ರಾಯಚೂರು: ನಗರದ ಗಾಜಗಾರಪೇಟೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ವಿನೂತನ ಕೆಲಸ ನಡೆಯುತ್ತಿದೆ. ಹೌದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್(Project Manager) ಆಗಿರುವ ಕಾಡ್ಲೂರು ರಂಗರಾವ್ ದೇಸಾಯಿ ಅನ್ನೋರು ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಚಿನ್ನರ ಲೈಬ್ರರಿ ಶುರು ಮಾಡಿದ್ದಾರೆ. ನಗರದ ಗಾಜಗಾರಪೇಟೆಯಲ್ಲಿರುವ ತಮ್ಮ ಹಳೆಯ ಕಟ್ಟಡದಲ್ಲಿ ಮಕ್ಕಳಿಗಾಗಿಯೇ ಮಿನಿ ಗ್ರಂಥಾಲಯವನ್ನ ಪ್ರಾರಂಭಿಸಿದ್ದಾರೆ. ರಾಯಚೂರಿನಲ್ಲಿಯೇ ಮೊದಲೇ ಉರಿ ಬಿಸಿಲು 40 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವಿದೆ. ಹೀಗಾಗಿ ಇಲ್ಲಿನ ಮಕ್ಕಳು ಬಿಸಲಿನಲ್ಲಿ ಓಡಾಡೋದನ್ನು, ಮನೆಯಲ್ಲಿದ್ದಾಗ ಟಿವಿ, ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಹೀಗಾಗಿ ಅದನ್ನು ತಪ್ಪಿಸಲು ರಂಗಾರಾವ್ ದೇಸಾಯಿ, ಮಕ್ಕಳಿಗೆ ಕಲಿಕಾಸಕ್ತಿ ಹೆಚ್ಚಿಸಲು, ಒಂದು ಗಂಟೆ ಓದಿದರೇ ಒಂದು ಗಿಫ್ಟ್ ಅನ್ನೊ ವಿನೂತನವಾದ ಕಾನ್ಸೆಪ್ಟ್ ಶುರು ಮಾಡಿದ್ದಾರೆ.
ರಂಗಾರಾವ್ ದೇಸಾಯಿ ಅವರು ತಮ್ಮ ಗ್ರಂಥಾಲಯದಲ್ಲಿ ಮಹಾನ್ ಸಾಧಕರು, ಮಹಾನ್ ಚೇತನರು ಸೇರಿ ವಿವಿಧ ವಿಭಾಗಗಳ ಸಾಧಕರ ಪುಸ್ತಗಳನ್ನ ಸಂಗ್ರಹಿಸಿದ್ದಾರೆ. ಸುಮಾರು 800 ಕ್ಕೂ ಹೆಚ್ಚು ಪುಸ್ತಕಗಳನ್ನು ಜೋಡಣೆ ಮಾಡಿದ್ದು, ವಿವಿಧ ಬ್ಯಾಚ್ಗಳ ಮೂಲಕ ಮಕ್ಕಳು ಗ್ರಂಥಾಲಯಕ್ಕೆ ಆಗಮಿಸುತ್ತಿದ್ದಾರೆ. ಒಂದು ಗಂಟೆ ಅವಧಿಯಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ಮಕ್ಕಳು ತಮ್ಮಿಷ್ಟದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ 50 ನಿಮಿಷಗಳಲ್ಲಿ 50-60 ಪುಟಗಳ ಪುಸ್ತಕವನ್ನು ಓದಿ ಮುಗಿಸಬೇಕು. ಹೀಗೆ ಒಂದು ಗಂಟೆ ಓದಿನ ಬಳಿಕ ತಮ್ಮಿಷ್ಟದ ಒಂದು ಗಿಫ್ಟ್ ಪಡೆಯಬಹುದು. ವಾಟರ್ ಬಾಟಲ್, ಪೇಂಟ್ ಬಾಕ್ಸ್, ಗಾಳಿಪಟ, ಕ್ರಿಕೆಟ್ ಬಾಲ್, ಕ್ಯಾಪ್ ಸೇರಿ ವಿವಿಧ ಬಗೆಯ ಗಿಫ್ಟ್ ಗಳನ್ನು ಕೊಡಲಾಗುತ್ತಿದೆ.
ಇದನ್ನೂ ಓದಿ:ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶಗಳ 172 ಗ್ರಂಥಾಲಯಗಳಿಗೆ ಡಿಜಿಟಲ್ ಟಚ್
ಹೀಗೆ ರಂಗಾರಾವ್ ದೇಸಾಯಿ ಅವರು ಈ ಹಿಂದೆ ಕೊರೋನ ಸಂದರ್ಭದಲ್ಲೂ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಮಾಡಿ, ಸೈ ಎನಿಸಿಕೊಂಡಿದ್ರು. ಈಗ ಮತ್ತೆ ಚಿನ್ನರಿಗಾಗಿ ಕಲಿಕೆ ಜೊತೆ ಗಳಿಕೆ ಅನ್ನೊ ಈ ಟಾಸ್ಕ್ ಶುರು ಮಾಡಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳು ಇಲ್ಲಿ ಓದಿ, ಗಿಫ್ಟ್ ಪಡೆದುಕೊಂಡಿದ್ದಾರೆ. ಜೊತೆಗೆ ನಿತ್ಯ ಸಾಕಷ್ಟು ಮಕ್ಕಳು ಗ್ರಂಥಾಲಯದತ್ತ ಮುಖ ಮಾಡುತ್ತಿದ್ದು, ಈ ನೂತನ ಕಾರ್ಯಕ್ರಮ ಸಕ್ಸಸ್ ಆಗಿದೆ.
ವರದಿ: ಭೀಮೇಶ್ ಟಿವಿ9 ರಾಯಚೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ