Mysuru Expressway: ಉದ್ಘಾಟನೆಗೆ ಮೋದಿ ಆಗಮನ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗ ಬದಲಾವಣೆ, ಇಲ್ಲಿದೆ ಪರ್ಯಾಯ ಮಾರ್ಗ
ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಂಡ್ಯದ ಮದ್ದೂರು ತಾಲೂಕಿನಲ್ಲಿ ಲೋಕಾರ್ಪಣೆಗೊಳಿಸುವ ಹಿನ್ನೆಲೆ ದಶಪಥ ಹೆದ್ದಾರಿಯನ್ನು ಅರ್ಧಕ್ಕರ್ಧ ಬಂದ್ ಮಾಡಲಾಗಿದೆ.
ಬೆಂಗಳೂರು: ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದಶಪಥ ಹೆದ್ದಾರಿಯನ್ನು (Bengaluru-Mysuru Expressway) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ (ಮಾ.12) ಮಂಡ್ಯದ ಮದ್ದೂರು ತಾಲೂಕಿನಲ್ಲಿ ಲೋಕಾರ್ಪಣೆಗೊಳಿಸುವ ಹಿನ್ನೆಲೆ ದಶಪಥ ಹೆದ್ದಾರಿಯನ್ನು ಅರ್ಧಕ್ಕರ್ಧ ಬಂದ್ ಮಾಡಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಮಂಡ್ಯ ಜಿಲ್ಲಾಧಿಕಾರಿ ಹೆಚ್ ಎನ್ ಗೋಪಾಲಕೃಷ್ಣ ಮಂಡ್ಯ ನಗರ ಮತ್ತು ಮದ್ದೂರು ಠಾಣಾ ವ್ಯಾಪ್ತಿಯ ಗೆಜ್ಜಲಗೆರ ಕಾಲೋನಿ ಬಳಿ ಪ್ರಧಾನಿಗಳ ಸಾರ್ವಜನಿಕ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಆಗಮಿಸಲಿದ್ದಾರೆ. ಹಾಗೇ ಅತಿಥಿ ಗಣ್ಯರು ಭಾಗವಹಿಸಲಿದ್ದು, ಭದ್ರತಾ ದೃಷ್ಟಿಯಿಂದ ಮಾರ್ಚ್ 12 ರಂದು ಬೆಳಿಗ್ಗೆ 6 ರಿಂದ ಸಾಯಂಕಾಲ 6 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದರ ಪಟ್ಟಿ ಬಿಡುಗಡೆ
ಮಾರ್ಗ ಬದಲಾವಣೆ
ಮೈಸೂರು ಬೆಂಗಳೂರು, ಬೆಂಗಳೂರು ಮಲೆಮಹಾದೇಶ್ವರ, ಮೈಸೂರು ತುಮಕೂರು ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
1. ಮೈಸೂರಿನಿಂದ ಬೆಂಗಳೂರಿಗೆ ಮಂಡ್ಯ, ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ಮೈಸೂರು – ಬನ್ನೂರು – ಕಿರುಗಾವಲು – ಮಳವಳ್ಳಿ – ಹಲಗೂರು – ಕನಕಪುರ – ಬೆಂಗಳೂರು ಮಾರ್ಗವಾಗಿ ತೆರಳಬೇಕು.
2. ಮೈಸೂರಿನಿಂದ ತುಮಕೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ಮೈಸೂರು – ಶ್ರೀರಂಗಪಟ್ಟಣ – ಪಾಂಡವಪುರ – ನಾಗಮಂಗಲ – ಬೆಳ್ಳೂರು ಕ್ರಾಸ್ – ತುಮಕೂರು ಮಾರ್ಗವಾಗಿ ಹೋಗಬೇಕು.
3. ತುಮಕೂರಿನಿಂದ ಮೈಸೂರಿಗೆ ಮದ್ದೂರು ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ತುಮಕೂರು- ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ- ಶ್ರೀರಂಗಪಟ್ಟಣ ಮೈಸೂರು ಮಾರ್ಗವಾಗಿ ಸಂಚರಿಸಬೇಕು.
4. ಬೆಂಗಳೂರಿನಿಂದ ಮೈಸೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ಬೆಂಗಳೂರು – ಚನ್ನಪಟ್ಟಣ – ಹಲಗೂರು – ಮಳವಳ್ಳಿ – ಕಿರುಗಾವಲು -ಬನ್ನೂರು – ಮೈಸೂರು ಮಾರ್ಗವಾಗಿ ಸಂಚರಿಸಬೇಕು.
5. ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲ-ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲ ರೀತಿಯ ವಾಹನಗಳು ಬೆಂಗಳೂರು – ಚನ್ನಪಟ್ಟಣ – ಹಲಗೂರು – ಮಳವಳ್ಳಿ – ಕೊಳ್ಳೇಗಾಲ ಮಹದೇಶ್ವರಬೆಟ್ಟ ಮಾರ್ಗವಾಗಿ ಸಂಚರಿಸಬೇಕು.
ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದ್ದೇ ಆದರೆ ಅಂತವರ ವಿರುದ್ಧ ಕೂನೂನು ರೀತ್ಯಾ ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 am, Fri, 10 March 23