ಕನಕಪುರದಲ್ಲಿ ಅಚ್ಚರಿಯ ಘಟನೆ: ವಿಚಿತ್ರವಾಗಿ ವರ್ತಿಸುತ್ತಿದ್ದ ಮಹಿಳೆ ಕಾಲಿಗೆ ಬೀಳುತ್ತಿದ್ದಂತೆ ಕುಸಿದು ಬಿದ್ದು ಅರ್ಚಕ ಸಾವು
ರಾಮನಗರದ ಕನಕಪುರದಲ್ಲೊಂದು ಅಚ್ಚರಿಯ ಘಟನೆ ಇಂದು ನಡೆದಿದೆ. ಅಗ್ನಿಕೊಂಡೋತ್ಸವದ ಅಂಗವಾಗಿ ಮಾವತ್ತೂರು ಗ್ರಾಮದಲ್ಲಿ ದೇವರ ಮೆರವಣಿಗೆ ನಡೆಯುತ್ತಿದ್ದಾಗ ಅರ್ಚಕರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಅಚ್ಚರಿ ಏನು ಗೊತ್ತಾ? ಇಲ್ಲಿದೆ ನೋಡಿ.
ರಾಮನಗರ: ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಮಾವತ್ತೂರು ಗ್ರಾಮದ ಜನರು ಭಯ ಭಕ್ತಿ, ಶ್ರದ್ಧೆಯಿಂದ ಮಾವತ್ತೂರಮ್ಮ ದೇವಿಯನ್ನು (Mavatturamma Devi) ಪೂಜಿಸುತ್ತಾ ಬರುತ್ತಿದ್ದಾರೆ. ಆದರೆ ಇಂದು ಬೆಳಗ್ಗೆ ನಡೆಯಬಾರದ ಘಟನೆಯೊಂದು ನಡೆದೇ ಹೋಗಿದೆ. ದೇವಿಯ ಮೆರವಣಿಗೆ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ. ಹೌದು, ಮಾವತ್ತೂರಮ್ಮ ದೇವಿಯ ಮೆರವಣಿಗೆ ವೇಳೆ ದೇವಿಯ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಇದಕ್ಕೂ ಮುನ್ನ ಅಚ್ಚರಿಯ ಘಟನೆಯೊಂದು ಅಲ್ಲಿ ನಡೆದಿದೆ. ಅದೇನೆಂದರೆ, ಮಾವತ್ತೂರಮ್ಮ ದೇವಿಯ ಮೆರವಣಿಗೆ ನಡೆಯುತ್ತಿದ್ದಾಗ ಮಹಿಳೆಯ ವಿಚಿತ್ರ ಕುಣಿತ.
ಮಾವತ್ತೂರಮ್ಮ ದೇವಿಯ ಮೆರವಣಿಗೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಮಹಿಳೆ ವಿಚಿತ್ರವಾಗಿ ಕುಣಿಯಲು ಆರಂಭಿಸಿದ್ದಾಳೆ. ಇದನ್ನ ನೋಡಿದ ಮಾವತ್ತೂರಮ್ಮ ದೇವಿಯ ಅರ್ಚಕ ನಾಗರಾಜು (55) ಮಹಿಳೆಗೆ ಬೆತ್ತದಿಂದ ಹೊಡೆಯುತ್ತಾರೆ. ಈ ವೇಳೆ ಮಹಿಳೆ ಅರ್ಚಕನ ಕಾಲಿಗೆ ಬೀಳುತ್ತಿದ್ದಂತೆ ಅರ್ಚಕ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ತಕ್ಷಣ ಅರ್ಚಕರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯೆ ನಾಗರಾಜು ಕೊನೆಯುಸಿರೆಳೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Mon, 3 April 23