Karnataka Rain: ಮುಂದುವರಿದ ಮಳೆ; ಹಾವೇರಿ, ಕೊಪ್ಪಳ, ಗದಗ, ವಿಜಯನಗರ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ವಿವಿಧೆಡೆ ವ್ಯಾಪಕ ಹಾನಿ
ಕರ್ನಾಟಕದ ವಿವಿಧೆಡೆ ಸೋಮವಾರ ರಾತ್ರಿಯಿಂದ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು ಅಲ್ಲಲ್ಲಿ ಮಂಗಳವಾರ ಮುಂಜಾನೆ ಬಿಡುವುಕೊಟ್ಟಿದೆ.
ಬೆಂಗಳೂರು: ಕರ್ನಾಟಕದ ವಿವಿಧೆಡೆ ಸೋಮವಾರ ರಾತ್ರಿಯಿಂದ ಮಳೆ (Karnataka Rains) ವ್ಯಾಪಕವಾಗಿ ಸುರಿಯುತ್ತಿದ್ದು ಅಲ್ಲಲ್ಲಿ ಮಂಗಳವಾರ ಮುಂಜಾನೆ ಬಿಡುವುಕೊಟ್ಟಿದೆ. ಭಾರೀ ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯೂ (Bengaluru Mysore Highway) ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕೊಪ್ಪಳ, ಗದಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆ ಬಿಡುವು ಕೊಡದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾ ಶಿಕ್ಷಣಾಧಿಕಾರಿಗಳು (ಡಿಡಿಪಿಐ) ರಜೆ ಘೋಷಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬೂದಿತಿಟ್ಟ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡಿದರು. ಮನೆಯಲ್ಲಿದ್ದ 8 ಜನರನ್ನು ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಿಸಿದರು. ಹಾವೇರಿ ಜಿಲ್ಲೆಯಲ್ಲಿಯೂ ಧಾರಾಕಾರಯಾಗಿದ್ದು, ತಿಮ್ಮಾಪುರ ಎಂಎ ಗ್ರಾಮದ ಮನೆಗಳಿಗೆ ಹಳ್ಳದ ನೀರು ನುಗ್ಗಿದೆ. ಮನೆಗಳಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದವಸ ಧಾನ್ಯಗಳು ನೀರುಪಾಲಾಗಿವೆ. ಮನೆಯಿಂದ ನೀರು ಹೊರಹಾಕಲು ಕುಟುಂಬಸ್ಥರು ಹರಸಾಹಸಪಡುತ್ತಿದ್ದಾರೆ.
ರಾತ್ರಿ ಸುರಿದ ಮಳೆಗೆ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಹಾನಗಲ್ ತಾಲ್ಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಿಂಬವ್ವ ನೆಗಳೂರು (48) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ಮನೆ ಗೋಡೆ ಕುಸಿದು ದುರಂತ ಸಂಭವಿಸಿದೆ. ನಿಂಬವ್ವಳ ಪತಿ ಮತ್ತು ಮಗ ಅದೃಷ್ಟವಶಾತ್ ಅಪಾಯದಿಂದ ಪಾರಾದರು.
ತುಮಕೂರಿನ ಅರಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೋಡಿ ಹರಿಯುತ್ತಿರುವ ನೀರಿನಲ್ಲಿ ಯುವಕರು ಮೀನು ಹಿಡಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆರೆ, ಕುಂಟೆ ಜಲಾಶಯಗಳು ಹಾಗೂ ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಅತ್ತ ಹೋಗಬೇಡಿ. ಅದು ಅಪಾಯ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಆದರೂ ಯುವಕರು ಮೀನು ಹಿಡಿದು, ಹುಚ್ಚಾಟವಾಡುತ್ತಿರುವುದು ಬೇಸರಕ್ಕೆ ಕಾರಣವಾಗಿದೆ.
ತುಮಕೂರು ತಾಲ್ಲೂಕಿನ ಅರಕೆರೆಯಲ್ಲಿ ರಾತ್ರಿಯಿಡೀ ಮಳೆ ಸುರಿದ ಕಾರಣ ನಿವಾಸಿಗಳು ಪರದಾಡಬೇಕಾಯಿತು. 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಿವಾಸಿಗಳು ರಾತ್ರಿಯಿಡಿ ನೀರು ಹೊರಹಾಕಲು ಪರದಾಡಿದರು. ಊಟವಿಲ್ಲದೆ ಪರದಾಡಬೇಕಾಯಿತು ಎಂದು ಮಹಿಳೆಯರು ಕಣ್ಣಿರು ಹಾಕಿದರು. ‘ಗೌರಿ ಹಬ್ಬ ಮಾಡಬೇಕಿತ್ತು. ಆದರೆ ಯಾವ ಉತ್ಸಾಹವೂ ಉಳಿದಿಲ್ಲ. ಮನೆಗೆ ನುಗ್ಗಿರುವ ನೀರು ಖಾಲಿಯಾದರೆ ಸಾಕು’ ಎಂದು ಮಹಿಳೆ ಲಕ್ಷ್ಮಮ್ಮ ಅವರು ಕಣ್ಣೀರು ಹಾಕಿದರು. ಮನೆಯಲ್ಲಿದ್ದ ದವಸ ಧಾನ್ಯ, ಅಡುಗೆ ಸಾಮಾಗ್ರಿಗಳು ನೀರುಪಾಲಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೊಟೆಲ್ನಿಂದ ತಿಂಡಿ ತರಿಸಿಕೊಂಡು ತಿನ್ನುತ್ತಿದ್ದಾರೆ.
ತುಮಕೂರು ಜಿಲ್ಲೆಯ ಎರಡನೇ ಅತಿದೊಡ್ಡ ಕೆರೆ ಎನಿಸಿದ ಮಾವತ್ತೂರು ಕೆರೆಯು ಕೊರಟಗೆರೆ ತಾಲ್ಲೂಕಿನಲ್ಲಿದೆ. 3 ಸಾವಿರ ಎಕರೆಗೂ ದೊಡ್ಡದಾದ ಕೆರೆಯುವ ಮತ್ತೊಮ್ಮೆ ಕೋಡಿ ಹರಿಯುತ್ತಿದೆ. ಕಳೆದ ರಾತ್ರಿ ಮಳೆಯಾದ ಪರಿಣಾಮ ಬೆಳಗ್ಗೆಯಿಂದ ನೀರು ಭೋರ್ಗರೆದು ಹರಿಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಸುತ್ತಮುತ್ತಲು ಧಾರಾಕಾರ ಮಳೆ ಸುರಿದ ಕಾರಣ ಕೋಟೆ ಆಂಜನೇಯ ದೇವಸ್ಥಾನವು ಜಲಾವೃತಗೊಂಡಿದೆ. ಕೆರೆದಂಡೆಯಲ್ಲಿರುವ ದೇವಸ್ಥಾನದ ಗರ್ಭಗುಡಿಗೂ ನೀರು ನುಗ್ಗಿದ್ದು, ಮೊಣಕಾಲುದ್ದದ ನೀರಿನಲ್ಲೇ ಭಕ್ತರು ದೇವರ ದರ್ಶನ ಮಾಡುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಕೆರೆ ತುಂಬಿದ್ದು, ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ.
ಕೊಡಗಿನಲ್ಲಿ ಕೊಚ್ಚಿ ಹೋದ ಕಾಲು ಸೇತುವೆ
ಕೊಡಗು ಜಿಲ್ಲೆಯಲ್ಲಿ ಮಳೆ ಅವಾಂತರದಿಂದ ಮಡಿಕೇರಿ ತಾಲ್ಲೂಕು ಸಂಪಾಜೆ ಸಮೀಪದ ಚಡಾವು ಬಳಿ ನೀರಿನ ರಭಸಕ್ಕೆ ಚಡಾವು-ಮುಂಡಕ್ ಕಾಲು ಸೇತುವೆ ಕೊಚ್ಚಿ ಹೋಗಿದೆ. ಮರದ ದಿಮ್ಮಿಗಳು ಅಪ್ಪಳಿಸಿದ್ದರಿಂದ ಸೇತುವೆಯು ಕೊಚ್ಚಿಹೋಗಿದೆ.
ರಾಯಚೂರಿನಲ್ಲಿ ಬೆಳೆನಾಶ
ರಾಯಚೂರು ಜಿಲ್ಲೆಯ ನೂರಾರು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದಿದ್ದ ಜೋಳ, ಹತ್ತಿ, ತೊಗರಿ, ಸಜ್ಜೆ ಸೇರಿ ಹಲವು ಬೆಳೆಗಳು ಮಳೆಯಿಂದ ಹಾಳಾಗಿವೆ. ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ₹ 30 ಸಾವಿರದ ವರೆಗೆ ಖರ್ಚಾಗಿದೆ. ಆದರೆ ಬೆಳೆನಷ್ಟಕ್ಕೆ ಪರಿಹಾರ ಕೊಡುವುದು ಕೇವಲ ಎರಡರಿಂದ ಮೂರು ಸಾವಿರ ಮಾತ್ರ. ಈ ಹಣ ಬಸ್ಚಾರ್ಜ್ಗೂ ಸಾಕಾಗುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ರಾಯಚೂರು ತಾಲ್ಲೂಕಿನ ಮಿರಾಪುರ, ಗುರ್ಜಾಪುರ, ಕಾಡ್ಲೂರು ಸೇರಿ ಹಲವು ಗ್ರಾಮಗಳ ಸಮೀಪ ಬೆಳೆದಿದ್ದ ಹತ್ತಿ ಬೆಳೆ ಹಾಳಾಗಿದೆ.
Published On - 10:23 am, Tue, 30 August 22