ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಅಭಿವೃದ್ಧಿಯ ಪಥಕ್ಕೆ ಕೊಡುಗೆ: ಪ್ರಧಾನಿ ಮೋದಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಶಪಥ ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಲೋಕಾರ್ಪಣೆ ದಿನ ಸಮೀಪಿಸುತ್ತಿದ್ದಂತೆಯೇ ಟ್ವೀಟ್ ಮಾಡಿದ ಪ್ರಧಾನಿ, ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡಲಿದೆ ಎಂದಿದ್ದಾರೆ.
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ದಶಪಥ ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ. ಲೋಕಾರ್ಪಣೆ ದಿನ ಸಮೀಪಿಸುತ್ತಿದ್ದಂತೆಯೇ ಟ್ವೀಟ್ ಮಾಡಿದ ಪ್ರಧಾನಿ, ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡಲಿದೆ ಎಂದಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾಡಿದ್ದ ಟ್ವೀಟ್ಗೆ ರೀಟ್ವೀಟ್ ಮಾಡಿದ ಮೋದಿ, “ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡುವ ಪ್ರಮುಖ ಸಂಪರ್ಕ ಯೋಜನೆ” ಎಂದು ಹೇಳಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಯೋಜನೆಯ ನಿರ್ಮಾಣವು ಶ್ರೀರಂಗಪಟ್ಟಣ, ಕೂರ್ಗ್, ಊಟಿ ಮತ್ತು ಕೇರಳದಂತಹ ಪ್ರದೇಶಗಳಿಗೆ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಪ್ರವಾಸೋದ್ಯಮ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.
ಮೇಲೆ ಹೇಳಿದ ಯೋಜನೆಯು NH-275 ರ ಒಂದು ಭಾಗವನ್ನು ಒಳಗೊಂಡಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದರು. ಈ ಹೆದ್ದಾರಿಯು ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ಪ್ರಮುಖ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಮೇಲ್ಸೇತುವೆಗಳನ್ನು ಒಳಗೊಂಡಿದೆ ಎಂದು ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Mysuru Expressway: ಉದ್ಘಾಟನೆಗೆ ಮೋದಿ ಆಗಮನ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗ ಬದಲಾವಣೆ, ಇಲ್ಲಿದೆ ಪರ್ಯಾಯ ಮಾರ್ಗ
An important connectivity project which will contribute to Karnataka’s growth trajectory. https://t.co/9sci1sVSCB
— Narendra Modi (@narendramodi) March 10, 2023
ಪ್ರಧಾನಿ ಮೋದಿ ಅವರು ಭಾನುವಾರ (ಮಾರ್ಚ್ 12) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಯೋಜನೆಯು NH-275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ಆರು-ಪಥವನ್ನು ಒಳಗೊಂಡಿರುತ್ತದೆ. 118 ಕಿಲೋಮೀಟರ್ ಉದ್ದದ ಈ ಹೆದ್ದಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 6 ಲೇನ್ಗಳನ್ನು ಪ್ರಮುಖ ಕ್ಯಾರೇಜ್ವೇ ಆಗಿ ಗುರುತಿಸಲಾಗಿದ್ದು, ಎರಡೂ ಬದಿಗೆ 2 ಲೇನ್ನ ಸರ್ವೀಸ್ ರಸ್ತೆ ಇರಲಿದೆ.
ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾದರೆ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯ ಸುಮಾರು 3.5 ಗಂಟೆಯಿಂದ 1.5 ಗಂಟೆಗೆ ಇಳಿಕೆಯಾಗಲಿದೆ. 8 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು, 64 ಅಂಡರ್ ಪಾಸ್ಗಳು, 11 ಓವರ್ ಪಾಸ್ಗಳು, 4 ರೈಲ್ವೆ ಮೇಲ್ಸೇತುವೆಗಳು, 5 ಬೈಪಾಸ್ಗಳನ್ನು (ಮಂಡ್ಯ, ಮದ್ದೂರು, ರಾಮನಗರ, ಚನ್ನಪಟ್ಣ, ಬಿಡಡಿ) ಸಂಚಾರ ದಟ್ಟಣೆ ತಡೆಯುವ ಸಲುವಾಗಿ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಮೈಸೂರಿನ ನಡುವಣ ಸಂಪರ್ಕದ ದೃಷ್ಟಿಯಿಂದ ಈ ಎಕ್ಸ್‌ಪ್ರೆಸ್ ವೇ ಮಹತ್ವದ್ದಾಗಿದ್ದು, ಊಟಿ, ಕೇರಳ, ಕೊಡಗು ಪ್ರದೇಶಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿಯೂ ಪ್ರಮುಖವಾಗಿದೆ. ಅದೇ ರೀತಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದಲೂ ಪ್ರಮುಖವಾದದ್ದಾಗಿದೆ ಎಂದು ಸರ್ಕಾರ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:42 pm, Fri, 10 March 23