ಹೆಚ್​ ಡಿ ಕುಮಾರಸ್ವಾಮಿ, ನಿಖಲ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್‌ ಏಕವಚನದಲ್ಲಿ ವಾಗ್ದಾಳಿ

ನಮ್ಮ ಪಕ್ಷದ ಯುವ ಕಾರ್ಯಕರ್ತನ ಮೇಲೆ ಹೆಚ್​. ಡಿ ಕುಮಾರಸ್ವಾಮಿ ಬಲಗೈ ಬಂಟ, ಬೇನಾಮಿ ಕಂಟ್ರ್ಯಾಕ್ಟರ್‌ ನಾಗರಾಜ ಮತ್ತು ಬೆಂಬಲಿಗರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಎಂಎಲ್​ಸಿ​ ಸಿ.ಪಿ.ಯೋಗೇಶ್ವರ್‌, ಹೆಚ್​. ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್​ ಡಿ ಕುಮಾರಸ್ವಾಮಿ, ನಿಖಲ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್‌ ಏಕವಚನದಲ್ಲಿ ವಾಗ್ದಾಳಿ
ಎಂಎಲ್​ಸಿ ಸಿಪಿ ಯೋಗೇಶ್ವರ್
Edited By:

Updated on: Oct 03, 2022 | 11:00 PM

ರಾಮನಗರ: ನಮ್ಮ ಪಕ್ಷದ ಯುವ ಕಾರ್ಯಕರ್ತನ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಬಲಗೈ ಬಂಟ, ಬೇನಾಮಿ ಕಂಟ್ರ್ಯಾಕ್ಟರ್‌ ನಾಗರಾಜ ಮತ್ತು ಬೆಂಬಲಿಗರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್‌ (C P Yogeshwar), ಹೆಚ್​. ಡಿ ಕುಮಾರಸ್ವಾಮಿ (HD Kumarswamy) ವಿರುದ್ಧ ಚೆನ್ನಪಟ್ಟಣದಲ್ಲಿ (Chennapattana) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಚನ್ನಪಟ್ಟಣದ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತ ಸಿದ್ದನಹಳ್ಳಿ ನಿವಾಸಿ ಸಿದ್ದೇಗೌಡ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತನ ಮೇಲೆ ಜೆಡಿಎಸ್ ಮುಖಂಡ ಹಾಗೂ ಗುತ್ತಿಗೆದಾರ ನಾಗರಾಜ್ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದರು.

ಈ ಕುರಿತು ಮಾತನಾಡಿದ ಅವರು ನಮ್ಮ ಕಾರ್ಯಕರ್ತ ಸಾವು ಬದುಕಿನ‌ ನಡುವೆ ಹೋರಾಟ ಮಾಡುತ್ತಿದ್ದಾನೆ. ಹೆಚ್ಚಿನ ಚಿಕಿತ್ಸಗೆ ಮಂಡ್ಯಕ್ಕೆ ಕಳುಹಿಸಲಾಗಿದೆ. ಕುಮಾರಸ್ವಾಮಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಹತಾಶ ಮನೋಭಾವ ಬಂದು ಈ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಕಿಡಿಕಾರಿದರು.

ನಾಗರಾಜು ಎಂಬಾತನೇ ಬೇರೆ ಬೇರೆ ಹೆಸರಿನಿಂದ ಕಂಟ್ರಾಕ್ಟರ್ ಕೆಲಸ ಮಾಡಿದ್ದಾನೆ. ಆಗಿರುವ ಕಾಮಗಾರಿಗೆ ಕುಮಾರಸ್ವಾಮಿ ಅವರು ಪೂಜೆ ಮಾಡಿದ್ದಾರೆ. ಇದರ ಮಾಹಿತಿ ಕೇಳಲು ಹೋದಾಗ ಹಲ್ಲೆ ಮಾಡಿದ್ದರೆ. ಕೊಲೆ ಮಾಡಬೇಕು ಎಂದು ತೀರ್ಮಾನ ಮಾಡಿ ಹಲ್ಲೆ ಮಾಡಿದ್ದಾರೆ. ಇದನ್ನು ಕುಮಾರಸ್ವಾಮಿ ‌ಯೋಚನೆ ಮಾಡಬೇಕು. ಮೊನ್ನೆಯ‌ ನಡೆದ ಗಲಾಟೆಯ ಮುಂದುವರೆದ ಭಾಗ ಇದು ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿ ಅವರ ಕಾರ್ಯವೈಖರಿ ಬಗ್ಗೆ ಯಾರು ಪ್ರಶ್ನೆ ಮಾಡಬಾರದು? ಮೊನ್ನೆ ಬೇರೆ ಜಿಲ್ಲೆಗಳಿಂದ ಗೂಂಡಾಗಳನ್ನು ಕರೆಸಿ ಗಲಾಟೆ ಮಾಡಿಸಿದ್ದಾರೆ. ಅವರೇ ಗಲಾಟೆ ಮಾಡಿಸಿ, ದಬ್ಬಾಳಿಕೆ ‌ನಡೆಸಿ ಅವರೇ ದೂರು ಕೊಡಿಸುತ್ತಾರೆ. ಅವರೇ ಸಿಎಂ ಅವರ ಹತ್ತಿರ ಮಾತನಾಡುತ್ತೇನೆ ಎನ್ನುತ್ತಾರೆ. ಅಧಿಕಾರಿಗಳಿಗೆ ಧಮ್ಕಿ ಕೊಡಿಸುತ್ತಾರೆ ಎಂದು ಹೇಳಿದರು.

ಅವರ ಮಗ‌ ನಿಖಿಲ್ ಕುಮಾರಸ್ವಾಮಿ ಪಲಾಟಂ ಕರೆದುಕೊಂಡು ಬಂದು ಪೊಲೀಸ್ ಠಾಣೆ ಮೇಲೆ ದಾಳಿ‌ ಮಾಡುತ್ತಾನೆ. ಎಲ್ಲಿದೆ ಕಾನೂನು ‌ಸುವ್ಯವಸ್ಥೆ ? ಪೊಲೀಸರಿಗೆ ಧಮ್ಕಿ ಹಾಕುತ್ತಾನೆ. ಮೊದಲಿನಿಂದಲೂ ರಾಮನಗರ ಜಿಲ್ಲೆಯಲ್ಲಿ ಗೂಂಡಾಗಿರಿ, ದಬ್ಬಾಳಿಕೆ‌ ಮಾಡಿಕೊಂಡು ಬಂದವರು. ಇದು ಕುಮಾರಸ್ವಾಮಿ ಅವರಿಗೆ ಕೊನೆಯ ರಾಜಕೀಯ ‌ಜೀವನ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ಬಲಗೈ ಬಂಟ ನಾಗರಾಜ್ ತಾಲೂಕಿನಲ್ಲಿ ಫೋಸ್ಟರ್ ಹಾಕುವುದು, ಎಲ್ಲ ಕಂಟ್ರಾಕ್ಟರ್ ಮಾಡುವುದು ಇವನೆ. ಯುವಕ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಮಾಡಿದ್ದಾರೆ. ಗೂಂಡಾ ಸಂಸ್ಕೃತಿ‌ ಮಟ್ಟ ಹಾಕಿ ಎಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಜೊತೆ ಮಾತನಾಡಿ ಕಾನೂನು ಸುವ್ಯವಸ್ಥೆ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆದ್ದ ಮೇಲೆ ಹಳ್ಳಿಗಳಿಗೆ ಹೋಗಲಿಲ್ಲ, ಅಭಿವೃದ್ಧಿ ‌ಮಾಡಲಿಲ್ಲ. ಅವನೇನೂ ಕೆಡಿಪಿ‌, ತಾಲೂಕು, ಗ್ರಾಪಂ ಸಭೆ ಮಾಡಲಿಲ್ಲ. ಯಾವ ಶಾಸಕ ರೀ ? ಇವರು ಕಾನೂನು, ಶಿಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನಮ್ಮ ಮೇಲೆ ಪದೇ ಪದೇ ದೌರ್ಜನ್ಯ ಮಾಡುತ್ತಿದ್ದಾರೆ. ನಾವು ಯಾವುದೇ ರೀತಿಯ ಗಲಾಟೆಗೆ ಆಸ್ವದ ಕೊಡುವುದಿಲ್ಲ. ಮೊನ್ನೆ ಆದ ಘಟನೆ ಪೂರ್ವ ನಿಯೋಜಿತ ಘಟನೆ. ಗಲಾಟೆ ‌ಮಾಡಲು ನಾಲ್ಕೈದು ಟೀಂ ಬಂದಿತ್ತು. ಹಿಂದೆ ಹಲವಾರು ಈ ರೀತಿಯ ಘಟನೆಗಳನ್ನು ಪ್ರಚೋದನೆ ಮಾಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರು. ಅದೇ ಪ್ರಯೋಗ ಚನ್ನಪಟ್ಟಣದಲ್ಲಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತನಿಗೆ ಹೊಡೆದಿರುವುದು ದುರದೃಷ್ಟಕರ. ಬಹಳ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 pm, Mon, 3 October 22