ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬೆಂಬಲಿಗರ ಪೈಪೋಟಿ; 50 ಕ್ಷೇತ್ರಗಳಿಗೆ ಅಂತಿಮಗೊಳ್ಳದ ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆ

ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಳೆದ ನಾಲ್ಕು ದಿನಗಳಿಂದ ಸಭೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಕೊನೆಗೂ ಒಮ್ಮತಕ್ಕೆ ಬರಲು ವಿಫಲರಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಸುಮಾರು 50 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿಲ್ಲ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬೆಂಬಲಿಗರ ಪೈಪೋಟಿ; 50 ಕ್ಷೇತ್ರಗಳಿಗೆ ಅಂತಿಮಗೊಳ್ಳದ ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆ
ಕಾಂಗ್ರೆಸ್ ನಾಯಕರು
Follow us
Ganapathi Sharma
|

Updated on: Mar 10, 2023 | 6:56 PM

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಳೆದ ನಾಲ್ಕು ದಿನಗಳಿಂದ ಸಭೆ ನಡೆಸುತ್ತಿರುವ ಕಾಂಗ್ರೆಸ್ (Congress) ನಾಯಕರು ಕೊನೆಗೂ ಒಮ್ಮತಕ್ಕೆ ಬರಲು ವಿಫಲರಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಸುಮಾರು 50 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿಲ್ಲ. ಈ ಜವಾಬ್ದಾರಿಯನ್ನು ಅವರು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ (CEC) ಬಿಟ್ಟಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ಮಾರ್ಚ್ 7 ಮತ್ತು 8 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದ್ದರು. ಇದರಲ್ಲಿ 120 ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. 50 ಕ್ಷೇತ್ರಗಳ ಹೆಸರುಗಳನ್ನು ಅಂತಿಮಗೊಳಿಸುವುದಕ್ಕಾಗಿ ಮತ್ತೆರಡು ದಿನ ಸಮಾಲೋಚನೆ ನಡೆಸಲಾಯಿತು. ಆದಾಗ್ಯೂ ಅಂತಿ ತೀರ್ಮಾನಕ್ಕೆ ಬರಲಾಗಿಲ್ಲ.

ಡಿಕೆಶಿ ಹಾಗೂ ಸಿದ್ದರಾಮಯ್ಯ ಬೆಂಬಲಿಗರ ಪೈಪೋಟಿ

ಈ 50 ಕ್ಷೇತ್ರಗಳಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಬಲಿಗರೇ ಇದ್ದಾರೆ. ಉಭಯ ನಾಯಕರ ಬೆಂಬಲಿಗರು ಪಟ್ಟು ಸಡಿಲಿಸಲು ಸಿದ್ಧರಿಲ್ಲ. ಸ್ಕ್ರೀನಿಂಗ್ ಸಮಿತಿಯ ಸಭೆಯನ್ನು ಎರಡು ದಿನ ವಿಸ್ತರಣೆ ಮಾಡಿದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಈಗ ಕೆಪಿಸಿಸಿ 120 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸಲು ಮುಂದಾಗಿದ್ದು, ಉಳಿದ 50 ಅಭ್ಯರ್ಥಿಗಳ ಆಯ್ಕೆ ವಿಚಾರವನ್ನು ಸಿಇಸಿಗೇ ಬಿಟ್ಟುಬಿಡಲು ಮುಂದಾಗಿದೆ. ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರು ಈಗ ಅಂತಿಮಗೊಳಿಸಿರುವ ಮತ್ತು ಅಂತಿಮಗೊಳ್ಳದ ಎರಡೂ ಪಟ್ಟಿಗಳನ್ನು ಸಿಇಸಿಗೆ ಸಲ್ಲಿಸುವ ಸಾಧ್ಯತೆ ಇದೆ.

ಏತನ್ಮಧ್ಯೆ, ತೀವ್ರ ಪೈಪೋಟಿ ಇರುವ ಉಳಿದ ಕ್ಷೇತ್ರಗಳ ಆಕಾಂಕ್ಷಿಗಳನ್ನು ಕರೆಸಿ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: BJP workers join Congress; ಬಿಜೆಪಿಯಿಂದ ಸಾಮಾಜಿಕ ನ್ಯಾಯದ ನಿರೀಕ್ಷೆ ಇಟ್ಟುಕೊಳ್ಳುವುದು ಅರ್ಥಹೀನ: ಸಿದ್ದರಾಮಯ್ಯ

ಮೊದಲ ಪಟ್ಟಿಯಲ್ಲಿ, ಕಾಂಗ್ರೆಸ್ ನಾಯಕರು 120 ಕ್ಕೂ ಹೆಚ್ಚು ಸ್ಥಾನಗಳ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರಲ್ಲಿ ಉನ್ನತ ನಾಯಕರು ಮತ್ತು ಹಾಲಿ ಶಾಸಕರು ಇರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಮಾಜಿ ಸಚಿವ ಎಚ್‌ಸಿ ಮಹದೇವಪ್ಪ ಅವರು ಪುತ್ರ ಸುನೀಲ್‌ಗೆ ಟಿ. ನರಸೀಪುರದಿಂದ ಮತ್ತು ತಮಗೆ ನಂಜನಗೂಡು ಟಿಕೆಟ್ ಬೇಕೆಂದು ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಅವರ ಮನವಿಯನ್ನು ಸ್ಕ್ರೀನಿಂಗ್ ಸಮಿತಿಯು ಅನುಮೋದಿಸಿಲ್ಲ ಮತ್ತು ಅಂತಿಮ ನಿರ್ಧಾರವನ್ನು ಸಿಇಸಿಗೆ ಬಿಟ್ಟಿದೆ ಎಂದು ವರದಿಯಾಗಿದೆ

ಗುರುವಾರ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿರುವ ಪುಟ್ಟಣ್ಣ ಅವರನ್ನು ರಾಜಾಜಿನಗರ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾಂಗ್ರೆಸ್ 140 ಸ್ಥಾನ ಗೆಲ್ಲಲಿದೆ ಎಂದ ಡಿಕೆಶಿ

ನಮ್ಮ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್​ 140, ಬಿಜೆಪಿ 65 ಸ್ಥಾನ ಗೆಲ್ಲಲಿದೆ ಎಂದು ರಾಮನಗರ ‌ಜಿಲ್ಲೆ ಮಾಗಡಿ ಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನುಡಿದಂತೆ ನಡೆಯುತ್ತದೆ. ಹೆಚ್​​ಡಿ ಕುಮಾರಸ್ವಾಮಿ ‌ಸಿಎಂ ಆಗಲು ಕಾಂಗ್ರೆಸ್ ಪಕ್ಷದ ತ್ಯಾಗ ಇತ್ತು. ಅವರ ಆಡಳಿತಾವಧಿಯಲ್ಲಿ ನೆನಪಿಟ್ಟುಕೊಳ್ಳುವಂತಹ ಯೋಜನೆ ಇದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.