ಗಣಿಗಳಲ್ಲಿ 15 ದಿನಕ್ಕೊಮ್ಮೆ ಅಧಿಕಾರಿಗಳಿಂದ ಸ್ಫೋಟಕಗಳ ಪರಿಶೀಲನೆ: ಬಸವರಾಜ ಬೊಮ್ಮಾಯಿ

ಗಣಿಗಳಲ್ಲಿ 15 ದಿನಕ್ಕೊಮ್ಮೆ ಅಧಿಕಾರಿಗಳಿಂದ ಸ್ಫೋಟಕಗಳ ಪರಿಶೀಲನೆ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಈ ಹಿಂದೆ ಮೂರು ತಿಂಗಳಿಗೆ ಒಮ್ಮೆ ಗಣಿಗಳಲ್ಲಿ ಸ್ಫೋಟಕಗಳನ್ನು ಪರಿಶೀಲಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Ghanashyam D M | ಡಿ.ಎಂ.ಘನಶ್ಯಾಮ

|

Feb 25, 2021 | 9:33 PM

ದಾವಣಗೆರೆ: ರಾಜ್ಯದ ಗಣಿಗಳಲ್ಲಿ ನಿಯಮಬಾಹಿರವಾಗಿ ಸ್ಫೋಟಕಗಳನ್ನು ಬಳಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ. ಈ ಕುರಿತು ಖನಿಜ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಚರ್ಚಿಸಿದ್ದೇನೆ. ವಿಶೇಷ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಈ ಹಿಂದೆ ಮೂರು ತಿಂಗಳಿಗೆ ಒಮ್ಮೆ ಗಣಿಗಳಲ್ಲಿ ಸ್ಫೋಟಕಗಳನ್ನು ಪರಿಶೀಲಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸುವ ಪ್ರದೇಶಗಳ ಮೇಲೆ ನಿಯಮಿತವಾಗಿ ದಾಳಿ ನಡೆಸಲಾಗುವುದು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರು ತಪಾಸಣೆ ನಡೆಸುತ್ತಾರೆ. ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಿಸಿ ದೊಡ್ಡ ಅನಾಹುತಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಸ್ಫೋಟಕಗಳನ್ನು ಬಳಸಲು ಪರವಾನಗಿ ಇರುವವರೇ ಅಕ್ರಮವಾಗಿ, ನಿಯಮಬಾಹಿರವಾಗಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

ಸ್ಫೋಟಕಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಕ್ರಮವಾಗಿ ಸ್ಫೋಟಕಗಳನ್ನು ಬಳಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.

ಮೀಸಲಾತಿ: ಕಾನೂನು ತಜ್ಞರ ಜೊತೆಗೆ ಸಿಎಂ ಚರ್ಚೆ ಮೀಸಲಾತಿ ವಿಚಾರವಾಗಿ ಕಾನೂನು ತಜ್ಞರ ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ಹಲವು ಸಮುದಾಯಗಳು ಮೀಸಲಾತಿಗಾಗಿ ಮನವಿ ಸಲ್ಲಿಸಿವೆ. ಆದರೆ ಮೀಸಲಾತಿಯನ್ನು ಒಂದು ಮಿತಿಯಲ್ಲಿಯೇ ಇರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸಹ ತೀರ್ಪು ನೀಡಿದೆ ಎಂದು ಬೊಮ್ಮಾಯಿ ನೆನಪಿಸಿಕೊಂಡರು.

ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಶೇ 50 ಮೀರಿರುವುದನ್ನು ಪ್ರಸ್ತಾಪಿಸಿದ ಅವರು, ಕೇಂದ್ರದಲ್ಲಿ ಎಸ್​ಸಿ, ಎಸ್​ಟಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆಯೋಗಗಳಿವೆ. ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಆಯೋಗವೂ ಕೇಂದ್ರದಲ್ಲಿದೆ. ಈ ಆಯೋಗಗಳಿಗೆ ಮನವಿ ಸಲ್ಲಿಸಿ, ಸೂಕ್ತ ಸಲಹೆ ಪಡೆಯಲಾಗುವುದು. ಈಗ ಮನವಿ ಸಲ್ಲಿಸಿರುವ ಜಾತಿಗಳಿಗೆ ಸೂಕ್ತ ನ್ಯಾಯ ಒದಗಿಸುವ ಬಗ್ಗೆ ಮುಖ್ಯಮಂತ್ರಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬೊಮ್ಮಾಯಿ ತಿಳಿಸಿದರು.

ಚಿಕ್ಕಬಳ್ಳಾಪುರ ಕ್ವಾರಿ ಸ್ಫೋಟ: ಮುಖ್ಯ ಆರೋಪಿ ಬಂಧನ ಚಿಕ್ಕಬಳ್ಳಾಪುರ ವರದಿ: ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಗವೇಲಿ ಗ್ರಾಮದ ಬಳಿ ಸಂಭವಿಸಿದ್ದ ಜೆಲೆಟಿನ್ ಸ್ಫೋಟದ ಪ್ರಮುಖ ಆರೋಪಿ ಜಿ.ಎಸ್​.ನಾಗರಾಜ್​ನನ್ನು ಪೊಲೀಸರು ಗುರುವಾರ ಬಂಧಿಸಿದ್ದರು. ಆರೋಪಿಯ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ ಸೇರಿದಂತೆ ಐಪಿಸಿಯ ಹಲವು ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿದ್ದರು. ಸದ್ಯ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕ್ವಾರಿ ಮಾಲೀಕರಾದ ರಾಘವೇಂದ್ರ ರೆಡ್ಡಿ, ವೆಂಕಟಶಿವಾರೆಡ್ಡಿ, ಮ್ಯಾನೇಜರ್ ಪ್ರವೀಣ್ ಹಾಗೂ ಚಾಲಕ ರಿಯಾಜ್​ ಅವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್ ಮಂಜುನಾಥ್, ಸಬ್ ಇನ್​ಸ್ಪೆಕ್ಟರ್ ಗೋಪಾಲ ರೆಡ್ಡಿ ಅವರನ್ನು ಐಜಿಪಿ ಚಂದ್ರಶೇಖರ್ ಅಮಾನತು ಮಾಡಿದ್ದರು.

ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣ ಮಾಸುವ ಮುನ್ನವೇ ಮತ್ತೆ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಪ್ರಕರಣ ನಡೆದಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada