ಬಿಡದಿ ಟೌನ್‌ಶಿಪ್: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಪೀಕಲು ಯತ್ನಿಸಿದ್ದ 12 ಜನ ಅರೆಸ್ಟ್
ಬಿಡದಿ ಭಾಗದಲ್ಲಿ ಪ್ರಸ್ತಾಪವಾಗಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (ಬಿಡದಿ ಟೌನ್‌ಶಿಪ್) ಯೋಜನೆ ವಿರುದ್ಧ ರೈತರು ಮತ್ತು ಸರ್ಕಾರದ ನಡುವಿನ ಭೂಸ್ವಾಧೀನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲ ರೈತರು ಭೂಸ್ವಾಧೀನಕ್ಕೆ ಒಪ್ಪಿಕೊಂಡು ಸರ್ಕಾರಿಂದ ಪರಿಹಾರ ಪಡೆದುಕೊಂಡಿದ್ದು, ಕೆಲವರು ಯಾವುದೇ ಕಾರಣಕ್ಕೆ ತಮ್ಮ ಭೂಮಿ ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆ ಕೆಲ ಖದೀಮರು ಕೋಟ್ಯಂತರ ರೂ. ಪರಿಹಾರ ಹಣ ದೋಚಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು ದಕ್ಷಿಣ, (ಸೆಪ್ಟೆಂಬರ್ 30): ಬಿಡದಿ ಟೌನ್‌ಶಿಪ್ ವಿಚಾರವಾಗಿ ರೈತರು ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಕೆಲ ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನು ನೀಡಲ್ಲ ಎಂದಿದ್ದಾರೆ. ಇದರ ಮಧ್ಯೆ ಈ ಯೋಜನೆ ಬಗ್ಗೆ ಪರ ವಿರೋಧಗಳ ಚರ್ಚೆಗಳು ನಡೆಯುತ್ತಿದ್ದು, ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಲು ಯತ್ನಿಸಿದ್ದ ಜಾಲವನ್ನು ಪೊಲೀಸರು ಹಿಡಿದಿದ್ದಾರೆ.ಹೌದು…ಅರಳಾಳುಸಂದ್ರ ಗ್ರಾಮದಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಹಣ ಪೀಕಲು ಮುಂದಾಗಿದ್ದ 12 ಆರೋಪಿಗಳನ್ನು ಬಂಧಿಸುವಲ್ಲಿ ಬಿಡದಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ರೈತರ ಹೆಸರಿನಲ್ಲಿ ನಕಲಿ ದಾಖಲೆಗಳು ಸೃಷ್ಟಿ
ಬಿಡದಿ ಟೌನ್‌ಶಿಪ್ ಯೋಜನೆ ಸಂಬಂಧಿಸಿದಂತೆ ಅರಳಾಳುಸಂದ್ರ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್ಗಳು ಇರುವ ಮೂರೂವರೆ ಎಕರೆಯ ಮೂಲ ವಾರಸುದಾರರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಪರಿಹಾರದ ಹಣ ದೋಚಲು ಗ್ಯಾಂಗ್ ಮುಂದಾಗಿತ್ತು. ದಾಬಸ್ಪೇಟೆ ನಿವಾಸಿ ತರುಣ್, ಇಡೀ ಪ್ರಕರಣದ ಕಿಂಗ್ ಪಿನ್ ಆಗಿದ್ದು, ಈತ ಈ ಹಿಂದೆ ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತನ್ನದೇ ಗ್ಯಾಂಗ್ ಕಟ್ಟಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ಹಣ ದೋಚುತ್ತಿದ್ದ. ಅದರಂತೆ ವಿವಾದಿತ ಬಿಡದಿ ಟೌನ್‌ಶಿಪ್ ಯೋಜನೆಯಲ್ಲೂ ಸಹ ರೈತರ ಹೆಸರಿನಲ್ಲಿ ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಸೃಷ್ಟಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಸಹಿ ಹಾಗೂ ಸೀಲ್ ನಕಲಿ ಮಾಡಿದ್ದು, ಎಲ್ಲಾ ನಕಲಿ ದಾಖಲಾತಿಗಳೊಂದಿಗೆ ಪರಿಹಾರಕ್ಕಾಗಿ ಜಿಬಿಡಿಎ ಕಚೇರಿಗೆ ಸಲ್ಲಿಕೆ ಮಾಡಿದ್ದ.
ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆ: ಭೂಸ್ವಾಧೀನಕ್ಕೆ ಭೂಮಿ ಕೊಡುವ ರೈತರ ಮೇಲೆ ವಂಚಕರ ಕಣ್ಣು; ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂ. ಪೀಕಲು ಯತ್ನ
ನಕಲಿ ಜಾಲ ಬೆಳಕಿಗೆ ಬಂದಿದ್ಹೇಗೆ?
ಆದ್ರೆ, ದಾಖಲೆಗಳ ಪ್ರಾಥಮಿಕ ಭೌತಿಕ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಸೆಪ್ಟೆಂಬರ್ 3ರಂದು GBDA ಅಧಿಕಾರಿಗಳು ಪರಿಶೀಲನೆಗಾಗಿ ರಾಮನಗರ ತಹಶೀಲ್ದಾರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದೂರಿನ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿ ಇದೀಗ ಪ್ರಕರಣದ ಕಿಂಗ್ ಪಿನ್ ತರುಣ್ ಸೇರಿದಂತೆ 12 ಜನರ ತಂಡವನ್ನು ಬಂಧಿಸಿದ್ದಾರೆ.




