Karnataka Rain: ಕೊಡಗಿನಲ್ಲಿ ಮುಂದುವರಿದ ವರುಣ; ಕಾವೇರಿ, ಲಕ್ಷ್ಮಣ ತೀರ್ಥ ನದಿಗಳ ನೀರಿನ ಮಟ್ಟ ಏರಿಕೆ
ಕಾವೇರಿ, ಲಕ್ಷ್ಮಣ ತೀರ್ಥ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು, ಒಂದೇ ದಿನ ನೀರಿನ ಮಟ್ಟ ಮೂರು ಅಡಿ ಏರಿಕೆಯಾಗಿದೆ.
ಕೊಡಗು: ರಾಜ್ಯದ ಹಲವು ಕಡೆ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಮಳೆ ಮುಂದುವರಿದ್ದು, ವರುಣ ಬಿಟ್ಟುಬಿಟ್ಟು ಅಬ್ಬರಿಸುತ್ತಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು, ಒಂದೇ ದಿನ ನೀರಿನ ಮಟ್ಟ ಮೂರು ಅಡಿ ಏರಿಕೆಯಾಗಿದೆ. ಇನ್ನು ವಿಜಯಪುರ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಡ್ಯಾಂ (Dam) ನೀರಿನ ಗರಿಷ್ಟ ಮಟ್ಟ 519.60 ಮೀಟರ್ ಇದ್ದು, ಡ್ಯಾಂ ಇಂದಿನ ನೀರಿನ ಮಟ್ಟ 517.56 ಮೀಟರ್ ಇದೆ. ಒಳ ಹರಿವು 24,727 ಕ್ಯೂಸೆಕ್, ಹೊರ ಹರಿವು 10,873 ಕ್ಯೂಸೆಕ್ ಹೆಚ್ಚಾಗಿದೆ.
ಹವಾಮಾನ ಇಲಾಖೆ ತಿಳಿಸಿರುವಂತೆ ಇಂದು (ಜುಲೈ 14) ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ. ಮಲೆನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದ ಮಳೆಯಿಂದ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಇಂದು ಬೆಳಗ್ಗೆ 8.30ರ ತನಕವೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಈ ಎಲ್ಲಾ ಜಿಲ್ಲೆಗಳಲ್ಲಿ 115.6 ಮಿಲಿ ಮೀಟರ್ಗೂ ಅಧಿಕ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ.
Source IMD: (1/2) Orange alert: Dakshina Kannada, Udupi, Uttara Kannada, Chikkamagaluru, Hassan, Kodagu, Shimoga, Belagavi, Dharwad, Haveri & Kalaburagi districts have been given Orange alert by IMD as on 13.07.2021 at 1300hrs valid till 8:30 AM of 14.07.2021.
— KSNDMC (@KarnatakaSNDMC) July 13, 2021
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ನಿರಂತರ ಮಳೆಯಿಂದ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆಯಾಗಿದೆ.
ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಸೇರಿ ಹಲವೆಡೆ ಕೆಲವು ಗಂಟೆಯಿಂದ ಭಾರಿ ಮಳೆ ಸುರಿಯುತ್ತಿದೆ. ಮಂಗಳೂರು ನಗರ ಪ್ರದೇಶದಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಿದೆ. ಪಶ್ಚಿಮ ಘಟ್ಟದಿಂದ ಜಿಲ್ಲೆಯ ಜೀವನದಿಗಳಿಗೆ ನೀರು ಹರಿದು ಬರುತ್ತಿದೆ. ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಮುಂಗಾರು ಕೃಷಿ ಜೋರಾಗಿ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಮಳೆ ಬಂದಿರಲಿಲ್ಲ. ಮೂರು ದಿನಗಳಿಂದ ಮಲೆನಾಡಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ವಿವಿಧ ಡ್ಯಾಂಗಳಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ.
ಇದನ್ನೂ ಓದಿ
Karnataka Dams: ರಾಜ್ಯದಲ್ಲಿ ಮಳೆ ಜೋರು; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
(Rain continues in Kodagu, water levels of the Kaveri and Lakshmana Theertha rivers have increased)
Published On - 10:20 am, Wed, 14 July 21