ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವ ದಂಧೆ ಬೆಳಕಿಗೆ: ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳ ಅಕ್ರಮ ಸಾಗಾಟ, ಮಾರಾಟ
ಸ್ಮಶಾನ ಅಂದರೆ ಅಂತ್ಯಕ್ರಿಯೆ ನಡೆಸಿ ಮೃತರಿಗೆ ಅಂತಿಮ ವಿದಾಯ ಹೇಳುವ ಸ್ಥಳ. ಆದರೆ ಇಂತಹ ಸ್ಮಶಾನದಲ್ಲಿ ಮೃತದೇಹಗಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಈ ವಿಚಾರ ರಾಯಚೂರಿನಲ್ಲಿ ಸಂಚಲನ ಮೂಡಿಸಿದೆ. ಸ್ಥಳೀಯರೇ ಈ ದಂಧೆಯನ್ನು ಬಯಲು ಮಾಡಿದ್ದಾರೆ.

ಮುಖ್ಯಾಂಶಗಳು
- ಮೃತದೇಹಗಳು ಹಾಗೂ ಅಸ್ತಿಪಂಜರಗಳ ಅಕ್ರಮ ಸಾಗಾಟ
- ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ದಂಧೆ ಬೆಳಕಿಗೆ
- ನೇತಾಜಿನಗರ ಪೊಲೀಸ್ರಿಂದ ಮೂವರ ಬಂಧನ
ರಾಯಚೂರು, ಅಕ್ಟೋಬರ್ 24: ಸ್ಮಶಾನದಲ್ಲಿ ಹೂಳಲಾಗಿರುವ ಮೃತದೇಹಗಳು ಹಾಗೂ ಅಸ್ತಿಪಂಜರಗಳನ್ನ ಅಕ್ರಮವಾಗಿ ಖಾಸಗಿ ಮೆಡಿಕಲ್ ಕಾಲೇಜಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಆ ಮೂಲಕ ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವ ದಂಧೆಯೊಂದು ಬೆಳಕಿಗೆ ಬಂದಿದೆ. ಕೇವಲ 500 ರೂ.ಗೆ ಸ್ಮಶಾನದ ಸಿಬ್ಬಂದಿ ಮೃತದೇಹಗಳನ್ನ ಮಾರಾಟ ಮಾಡುತ್ತಿದ್ದು, ಸ್ಥಳೀಯರೇ ರೆಡ್ ಹ್ಯಾಂಡ್ ಆಗಿ ದಂಧೆಯನ್ನು ಬಯಲಿಗೆಳೆದಿದ್ದಾರೆ.
ಕೇವಲ 200ರಿಂದ 500 ರೂ.ಗೆ ಮೃತದೇಹಗಳ ಮಾರಾಟ
ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಈ ದಂಧೆ ಬೆಳಕಿಗೆ ಬಂದಿದೆ. ಅಂತ್ಯಕ್ರಿಯೆ ನಡೆಸಿ ಹೂಳಲಾಗಿರುವ ಮೃತದೇಹಗಳನ್ನ ಖಾಸಗಿ ಮೆಡಿಕಲ್ ಕಾಲೇಜಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮೃತದೇಹಗಳನ್ನ ಹೊರತೆಗೆದು ದೊಡ್ಡ ದೊಡ್ಡ ಕಲ್ಲುಗಳಿಂದ ತುಂಡರಸಿ, ಅಂಗಾಂಗಗಳನ್ನೂ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ರಾಯಚೂರು ಓಪೆಕ್ ಆಸ್ಪತ್ರೆ ನಿರ್ಲಕ್ಷ್ಯ; ಗಾಯಾಳು ಮಹಿಳೆಯ ತಲೆಯಲ್ಲಿ ಹುಳುಗಳು ಪತ್ತೆ!
ಮೃತದೇಹಗಳ ಅಂಗಾಂಗಗಳನ್ನ ಬೇರ್ಪಡಿಸುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದು, ನೋಡಿದರೆ ಎದೆ ಝಲ್ಲೆನ್ನುತ್ತೆ. ಇನ್ನೊಂದು ಆಘಾತಕಾರಿ ವಿಚಾರವೆಂದರೆ, ಮೃತದೇಹಗಳನ್ನ ಕೇವಲ 200ರಿಂದ 500 ರೂ.ಗೆ, ಮಾರಾಟ ಮಾಡುತ್ತಿದ್ದರು. ಹೀಗೆ ಮಾರಾಟ ಮಾಡಿದ ಮೃತದೇಹಗಳನ್ನ ಮೆಡಿಕಲ್ ವಿದ್ಯಾರ್ಥಿಗಳಿಂದ ಬಳಕೆ ಆರೋಪವು ಕೇಳಿಬಂದಿದೆ.
ಮೂವರ ಬಂಧನ
ಇನ್ನು ಸ್ಥಳೀಯರೇ ರೆಡ್ ಹ್ಯಾಂಡ್ ಆಗಿ ಈ ಕೃತ್ಯವನ್ನ ಬಯಲಿಗೆಳೆದಿದ್ದು, ಖಾಸಗಿ ಮೆಡಿಕಲ್ ಕಾಲೇಜಿನ ಇಬ್ಬರು ಸಿಬ್ಬಂದಿ ಹಾಗೂ ಸ್ಮಶಾನದ ಸಿಬ್ಬಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಮಶಾನದ ಸಿಬ್ಬಂದಿ ವಿರೇಶ್ ಈ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಅದೇ ರೀತಿಯಾಗಿ ಖಾಸಗಿ ಮೆಡಿಕಲ್ ಕಾಲೇಜು ಸಿಬ್ಬಂದಿ ರಾಜು ಹಾಗೂ ಅಪ್ಸರ್ ಕೂಡ ಮೃತದೇಹಗಳನ್ನ ತೆಗೆದುಕೊಂಡು ಹೋಗುತ್ತಿದ್ದೆವು ಅಂತ ತಪ್ಪೊಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ರಾಯಚೂರು: ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳನ್ನು ತಿಪ್ಪೆ ರಾಶಿಗೆ ಎಸೆದ ಸಿಬ್ಬಂದಿ!
ಇತ್ತ ಘಟನೆ ಬೆಳಕಿಗೆ ಬರುತ್ತಿದ್ದಂತೆ ನೇತಾಜಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ದಂಧೆ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಪಟ್ಟುಹಿಡಿದಿದ್ದಾರೆ. ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




