಕತೆ ಬೆಳೆದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಅಪರಿಚಿತರ ಮಾತನ್ನು ನಂಬಿ ಯುಪಿಐ (UPI) ಮೂಲಕ ಹಣ ಪಡೆದು ನಗದು (Cash) ನೀಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹದೇ ಒಂದು ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಅರಕೇರಾ ಪಟ್ಟಣದಲ್ಲಿ ನಡೆದಿದ್ದು, ಕಮಿಷನ್ ಆಸೆ ಹಾಗೂ ಮಾನವೀಯತೆ ದೃಷ್ಟಿಯಿಂದ ಅಪರಿಚಿತರಿಗೆ ಸಹಾಯ ಮಾಡಲು ಹೋದ ಯುವಕರು ಈಗ ಸೈಬರ್ ಪೊಲೀಸರ ವಿಚಾರಣೆಗೆ ಬೆಚ್ಚಿಬಿದ್ದಿದ್ದಾರೆ.
ಅರಕೇರಾ ಪಟ್ಟಣದಲ್ಲಿ ಕಾಮನ್ ಸರ್ವಿಸ್ ಸೆಂಟರ್ (CSC) ನಡೆಸುತ್ತಿದ್ದ ಮಲ್ಲಿಕಾರ್ಜುನ, ಮಹಾಂತೇಶ್ ಸೇರಿದಂತೆ ಮೂವರು ಯುವಕರ ತಂಡವೇ ಈ ವಂಚನೆಗೆ ಒಳಗಾಗಿದೆ. ಇತ್ತೀಚೆಗೆ ಇವರ ಕೇಂದ್ರಗಳಿಗೆ ಬಂದಿದ್ದ ಇಬ್ಬರು ಅಪರಿಚಿತರು, ತಮಗೆ ಮೆಡಿಕಲ್ ಎಮರ್ಜನ್ಸಿ ಇದೆ ಎಂದು ನಂಬಿಸಿದ್ದಾರೆ. ತಮ್ಮ ಫೋನ್ ಪೇ ಮೂಲಕ ಸಿಎಸ್‌ಸಿ ಕೇಂದ್ರದ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಹೇಳಿ, ಅದಕ್ಕೆ ಪ್ರತಿಯಾಗಿ ನಗದು ಹಣ ನೀಡುವಂತೆ ವಿನಂತಿಸಿದ್ದಾರೆ. ಜೊತೆಗೆ 1,000 ರೂಪಾಯಿಗೆ 10 ರೂಪಾಯಿ ಕಮಿಷನ್ ನೀಡುವುದಾಗಿಯೂ ಆಮಿಷ ಒಡ್ಡಿದ್ದಾರೆ.
ಇದನ್ನು ನಂಬಿದ ಯುವಕರು ಒಟ್ಟು ಮೂರು ಮಳಿಗೆಗಳಿಂದ ಸುಮಾರು 2.5 ಲಕ್ಷ ರೂಪಾಯಿ ಹಣದ ಟ್ರಾನ್ಸಾಕ್ಷನ್ ಮಾಡಿಸಿಕೊಂಡು, ಕಳ್ಳರಿಗೆ ನಗದು ಕೊಟ್ಟಿದ್ದಾರೆ. ಆದರೆ, ಆ ಇಬ್ಬರು ವ್ಯಕ್ತಿಗಳು ಕದ್ದ ಮೊಬೈಲ್‌ನಿಂದ ಯುಪಿಐ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ ಎಂಬ ಸತ್ಯ ಯುವಕರಿಗೆ ತಿಳಿದಿರಲಿಲ್ಲ.
ಮೇ 25 ರಂದು ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ರಾಂಬಾಬು ಎಂಬುವವರ ಮೊಬೈಲ್ ಅನ್ನು ಬಸ್ ಹತ್ತುವ ವೇಳೆ ಕಳ್ಳರು ಕದ್ದಿದ್ದರು. ಮೊಬೈಲ್ ಕದ್ದ ಕೆಲವೇ ಗಂಟೆಗಳಲ್ಲಿ ಕಳ್ಳರು ಅರಕೇರಾದ ಸಿಎಸ್‌ಸಿ ಕೇಂದ್ರಗಳಲ್ಲಿ ರಾಂಬಾಬು ಅವರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸರಣಿ ಹಣ ಕಡಿತಗೊಂಡ ಮೆಸೇಜ್ ನೋಡಿ ಗಾಬರಿಯಾದ ರಾಂಬಾಬು ತಕ್ಷಣ ಸದರ ಬಜಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಹಣ ವರ್ಗಾವಣೆಯಾದ ಅರಕೇರಾ ಸಿಎಸ್‌ಸಿ ಕೇಂದ್ರದ ಹುಡುಗರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆಗ ತಮಗೆ ಆ ವ್ಯಕ್ತಿಗಳು ಯಾರೆಂದೇ ಗೊತ್ತಿಲ್ಲ ಎಂದು ಯುವಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಹಣ ಕಳೆದುಕೊಂಡ ರಾಂಬಾಬು ಹಾಗೂ ಅಪರಿಚಿತರಿಂದ ಹಣ ಹಾಕಿಸಿಕೊಂಡು ನಗದು ಕೊಟ್ಟ ಮಲ್ಲಿಕಾರ್ಜುನ್, ಮಹಾಂತೇಶ್ ಸೇರಿದಂತೆ ಇತರರ ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ (Freeze) ಮಾಡಿದ್ದಾರೆ.
ಇದನ್ನೂ ಓದಿ Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ!
ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿರುವುದರಿಂದ ಸಿಎಸ್‌ಸಿ ಕೇಂದ್ರದ ಯುವಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸದರ ಬಜಾರ್ ಪೊಲೀಸರು ಸದ್ಯ ಮೊಬೈಲ್ ಕಳ್ಳರ ಪತ್ತೆಗೆ ಜಾಲ ಬೀಸಿದ್ದು, ಸಾರ್ವಜನಿಕರು ಇಂತಹ ಆನ್‌ಲೈನ್ ನಗದು ವ್ಯವಹಾರಗಳ ಜೂಜಾಟಕ್ಕೆ ಬೀಳದಂತೆ ಮತ್ತು ಅಪರಿಚಿತರ ಫೋನ್ ಪೇ ನಂಬಿ ನಗದು ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.