Karnataka Weather: ಕರ್ನಾಟಕದ ಕರಾವಳಿ ತೀರದಲ್ಲಿ ಮುಂದುವರಿಯಲಿದೆ ವರುಣಾರ್ಭಟ: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ, ಪ್ರವಾಹದ ಎಚ್ಚರಿಕೆ

| Updated By: Lakshmi Hegde

Updated on: Jun 26, 2021 | 8:07 AM

Weather Forecast: ಸದ್ಯ ಬಾರ್ಮರ್​, ಭಿಲ್ವಾರಾ, ಧೋಲ್​ಪುರ, ಅಲಿಗಢ್​, ಮೀರತ್​, ಅಂಬಾಲಾ, ಅಮೃತಸರದ ಮೂಲಕ ಸದ್ಯ ನೈಋತ್ಯ ಮಾನ್ಸೂನ್​ ಹಾದು ಹೋಗುತ್ತಿದೆ. ಇನ್ನುಳಿದ ರಾಜಸ್ಥಾನ, ಉತ್ತರಪ್ರದೇಶದ ಪಶ್ಚಿಮ ಭಾಗಗಳು, ಹರ್ಯಾಣ, ಚಂಡೀಗಢ್​, ದೆಹಲಿ ಮತ್ತು ಪಂಜಾಬ್​​ನ್ನು ಪ್ರವೇಶಿಸಲು ಗಾಳಿ ಅಡ್ಡವಾಗುತ್ತಿದೆ.

Karnataka Weather: ಕರ್ನಾಟಕದ ಕರಾವಳಿ ತೀರದಲ್ಲಿ ಮುಂದುವರಿಯಲಿದೆ ವರುಣಾರ್ಭಟ: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ, ಪ್ರವಾಹದ ಎಚ್ಚರಿಕೆ
ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ
Follow us on

ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದ್ದು, ಕರಾವಳಿ, ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ನಿನ್ನೆ (ಜೂ.25)ರಿಂದಲೂ ಮಳೆಯಾಗುತ್ತಿದೆ. ಹಾಗೇ ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗಿದೆ. ಇದೇ ರೀತಿಯ ವಾತಾವರಣ ಜೂ.27ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕದ್ರಾ, ಗೋಕರ್ಣ, ಸಿದ್ದಾಪುರ, ಉಡುಪಿ ಜಿಲ್ಲೆಯ ಕೋಟಾ, ಕಾರ್ಕಳ, ಕಲಬುರ್ಗಿ, ಯಾದಗಿರಿ, ಶಿವಮೊಗ್ಗದ ತೀರ್ಥಹಳ್ಳಿ ಸೇರಿ ಹಲವು ಕಡೆ ಜಾಸ್ತಿ ಪ್ರಮಾಣದಲ್ಲಿ ಮಳೆಸುರಿಯುತ್ತಿದೆ. ಮುಂದಿನ 24ಗಂಟೆಯಲ್ಲಿ ಸಹ ಇದೇ ಹವಾಮಾನ ಅಂದರೆ, ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗಲಿದೆ. ಆದರೆ ಮೀನುಗಾರರಿಗೆ ಯಾವುದೇ ಅಪಾಯದ ಎಚ್ಚರಿಕೆ ನೀಡಲಾಗಿಲ್ಲ. ಉತ್ತರ ಒಳನಾಡಿನಲ್ಲೂ ಹೆಚ್ಚಿನ ಪ್ರದೇಶದಲ್ಲಿ ಮಳೆ ಬೀಳಲಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಕೆಲವೇ ಪ್ರದೇಶಗಳಲ್ಲಿ ಮಳೆ ಬೀಳಲಿದೆ. ಇನ್ನು ಗುಡುಗು ಸಹ ಇರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದಿಂದಲೂ ಮಳೆಯ ಪ್ರಮಾಣ ತಗ್ಗಿದೆ. ನೈಋತ್ಯ ಮಾನ್ಸೂನ್​ ದುರ್ಬಲ ಆಗಿರುವ ಕಾರಣಕ್ಕೆ ಕಡಿಮೆಯಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕೃಷಿ ಚಟುವಟಿಕೆಗಳೂ ಭರದಿಂದ ನಡೆಯುತ್ತಿವೆ.

ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಇಂದಿನಂದ ಜೂ.29ರವರೆಗೂ ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕನಿಷ್ಠ ತಾಪಮಾನ 30 ಡಿಗ್ರಿಯಿಂದ 20 ಡಿಗ್ರಿ ಸೆಲ್ಸಿಯಸ್​ ಇರಲಿದ್ದು, ಗಾಳಿಯ ಪ್ರಮಾಣ ಹೆಚ್ಚಿರಲಿದೆ. ಹೆಚ್ಚು-ಕಡಿಮೆ ಬೆಂಗಳೂರಿನಲ್ಲಿ ಜೂ.30ರವರೆಗೂ ಇದೇ ವಾತಾವರಣ ಮುಂದುವರಿಯಲಿದ್ದು, ಜು.1ರಬಳಿಕ ವಾತಾವರಣ ಬದಲಾಗಬಹುದು ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಇನ್ನು ಸದ್ಯ ಬಾರ್ಮರ್​, ಭಿಲ್ವಾರಾ, ಧೋಲ್​ಪುರ, ಅಲಿಗಢ್​, ಮೀರತ್​, ಅಂಬಾಲಾ, ಅಮೃತಸರದ ಮೂಲಕ ಸದ್ಯ ನೈಋತ್ಯ ಮಾನ್ಸೂನ್​ ಹಾದು ಹೋಗುತ್ತಿದೆ. ಇನ್ನುಳಿದ ರಾಜಸ್ಥಾನ, ಉತ್ತರಪ್ರದೇಶದ ಪಶ್ಚಿಮ ಭಾಗಗಳು, ಹರ್ಯಾಣ, ಚಂಡೀಗಢ್​, ದೆಹಲಿ ಮತ್ತು ಪಂಜಾಬ್​​ನ್ನು ಪ್ರವೇಶಿಸಲು ಗಾಳಿ ಅಡ್ಡವಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ವದಿಂದ ಬೀಸುವ ಬಲವಾದ ಗಾಳಿ ಮತ್ತು ಬಂಗಾಳಕೊಲ್ಲಿಯಿಂದ ತೇವಾಂಶವನ್ನು ಹೊತ್ತು ತರುವ ಗಾಳಿಯಿಂದ ಈಶಾನ್ಯ ರಾಜ್ಯಗಳಲ್ಲಿ ಮುಂದಿನ 5ದಿನಗಳ ಕಾಲ ಸಿಕ್ಕಾಪಟೆ ಮಳೆಯಾಗುವ ಸಾಧ್ಯತೆ ಇದೆ. ಅಸ್ಸಾಂ, ಮೇಘಾಲಯದ ಹಲವೆಡೆ ಭರ್ಜರಿ ಮಳೆ ನಿರೀಕ್ಷೆ ಮಾಡಲಾಗಿದೆ ಎಂದು ಐಎಂಡಿ ತಿಳಿಸಿದೆ. ಅಸ್ಸಾಂನ ನೆರೆಹೊರೆ ಪ್ರದೇಶಗಳು, ಅರುಣಾಚಲ ಪ್ರದೇಶಗಳಲ್ಲಿ ಸುಮಾರು 250 ಮಿಮೀ ಮಳೆಯಾಗಲಿದ್ದು, ನದಿಗಳು ತುಂಬಿ ಹರಿದು ಪ್ರವಾಹಪರಿಸ್ಥಿತಿ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ. ಹಾಗೇ, ಕೊಂಕಣ ಮತ್ತು ಮಲ್ಬಾರ್​ ಕರಾವಳಿ ತೀರದಲ್ಲಿ ಮಳೆ ಮುಂದುವರಿಯಲಿದೆ.

ಇದನ್ನೂ ಓದಿ: ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​

Published On - 8:06 am, Sat, 26 June 21