ರಾಮನಗರ, ಡಿ.16: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಬಾವ ಮಹದೇವಯ್ಯ ಪಿ. ಅವರ ಕೊಲೆ (Murder) ಪ್ರಕರಣ ಸಂಬಂಧ ತಮಿಳುನಾಡು ಮೂಲದ ಆರೋಪಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಶುಕ್ರವಾರ ತಮಿಳುನಾಡಿನ ಧರ್ಮಪುರಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಮುರುಗೇಶ್ ವಶಕ್ಕೆ ಪಡೆಯಲಾದ ಆರೋಪಿ. ಮುರುಗೇಶ್ ಬಲಗಾಲಿಗೆ ಹಾವು ಕಚ್ಚಿದ ಕಾರಣ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಈಗ ಆರೋಪಿ ಮುರುಗೇಶ್ಗೆ ಚನ್ನಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದೇ ತಿಂಗಳ 2ನೇ ತಾರೀಖು ಶುಕ್ರವಾರ ಮಧ್ಯ ರಾತ್ರಿ ಆರೋಪಿ ಮುರುಗೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆ ಮಾಡಿದ ನಂತರ ಹಂತಕರು ಕಾಡಿನಲ್ಲಿ ಮೃತದೇಹ ಅಡಗಿಸಿಟ್ಟಿದ್ದರು. ಮೂರು ಜನರ ಪೈಕಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹದೇವಯ್ಯ ಪಕ್ಕದ ಜಮೀನಿನಲ್ಲಿ ಆರೋಪಿ ಮುರುಗೇಶ್ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದಿನಿಂದ ಕೆಲಸಕ್ಕೆ ಬರ್ತಾ ಇರಲಿಲ್ಲ. ಹಲವು ಸಿಸಿ ಟಿವಿ ಪರಿಶೀಲನೆ ಬಳಿಕ ವಶಕ್ಕೆ ಪಡೆಯಲಾಗಿದೆ. ಚಿಕಿತ್ಸೆ ಬಳಿಕ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಕೋರ್ಟ್ ಗೆ ಪ್ರೊಡ್ಯೂಸ್ ಮಾಡಲಿದ್ದಾರೆ.
ಇದನ್ನೂ ಓದಿ: ಸಿಪಿ ಯೋಗೇಶ್ವರ್ ಸಂಬಂಧಿ ರಿಯಲ್ಟರ್ ಮಹದೇವಯ್ಯ ಹತ್ಯೆಗೆ ಸುಪಾರಿ ನೀಡಲಾಗಿತ್ತೇ?
ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರವರ ಬಾವ ಮಹಾದೇವಯ್ಯ ಚನ್ನಪಟ್ಟಣದ ವಡ್ಡರದೊಡ್ಡಿಯ ತೋಟದ ಮನೆಯಿಂದ ತಡರಾತ್ರಿ ಅನುಮಾನಸ್ಪದವಾಗಿ ನಾಪತ್ತೆಯಾಗಿದ್ದರು. ಪ್ರಕರಣ ಸುತ್ತ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಮಹದೇವಯ್ಯರನ್ನ ಕಿಡ್ನಾಪ್ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕುಟುಂಬಸ್ಥರು ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ರು. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಚಾಮರಾಜನಗರ ಜಿಲ್ಲೆ ಹನೂರಿನ ತಾಲೂಕಿನ ರಾಮಾಪುರದ ಬಳಿ ಮಹದೇವಯ್ಯ ಕಾರು ಪತ್ತೆಯಾಗಿ, ಕಾರಿನ ಹಿಂಭಾಗ ರಕ್ತದ ಕಲೆ ಇದ್ದ ಹಿನ್ನೆಲೆ ಮಹದೇವಯ್ಯರನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಕಾರು ನಿಲ್ಲಿಸಿದ್ದ ಸುತ್ತಮುತ್ತಿನ ಸ್ಥಳಗಳ ಸಿಸಿಟಿವಿ ಪರಿಶೀಲಿಸಿದ ಪೊಲೀಸರು, ಕಿಡ್ನಾಪ್ ಮಾಡಿದ್ದ ಆರೋಪಿಗಳ ಚಲನವಲನಗಳ ಆಧರಿಸಿ ರಾಮಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ಮಹದೇವಯ್ಯ ಅವರನ್ನು ಬರ್ಬರವಾಗಿ ಹತ್ಯೆಗೈದು ಶವ ಬಿಸಾಡಿ ಹೋಗಿದ್ದು ಬೆಳಕಿಗೆ ಬಂದಿತ್ತು.
ರಿಯಲ್ ಎಸ್ಟೇಟ್ ಉದ್ಯಮ, ಜಮೀನು ವ್ಯವಹಾರ ನೋಡಿಕೊಳ್ತಿದ್ದ ಮಹದೇವಯ್ಯ ಅವರನ್ನು ಇಷ್ಟೊಂದು ಕ್ರೂರವಾಗಿ ಹತ್ಯೆಗೈಯಲು ಕಾರಣ ಏನು ಎಂಬುದರ ಹಿಂದೆ ಹೊರಟ ಪೋಲಿಸರಿಗೆ ಕೆಲವೊಂದು ಸಾಕ್ಷ್ಯಾಧಾರಗಳು ಸಿಕ್ಕಿದ್ದವು. ತನಿಖೆ ಚುರುಕುಗೊಳಿಸಿದ ಪೊಲೀಸರು ಮೂವರು ಆರೋಪಿಗಳ ಪೈಕಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:08 pm, Sat, 16 December 23