ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸರ ವಶಕ್ಕೆ ಕೊಟ್ಟ ನ್ಯಾಯಾಲಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 31, 2022 | 3:15 PM

ಆರೋಪಿಗಳ ಮೊಬೈಲ್​ಗಳಲ್ಲಿರುವ ದತ್ತಾಂಶ ಹೊರತೆಗೆಯಲು ಪೊಲೀಸರು ಯತ್ನಿಸಲಿದ್ದು, ಇನ್ನಷ್ಟು ಗೌಪ್ಯ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಯಿದೆ.

ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸರ ವಶಕ್ಕೆ ಕೊಟ್ಟ ನ್ಯಾಯಾಲಯ
ಆರೋಪಿಗಳಾದ ನೀಲಾಂಬಿಕೆ ಮತ್ತು ಮೃತ್ಯುಂಜಯ ಸ್ವಾಮೀಜಿ
Follow us on

ರಾಮನಗರ: ಕಂಚುಗಲ್​ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮೂವರು ಆರೋಪಿಗಳನ್ನು ಆರು ದಿನಗಳ ಅವಧಿಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸರು ಮಾಗಡಿ 1ನೇ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರಾದ ಧನಲಕ್ಷ್ಮೀ ಎದುರು ಆರೋಪಿಗಳನ್ನು ಹಾಜರುಪಡಿಸಿದರು. ಪೊಲೀಸರ ಬೇಡಿಕೆಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲು ಸಮ್ಮತಿಸಿದರು. ಪ್ರಕರಣದ ಆರೋಪಿಗಳಾದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಶಿಕ್ಷಕ ಮತ್ತು ವಕೀಲ ಮಹದೇವಯ್ಯ, ಹನಿಟ್ರ್ಯಾಪ್​ನಲ್ಲಿ ಕಾಣಿಸಿಕೊಂಡಿದ್ದ ಯುವತಿ ನೀಲಾಂಬಿಕೆ (ಚಂದು) ಅವರನ್ನು ಹೆಚ್ಚಿನ ವಿಚಾರಣೆಗಾಗಿ ರಾಮನಗರ ಜಿಲ್ಲಾ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.

ನವೆಂಬರ್ 5ರವರೆಗೂ ಆರೋಪಿಗಳು ಪೊಲೀಸರ ವಶದಲ್ಲಿರುತ್ತಾರೆ. ನಂತರ ಅವರನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ. ವಿಚಾರಣೆ ಅಗತ್ಯವಿದೆ ಎಂದಾದರೆ ಪೊಲೀಸರು ಅವರನ್ನು ಮತ್ತೆ ವಶಕ್ಕೆ ಕೇಳುತ್ತಾರೆ. ಮೃತ ಬಸವಲಿಂಗ ಸ್ವಾಮೀಜಿ ತಮ್ಮ ಡೆತ್​ನೋಟ್​ನಲ್ಲಿ ಉಲ್ಲೇಖಿಸಿರುವ ಇತರರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಆರೋಪಿ ನೀಲಾಂಬಿಕೆಯನ್ನು ಕಾಲ್​ ರೆಕಾರ್ಡ್​ ಮಾಡಿರುವ ಸ್ಥಳವಾದ ದೊಡ್ಡಬಳ್ಳಾಪುರಕ್ಕೂ ಪೊಲೀಸರು ಕರೆದೊಯ್ದು ಮಹಜರು ನಡೆಸಲಿದ್ದಾರೆ. ಆರೋಪಿಗಳನ್ನು ಒಟ್ಟು 10 ದಿನಗಳ ಅವಧಿಗೆ ವಶಕ್ಕೆ ಕೊಡಬೇಕು ಎಂದು ಪೊಲೀಸರು ಕೇಳಿದ್ದರು. ಆದರೆ ಸದ್ಯ 6 ದಿನಗಳ ಅವಧಿಗೆ ಆರೋಪಿಗಳನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ಕೊಟ್ಟಿದೆ. ಅಗತ್ಯವಿದ್ದರೆ ಮತ್ತೆ ವಶಕ್ಕೆ ಕೇಳಿ ಎಂದು ಪೊಲೀಸರಿಗೆ ಸೂಚಿಸಿದೆ.

ಪೊಲೀಸರ ವಶಕ್ಕೆ ಆರೋಪಿಗಳ ಮೊಬೈಲ್

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಮಠದ ಡಾ ಮೃತ್ಯುಂಜಯಶ್ರೀ, ನಿವೃತ್ತ ಶಿಕ್ಷಕ ಮಹದೇವಯ್ಯ ಹಾಗೂ ನೀಲಾಂಬಿಕೆ (ಚಂದು) ಅವರ ಮೊಬೈಲ್​ಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಮೊಬೈಲ್​ಗಳಲ್ಲಿರುವ ದತ್ತಾಂಶ ಹೊರತೆಗೆಯಲು ಪೊಲೀಸರು ಯತ್ನಿಸಲಿದ್ದು, ಇನ್ನಷ್ಟು ಗೌಪ್ಯ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಯಿದೆ. ಮೃತ್ಯುಂಜಯ ಸ್ವಾಮೀಜಿ ಹಾಗೂ ಮಹದೇವಯ್ಯ ಅವರನ್ನು ರಾಮನಗರ ಜಿಲ್ಲಾ ಕಾರಾಗೃಹದಿಂದ ಹಾಗೂ ನೀಲಾಂಬಿಕೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಮಾಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಹಾದಿ ತಪ್ಪಿದ ಸಂಸ್ಕೃತ ಪ್ರಾಧ್ಯಾಪಕ

ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಮುಖ್ಯ ಆರೋಪಿಯಾಗಿರುವ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ವೇದ-ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪೂರ್ವಾಶ್ರಮದ ಹೆಸರು ಎಸ್ ರೇಣುಕಾರಾಧ್ಯ.

Published On - 3:15 pm, Mon, 31 October 22