Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಕಿಲ್ಲರ್ ಹೈವೇ; ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ
ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಶಪಥ ಹೆದ್ದಾರಿಯನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಕಿಲ್ಲರ್ ಹೈವೇ ಎಂದು ಕರೆದಿದ್ದಾರೆ.
ಮೈಸೂರು: ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಶಪಥ ಹೆದ್ದಾರಿಯನ್ನು (Bengaluru-Mysuru Expressway) ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ (M. Lakshman) ಕಿಲ್ಲರ್ ಹೈವೇ ಎಂದು ಕರೆದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಹೆದ್ದಾರಿಯಲ್ಲಿ ನಡೆದ ಅಪಘಾತಗಳ ವಿವರ ಮುಂದಿಟ್ಟುಕೊಂಡು, ಹೆದ್ದಾರಿ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಯಲ್ಲಿ ಈಯವರೆಗೆ 300 ಅಪಘಾತಗಳು ಸಂಭವಿಸಿವೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗಿದೆ. 2 ಲಕ್ಷ ಜನರಿಗೆ ಈ ರಸ್ತೆಯಿಂದ ಅನಾನುಕೂಲ ಆಗುತ್ತಿದೆ ಎಂದು ಹೇಳಿದ್ದಾರೆ. 55 ಕಿಲೋಮೀಟರ್ಗೆ 155 ರೂ ಟೋಲ್ ನಿಗದಿಯಾಗಿದೆ. ಮತ್ತುಳಿದ 55 ಕಿಲೋಮೀಟರ್ಗೆ 155 ರೂ. ನಿಗದಿಪಡಿಸಲಾಗಿದೆ. ಅಲ್ಲಿಗೆ ಒಟ್ಟು 300 ರೂ. ಟೋಲ್ ಪಾವತಿಸಬೇಕು. ಒಂದು ದಿವಸಕ್ಕೆ 5 ಕೋಟಿ ರೂ. ಸಂಗ್ರಹವಾಗಲಿದೆ. ಅಲ್ಲಿಗೆ ವರ್ಷಕ್ಕೆ 2,444 ಕೋಟಿ ರೂ. ಸಂಗ್ರಹವಾದಂತಾಗಲಿದೆ. 10 ವರ್ಷ ಟೋಲ್ ಸಂಗ್ರಹಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲಿಗೆ 10 ವರ್ಷದಲ್ಲಿ 20,440 ಕೋಟಿ ರೂ. ಸಂಗ್ರಹವಾಗಲಿದೆ. ರಸ್ತೆ ಮಾಡಲು 12 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಅಲ್ಲಿಗೆ 8 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಟೋಲ್ ವಸೂಲಿಯಾದಂತಾಗಲಿದೆ. ಇದರಲ್ಲಿ ನಿಮಗೆ ಎಷ್ಟು ಕಮಿಷನ್ ಬಂದಿದೆ? ಎಂದು ಆಡಳಿತ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಕುರಿತಾದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಚಾಲಕರ ನಿರ್ಲಕ್ಷ್ಯದಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದ್ದಾರೆ. ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ. ಸಮರ್ಪಕವಾಗಿಯೇ ನಿರ್ಮಾಣ ಮಾಡಲಾಗಿದೆ. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಅವರು ಹೇಳಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಲೋಕಾರ್ಪಣೆ ದಿನ ಸಮೀಪಿಸುತ್ತಿದ್ದಂತೆಯೇ ಒಂದೆಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದ್ದರೆ ರಸ್ತೆ ನಿರ್ಮಾಣದ ಬಗ್ಗೆ ಆರೋಪಗಳೂ ಕೇಳಿಬಂದಿವೆ. ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಬಗ್ಗೆ ತಿಳಿಯಲೇಬೇಕಾದ ಮಾಹಿತಿ
ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮೈಸೂರನ್ನು ಸಂಪರ್ಕಿಸುವ 117 ಕಿಲೋಮೀಟರ್ ಉದ್ದದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ, ಎನ್ಎಚ್ 275 ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಸುಮಾರು 8,408 ಕೋಟಿ ರೂ. ವೆಚ್ಚದಲ್ಲಿ ಈ ಹೆದ್ದಾರಿ ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ನಿತಿನ್ ಗಡ್ಕರಿ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಸರ್ವೀಸ್ ರಸ್ತೆ ವಿಚಾರವಾಗಿಯೂ ಕಾಂಗ್ರೆಸ್ ಇತ್ತೀಚೆಗೆ ಆರೋಪಗಳನ್ನು ಮಾಡಿತ್ತು. ಸರ್ವೀಸ್ ರಸ್ತೆ ಸೌಲಭ್ಯ ದೊರೆಯುವ ವರೆಗೆ ಮತ್ತು ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಗಿಯದ ಹೊರತು ಟೋಲ್ ಸಂಗ್ರಹ ಮಾಡಬಾರದು ಎಂದು ಪ್ರತಿಭಟನೆ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಟೋಲ್ ಸಂಗ್ರಹವನ್ನು ಮುಂದೂಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ