ಬೆಂಗಳೂರು, ಜ.2: ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡುವವರೆಗೂ ಬಿಜೆಪಿ ಸುಮ್ಮನಿರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ. ನಾಳೆ ಬೃಹತ್ ಹೋರಾಟ ಮೂಲಕ ಈ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಸರ್ಕಾರ ಹಿಂದೂ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಕಲಸ ಮಾಡುತ್ತಿದೆ. ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಇದು ಹಿಂದೂ ವಿರೋಧಿ, ರಾಮ ವಿರೋಧಿ ಸರ್ಕಾರ ಎಂದರು.
ಇದು ಅಲ್ಪಸಂಖ್ಯಾತರ ಕಲ್ಯಾಣ ಮಾತ್ರ ಬಯಸುವ ಸರ್ಕಾರವಾಗಿದೆ. ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಹಿಂದೂಗಳ ಬಂಧನ ಮಾಡಲಾಗಿದೆ. ಸರ್ಕಾರ ಲೋಕಸಭೆ ವೇಳೆ ಹಿಂದೂ, ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಎಂದರು.
ತಪ್ಪು ಮಾಡಿದ್ದಾರೋ ಇಲ್ವೋ ಇವರು ತೀರ್ಮಾನ ಮಾಡುವುದಲ್ಲ. ಈ ಸಂದರ್ಭದಲ್ಲಿ ರಾಮಭಕ್ತರನ್ನು ಬಂಧಿಸುತ್ತಾರೆ ಅಂದರೆ ಏನರ್ಥ? ನಾಳೆ ದಿನ ನಡೆಯುವ ದುರ್ಘಟನೆಗೆ ರಾಜ್ಯ ಸರ್ಕಾರವೇ ಹೊಣೆ. ಕಾಂಗ್ರೆಸ್ನವರ ನಾಲಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ನವವರ ಹುಚ್ಚು ಹೇಳಿಕೆಗೆ ಉತ್ತರ ಕೊಡುವ ಅಗತ್ಯ ಇಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ತರುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಅವರಿಗೆ ಖುಷಿ ಕೊಡುತ್ತದೆ ಎಂದರು.
31 ವರ್ಷಗಳ ಹಳೇ ಕೇಸ್ನ್ನು ಈಗ ಓಪನ್ ಮಾಡಬೇಕಾ? ಕಾನೂನು ಸುವ್ಯವಸ್ಥೆ ಹದಗೆಡುವ ದುಸ್ಸಾಹಕ್ಕೆ ಸಿಎಂ ಸಿದ್ದರಾಮಯ್ಯ ಕೈಹಾಕುತ್ತಿದ್ದಾರೆ. ಮುಂದೆ ನಡೆಯುವ ಘಟನೆಗಳಿಗೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಅವರು ಹೊಣೆ. ಕೂಡಲೇ ಬಂಧಿತ ಶ್ರೀಕಾಂತ ಪೂಜಾರಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಶ್ರೀಕಾಂತ್ ಬಂಧನ ಖಂಡಿಸಿ ನಾಳೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ನಾಳೆ ಬೆಳಗ್ಗೆ 11.30ಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಎದುರು ಪ್ರತಿಭಟನೆ ನಡೆಯಲಿದ್ದು, ಆರ್.ಅಶೋಕ್ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕಲು ನಿರ್ಧಾರಿಸಲಾಗಿದೆ. ಪ್ರತಿಭಟನೆ ನಂತರ ಶ್ರೀಕಾಂತ್ ಮನೆಗೆ ಭೇಟಿ ನೀಡಲಿರುವ ಅಶೋಕ್ ಅವರಿಗೆ ಸ್ಥಳೀಯ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ.
ಶ್ರೀಕಾಂತ್ ಪೂಜಾರಿ ಬಂಧನ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಎಸ್ಎಸ್ಕೆ ಸಮಾಜದ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಅಶೋಕ ಕಾಟವೆ, ರಾಜ್ಯ ಸರ್ಕಾರ ಹಿಂದೂ ಸಮಾಜವನ್ನ ಟಾರ್ಗೆಟ್ ಮಾಡುತ್ತಿದೆ. ರಾಮಜನ್ಮ ಭೂಮಿ ಹೋರಾಟಗಾರ ಬಂಧನ ಖಂಡನಿಯ. ಎಸ್ಎಸ್ಕೆ ಸಮಾಜದ ಹಿಂದೂ ಕಾರ್ಯಕರ್ತರನ್ನ ಪೊಲೀಸರು ಗುರಿಯಾಗಿಸಿಕೊಂಡಿದ್ದು ಸರಿಯಲ್ಲ ಎಂದರು.
ನಾಳಿನ ಬಿಜೆಪಿ ಪ್ರತಿಭಟನೆಗೆ ನಮ್ಮ ಸಮಾಜ ಸಂಪೂರ್ಣ ಬೆಂಬಲ ನೀಡುತ್ತದೆ. ಶ್ರೀಕಾಂತ್ ಪೂಜಾರಿ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಜೈಲಿನಿಂದ ತಕ್ಷಣ ಬಿಡುಗಡೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣ ಸಂಬಂಧ ಮುಂದೆ ಯಾರನ್ನು ಬಂಧಿಸಬಾರದು ಎಂದರು.
ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನ ಕಂಡಿಸಿ ನಾಳೆ ಜಿಲ್ಲಾ ಬಿಜೆಪಿ ಘಟಕದಿಂದ ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್ಎಸ್ ಪಾಟೀಲ್ ಕೂಚಬಾಳ ನೇತೃತ್ವದಲ್ಲಿ ನಾಳೆ ಬೆಳಗ್ಗೆ 11:30ಕ್ಕೆ ವಿಜಯಪುರ ನಗರದ ಗಾಂಧಿ ಚೌಕಿನಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ