
ರಾಯಚೂರು, ಅಕ್ಟೋಬರ್ 25: ನಗರದ ಮಂತ್ರಾಲಯ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಹೂಳಲಾದ ಮೃತದೇಹಗಳ ಮಾರಾಟ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿವೆ. ದಂಧೆಕೋರರು ಇತ್ತೀಚಿನ ಮತ್ತು ಹಳೆಯ ಮೃತದೇಹಗಳ ಆಧಾರದಲ್ಲಿ ರೇಟ್ ಫಿಕ್ಸ್ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಕೆಲವೊಮ್ಮೆ ರಸ್ತೆಗಳಲ್ಲಿ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದನ್ನ ಸ್ಥಳೀಯರು ಗಮನಿಸಿದ್ದರು, ಹಲವು ವರ್ಷಗಳಿಂದ ಮೃತದೇಹ ಪಡೆಯುತ್ತಿದ್ದ ಬಗ್ಗೆ ಖಾಸಗಿ ಕಾಲೇಜು ಸಿಬ್ಬಂದಿ ಕೂಡ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಆರೋಪಿಗಳು ಈ ದಂಧೆಯನ್ನು ಎಷ್ಟು ಅಚ್ಚುಕಟ್ಟಾಗಿ ನಡೆಸುತ್ತಿದ್ದರು ಎಂದರೆ ಮೃತದೇಹಗಳನ್ನ ತೆಗೆದ ಬಳಿಕ ಗುಂಡಿಯನ್ನು ಮತ್ತೆ ಮಣ್ಣು ಹಾಕಿ ಮುಚ್ಚಲಾಗುತ್ತಿತ್ತು. ಹೀಗಾಗಿ ಸಮಾಧಿಯ ಒಳಗಡೆ ಮೃತದೇಹ ಇಲ್ಲ ಎಂಬುದೇ ಗೊತ್ತಿರದೆ ಕೆಲವು ಕುಟುಂಬಸ್ಥರು ಪೂಜೆಗಳನ್ನು ಕೂಡ ನೆರವೇರಿಸಿದ್ದಾರೆ. ಇದರಿಂದಾಗಿ ಆ ಕುಟುಂಬಗಳ ಭಾವನೆಗಳಿಗೂ ಧಕ್ಕೆ ಆಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ನೇತಾಜಿನಗರ ಪೊಲೀಸರು ಸ್ಮಶಾನದ ಸಹಾಯಕ ವಿರೇಶ್, ಖಾಸಗಿ ಮೆಡಿಕಲ್ ಕಾಲೇಜು ಸಿಬ್ಬಂದಿ ರಾಜು ಹಾಗೂ ಅಪ್ಸರ್ ಎಂಬವರನ್ನು ಅದಾಗಲೇ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವ ದಂಧೆ ಬೆಳಕಿಗೆ: ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳ ಅಕ್ರಮ ಸಾಗಾಟ, ಮಾರಾಟ
ಈ ಕರಾಳ ದಂಧೆಯಿಂದಾಗಿ ದೆವ್ವ-ಭೂತಗಳಿವೆ ಎಂಬ ಗಾಳಿ ಸುದ್ದಿ ಹರಡಿದ್ದು, ರುದ್ರಭೂಮಿಯ ಸಮೀಪದ ಸ್ಥಳಗಳಲ್ಲಿನ ಮನೆಗಳಿಗೆ ಬಾಡಿಗೆಗೆ ಬರಲೂ ಜನರು ಹೆದರುತ್ತಿದ್ದಾರೆ. ಹಾಲಿ ವಾಸವಿರುವವರೂ ಮನೆಗಳನ್ನು ಖಾಲಿಮಾಡಿಕೊಂಡು ತೆರಳುತ್ತಿದ್ದಾರೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ. ದಂಧೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಯಚೂರು ಎಸ್ಪಿ ಅರುಣಾಂಗ್ಷು ಗಿರಿ, ಸ್ಮಶಾನದಲ್ಲಿನ ಮೃತದೇಹಗಳ ಕಳ್ಳತನದ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಈ ಸಂಬಂಧ ಮೂವರು ಶಂಕಿತರನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗ್ತಿದೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.