Bengaluru-Mysuru Expressway: ಉದ್ಘಾಟನೆಯಾಗಿ ವಾರ ಕಳೆದಿಲ್ಲ, ಮಳೆ ಅವಾಂತರಕ್ಕೆ ಕೆರೆಯಂತಾದ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ವೇ

|

Updated on: Mar 18, 2023 | 9:28 AM

ತಡರಾತ್ರಿ ಸುರಿದ ಭಾರಿ ಮಳೆಗೆ ನೂತನ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ವೇ ದಶಪಥ ಹೆದ್ದಾರಿ ಕೆರೆಯಂತಾಗಿದೆ. ಇದರಿಂದ ಹೆದ್ದಾರಿಯಲ್ಲಿಯೇ ಏಕಾಏಕಿ ವಾಹನಗಳು ಕೆಟ್ಟು ನಿಂತಿದ್ದು, ವಾಹನಗಳ ನಡುವೆ ಸರಣಿ ಅಪಘಾತವಾಗುತ್ತಿದೆ. ಜೊತೆಗೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.

ರಾಮನಗರ: ತಡರಾತ್ರಿ ಸುರಿದ ಭಾರಿ ಮಳೆಗೆ ನೂತನ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ವೇ((Bengaluru-Mysuru Expressway) ಕೆರೆಯಂತಾಗಿದೆ. ಹೌದು ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಹೆದ್ದಾರಿ ಬಳಿ ನೀರು ನಿಂತು ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಹೆದ್ದಾರಿಯಲ್ಲಿಯೇ ಏಕಾಏಕಿ ವಾಹನಗಳು ಕೆಟ್ಟು ನಿಂತಿದ್ದು, ವಾಹನಗಳ ನಡುವೆ ಸರಣಿ ಅಪಘಾತವಾಗುತ್ತಿದೆ. ಜೊತೆಗೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ. ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದ್ಘಾಟನೆಯಾದ 6 ದಿನಕ್ಕೇ ಎಕ್ಸ್​​ಪ್ರೆಸ್​ ವೇನಲ್ಲಿ ಈ ಅವಾಂತರವಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI), ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದಿತ್ತು. ಆದರೀಗ ಉದ್ಘಾಟನೆಯಾದ 6 ದಿನಕ್ಕೆ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಸಮಸ್ಯೆ ಆಗುತ್ತಿದ್ದರು ಎನ್ ಹೆಚ್ ಎ ಐ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಪಕ್ಷಗಳ ಆರೋಪದ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ

ಹೌದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಮುಂದುವರಿದಿದ್ದು ನಿನ್ನೆ(ಮಾ.17) ರಾಮನಗರ ತಾಲೂಕಿನ ಬಸವನಪುರ ಬಳಿ ಮೇಲ್ಸೇತುವೆಯ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದು, ಲಾರಿ ಹಾಗೂ ಕಾರು ಚಾಲಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು.

ಇದನ್ನೂ ಓದಿ:ಮೊದಲ ದಿನವೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್​ವೇ ಟೋಲ್​ನಲ್ಲಿ ತಾಂತ್ರಿಕ ಸಮಸ್ಯೆ, ವಾಹನ ಸವಾರರ ಆಕ್ರೋಶ

ಇನ್ನು ರಾಮನಗರ ಜಿಲ್ಲಾ ವ್ಯಾಪ್ತಿಯೊಂದರಲ್ಲೇ ಸಂಭವಿಸಿದ ಅಪಘಾತಗಳ ಸಂಖ್ಯೆ ಶತಕ (110ಕ್ಕೂ ಹೆಚ್ಚು) ದಾಟಿದ್ದು, 41 ಮಂದಿ ಸಾವನ್ನಪ್ಪಿದರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ದ್ವೀಶತಕ ದಾಟಿದೆ. ನಡೆದ 225 ಅಪಘಾತದಲ್ಲಿ 43 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಲಕ್ಷ್ಮೀಪುರ ಗೇಟ್‌-ಮಣಿಪಾಲ್ ಆಸ್ಪತ್ರೆವರೆಗಿನ ಹೆದ್ದಾರಿಯಲ್ಲಿ ಈವರೆಗೆ ಸಂಭವಿಸಿದ 30 ಆ್ಯಕ್ಸಿಡೆಂಟ್​ ಕೇಸ್​ನಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಮೈಸೂರಿನವರೆಗೂ ಸುಮಾರು 130 ಕಿಲೋ ಮೀಟರ್ ದೂರದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಯನ್ನ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಶೇ 80ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬೆಂಗಳೂರಿನಿಂದ ಮಂಡ್ಯದವರೆಗೂ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನಿಂದ ಮೈಸೂರಿಗೆ ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಸುಂದರವಾದ ರಸ್ತೆಯಲ್ಲಿ ವಾಹನಗಳ ವೇಗದ ಮಿತಿಗೆ ಇದುವರೆಗೂ ಕಡಿವಾಣ ಬಿದ್ದಿಲ್ಲ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ, ಅಪಘಾತದಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಇದು ವಾಹನ ಸವಾರರು, ಸ್ಥಳೀಯರ ಆತಂಕಕ್ಕೂ ಕೂಡ ಕಾರಣವಾಗಿದೆ. ಹೆದ್ದಾರಿಯಲ್ಲಿನ ಅನಾಹುತಗಳ ಬಗ್ಗೆ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಸಮಾಧಾನ ಹೊರಹಾಕುತ್ತಿದ್ದು, ಅಪೂರ್ಣ ಕಾಮಗಾರಿಯೇ ಇವೆಲ್ಲದಕ್ಕೆ ಕಾರಣ ಎಂದು ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ:KSRTC: ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ದರ ಹೆಚ್ಚಳದ ಶಾಕ್; ವಿವರ ಇಲ್ಲಿದೆ

ಒಟ್ಟಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಯಾದಗಿನಿಂದ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾ ಬರುತ್ತಿದೆ. ಅದು ಏನೇ ಇರಲಿ ಆದಷ್ಟು ಬೇಗ ಎಕ್ಸ್ ಪ್ರೆಸ್ ಹೈವೇಯಲ್ಲಿನ ಸಮಸ್ಯೆಯನ್ನ ಗುರುತಿಸಿ ಬಗೆಹರಿಸಬೇಕಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:28 am, Sat, 18 March 23