HD Kumaraswamy: ಸುಮಲತಾ ಬಿಜೆಪಿ ಬೆಂಬಲಿಸಿದ್ದಕ್ಕೆ ಕುಮಾರಸ್ವಾಮಿ, ಇತರ ನಾಯಕರು ಹೇಳಿದ್ದಿಷ್ಟು
ಬೇಲೂರಿನಲ್ಲಿ ಪಂಚರತ್ನ ಸಮಾವೇಶ ಉದ್ದೇಶಿಸಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಮತ್ತು ಅವರ ಹೇಳಿಕೆಗಳಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದಿದ್ದಾರೆ.
ಹಾಸನ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿಗೆ (BJP) ಬೆಂಬಲ ಸೂಚಿಸಿದ್ದಕ್ಕೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ. ಬೇಲೂರಿನಲ್ಲಿ ಪಂಚರತ್ನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಮತ್ತು ಅವರ ಹೇಳಿಕೆಗಳಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಅವರು ದೊಡ್ಡವರು, ದೊಡ್ಡ ಪಕ್ಷಕ್ಕೆ ಸೇರುತ್ತಿದ್ದಾರೆ. ಅವರು ಸುಮಲತಾ ಅಭಿವೃದ್ಧಿ ಕೆಲಸ ಮಾಡಿದ್ದರೆ ಮಂಡ್ಯ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
ನನ್ನ ಅರೋಗ್ಯ ಸಮಸ್ಯೆ ಕಡೆಗಣಿಸಿ ಶ್ರಮಿಸುತ್ತಿದ್ದೇನೆ. ಸ್ವಾರ್ಥಕ್ಕಾಗಿ ನನ್ನ ದೇಹ ದಂಡನೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಆಗಬೇಕು ಎಂದು ಈ ರೀತಿ ಶ್ರಮ ವಹಿಸುತ್ತಾ ಇಲ್ಲ. ನಮ್ಮ ಮನೆಯ ಬಳಿ ಬರುವ ಬಡ ತಾಯಂದಿರ ಕಣ್ಣೀರು ನೋಡಿದ್ದೇನೆ. ಬಡವರ, ರೈತರ ಕಣ್ಣೀರು ಒರೆಸಬೇಕು ಎನ್ನುವುದೊಂದೇ ನನ್ನ ಉದ್ದೇಶ. ಹಣವೇ ಮುಖ್ಯ ಎನ್ನುವವರಿಗೆ ಪಾಪ ಪ್ರಜ್ಞೆ ಕಾಡುವುದಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಜನರಿಗೆ ನೆಮ್ಮದಿಯ ಬದುಕು ಒದಗಿಸಲು ಆಗಿಲ್ಲ. ಮುಖ್ಯಮಂತ್ರಿ ಬಳಿ ಆಗಲೀ ಕಾಂಗ್ರೆಸ್ ನಾಯಕರ ಬಳಿಯಾಗಲೀ ಜನರು ಕಷ್ಟ ಹೇಳಿಕೊಳ್ಳುವುದಕ್ಕಾಗುತ್ತಿಲ್ಲ. ಆದರೆ, ನೀವು ಬೆಳೆಸಿರುವ ಮಗನಾದ ನಾನು ನಿಮ್ಮ ಬಳಿಗೇ ಬರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಂದೆ ಜೆಡಿಎಸ್ನ ಬಹುಮತದ ಸರ್ಕಾರ ಬರುತ್ತದೆ, ಐದು ವರ್ಷ ಆಡಳಿತ ನಡೆಸಲಿದೆ ಎಂದು ನೋವಿನಲ್ಲಿ ಇರುವವರಿಗೆ ಹೇಳಿದ್ದೇನೆ. ರೈತರು ಸಾಲಗಾರ ಆಗಬಾರದು ಎನ್ನುವುದು ನನ್ನ ಗುರಿ. ಕೇವಲ 37 ಶಾಸಕರನ್ನು ಇಟ್ಟುಕೊಂಡು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೆ. ನಮ್ಮನ್ನು ವಿರೋಧಿಸಿದ್ದವರೇ ಸರ್ಕಾರ ರಚಿಸೋಣ ಎಂದು ಬಂದಾಗ ರೈತರ ಸಾಲಾ ಮನ್ನ ಮಾಡುವ ಉದ್ದೇಶದಿಂದ ಜೊತೆ ಸೇರಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Sumalatha Ambareesh on BJP: ಮೋದಿಗೆ ಜೈ ಎಂದ ಸುಮಲತಾ, ಬಿಜೆಪಿಗೆ ಅಧಿಕೃತ ಬಾಹ್ಯ ಬೆಂಬಲ ಘೋಷಿಸಿದ ಪಕ್ಷೇತರ ಸಂಸದೆ
ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಗತಿ ಬಗ್ಗೆ ಭಾಷಣ ಮಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಬಡ ಜನರ ಮಕ್ಕಳು ಶಿಕ್ಷಣ ಪಡೆಯಲು ಆಗದೆ ಪರದಾಡುತ್ತಿದ್ದಾರೆ. ಎರಡು ಬಾರಿ ಹೃದಯ ಚಿಕಿತ್ಸೆ ಆಗಿದ್ದರೂ ಅರೋಗ್ಯ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್ ವಿದಾನಸಭೆಯಲ್ಲಿ ಸಂಪೂರ್ಣ ಹಾಜರಾತಿ ಹೊಂದಿದ ಶಾಸಕ ಆಗಿದ್ದಾರೆ. ಇವರಿಗೇ ಹಣದ ಆಫರ್ ನೀಡಿ ಕರೆದಿದ್ದರು. ಕೆಲವರು ಅವರು 30 ಕೋಟಿ ಹಣ ತಗೊಂಡು ಹೋಗುತ್ತಾರೆ ಎಂದು ಹೇಳಿದ್ದರು. ಆದರೆ ಅವರು, ರೇವಣ್ಣ, ದೇವೇಗೌಡರು, ಪ್ರಜ್ವಲ್ ಅವರಿಗೆ ದ್ರೋಹ ಮಾಡಲಾರೆ ಎಂಬುದಾಗಿ ಪ್ರಾಮಾಣಿಕವಾಗಿ ತಿಳಿಸಿದ್ದರು. ಅವರನ್ನು ಮತ್ತೊಮ್ಮೆ ಆಯ್ಕೆಮಾಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದಕ್ಕೂ ನಮಗೂ ಸಂಬಂಧವಿಲ್ಲ; ಕಾಂಗ್ರೆಸ್
ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಹೀಹಗಾಗಿ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದು ನಮಗೆ ಸಂಬಂಧಿಸಿದ ವಿಚಾರವಲ್ಲ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಚಿವ ವಿ. ಸೋಮಣ್ಣ, ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆಯೂ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ಶಾಸಕ ಮಾಡಾಳ್ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗ 40% ಕಮಿಷನ್ ಬಗ್ಗೆ ಮಾತನಾಡುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಸುಮಲತಾ ಬೆಂಬಲದಿಂದ ಬಿಜೆಪಿಗೆ ಲಾಭ; ಪ್ರತಾಪ್ ಸಿಂಹ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಿಸಿರುವುದರಿಂದ ಪಕ್ಷಕ್ಕೆ ದೊಡ್ಡ ಲಾಭವಾಗಲಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಮಾತನಾಡಿದ ಅವರು, ಸುಮಲತಾ ಬಿಜೆಪಿ ಸೇರ್ಪಡೆಯಾಗಲು ಕೆಲವು ಕಾನೂನು ತೊಡಕುಗಳಿವೆ. ಅವರ ಬೆಂಬಲದಿಂದ ಪಕ್ಷಕ್ಕೆ ಮಂಡ್ಯದಲ್ಲಿ ದೊಡ್ಡ ಶಕ್ತಿ ಬಂದಂತಾಗುತ್ತದೆ. ಬಹಳ ದಿನಗಳಿಂದ ಈ ಬೆಳವಣಿಗೆ ಎದುರು ನೋಡುತ್ತಿದ್ದೆವು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ