KSRTC: ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ದರ ಹೆಚ್ಚಳದ ಶಾಕ್; ವಿವರ ಇಲ್ಲಿದೆ
ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಭಯ ನಗರಗಳ ನಡುವಣ ಪ್ರಯಾಣದ ಟಿಕೆಟ್ ದರ ಹೆಚ್ಚಳ ಮಾಡಿದೆ.
ಬೆಂಗಳೂರು: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ (Bengaluru-Mysuru highway) ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಉಭಯ ನಗರಗಳ ನಡುವಣ ಪ್ರಯಾಣದ ಟಿಕೆಟ್ ದರ ಹೆಚ್ಚಳ ಮಾಡಿದೆ. ಬೆಂಗಳೂರು ಮೈಸೂರು ಪ್ರಯಾಣದ ದರ ಹೆಚ್ಚಳ ಮಾಡಿ ಕೆಎಸ್‌ಆರ್‌ಟಿಸಿ ಮಂಗಳವಾರ ಪ್ರಕಟಣೆ ಹೊರಡಿಸಿದೆ. ವೋಲ್ವೋ ಹಾಗೂ ಸಾಮಾನ್ಯ ಬಸ್ಗಳಿಗೆ ಪ್ರತ್ಯೇಕವಾಗಿ ದರ ಪರಿಷ್ಕರಣೆ ಮಾಡಲಾಗಿದೆ. ಐಷಾರಾಮಿ ಬಸ್‌ಗಳ ಪ್ರಯಾಣ ದರ 20 ರೂ. ಸಾಮಾನ್ಯ ಬಸ್ ಪ್ರಯಾಣದ ದರ 15 ರೂ. ಹಾಗೂ ರಾಜಹಂಸ ಬಸ್‌ಗಳ ಪ್ರಯಾಣ ದರವನ್ನು 18 ರೂ. ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಉಭಯ ನಗರಗಳ ನಡುವಿನ ಎಲೆಕ್ಟ್ರಿಕ್ ಬಸ್ ಮತ್ತು ವೋಲ್ವೋ ಬಸ್‌ಗಳ ಟಿಕೆಟ್‌ಗಳಿಗೂ ದರ ಹೆಚ್ಚಳ ಅನ್ವಯವಾಗಲಿದೆ. ಟೋಲ್ ಶುಲ್ಕವನ್ನು ಭರಿಸುವುದಕ್ಕಾಗಿ ಮಾತ್ರ ಈ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ. ನಾವು ಅಂತರರಾಜ್ಯ ಬಸ್ ಸೇವೆಗಳನ್ನೂ ಹೊಂದಿದ್ದು, ಇತರ ಕಡೆಗಳಲ್ಲಿ ಟೋಲ್‌ಗಳನ್ನು ಪಾವತಿಸುವುದು ನಮಗೆ ಹೆಚ್ಚು ಸಮಸ್ಯೆಯಾಗಿಲ್ಲ. ಆದರೆ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ದರ ಸ್ವಲ್ಪ ಹೆಚ್ಚಿರುವುದರಿಂದ ಟಿಕೆಟ್ ದರದಲ್ಲಿ ಅನಿವಾರ್ಯವಾಗಿ ಹೆಚ್ಚಳ ಮಾಡಬೇಕಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ತಿಳಿಸಿದ್ದಾರೆ.
ತೀವ್ರ ವಿರೋಧದ ನಡುವೆಯೂ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳವಾರ ಬೆಳಿಗ್ಗೆಯಿಂದ ಮೊದಲ ಹಂತದ ಟೋಲ್ ಸಂಗ್ರಹ ಆರಂಭಿಸಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹ ಮಾಡಾಗುತ್ತಿದೆ.
ಬಸ್‌ಗಳ ಏಕಮುಖ ಸಂಚಾರಕ್ಕೆ 460 ರೂ, ಎರಡು ಕಡೆ ಸಂಚಾರಕ್ಕೆ 690 ರೂ, ಬಸ್‌ಗಳ ತಿಂಗಳ ಟೋಲ್ ಪಾಸ್ ದರ 15,325 ರೂ. ನಿಗದಿಯಾಗಿದೆ. ಇದೀಗ ಈ ಹೊರೆಯನ್ನು ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ವರ್ಗಾಯಿಸಿಲು ಮುಂದಾಗಿದೆ.
ಇತ್ತೀಚೆಗೆ ‘ಅಂಬಾರಿ ಉತ್ಸವ’ ಆರಂಭಿಸಿದ್ದ ಕೆಎಸ್‌ಆರ್‌ಟಿಸಿ
ಅಂತರರಾಜ್ಯ ಪ್ರಯಾಣಿಕರಿಗಾಗಿ ಫೆಬ್ರವರಿ 24 ರಿಂದ ಕೆಎಸ್‌ಆರ್‌ಟಿಸಿ ‘ಅಂಬಾರಿ ಉತ್ಸವ’ ಯೋಜನೆಯಡಿ ‘9600 ವೋಲ್ವೋ ಮಲ್ಟಿ-ಆಕ್ಸಲ್ ಸ್ಲೀಪರ್’ ಬಸ್ಗಳನ್ನು ಆರಂಭಿಸಿತ್ತು. ಈ ಯೋಜನೆಯಡಿ ಯುರೋಪಿಯನ್ ಮಾದರಿ ಎಸಿ-ಸ್ಲೀಪರ್ ಬಸ್ಗಳು ಬೆಂಗಳೂರು ನಗರದಿಂದ ಮಂಗಳೂರು, ಕುಂದಾಪುರ, ಪಣಜಿ, ಪುಣೆ, ಹೈದರಾಬಾದ್, ಸಿಕಂದರಾಬಾದ್, ಎರ್ನಾಕುಲಂ, ತ್ರಿಶೂರ್ ಮತ್ತು ತಿರುವನಂತಪುರಂಗೆ ಸಂಚರಿಸುತ್ತಿವೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ ಎಂದು ಕೆಎಸ್‌ಆರ್‌ಟಿಸಿ ಇತ್ತೀಚೆಗೆ ತಿಳಿಸಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Tue, 14 March 23