ರಾಮನಗರ: ಡಿಸಿ ಕಚೇರಿಗೆ ವಕೀಲರ ದಿಗ್ಬಂಧನ; ಮನೆಗೆ ಹೋಗಲಾಗದೆ ಕಚೇರಿಯಲ್ಲೇ ಕುಳಿತ ಜಿಲ್ಲಾಧಿಕಾರಿ

ಎಸ್​ಡಿಪಿಐ ಕಾರ್ಯಕರ್ತ ಚಾಂದ್ ಪಾಷಾರ ಕಡೆಯೊಬ್ಬರು ನೀಡಿದ್ದ ಸುಳ್ಳು ದೂರಿನ ಆಧಾರದ ಮೇಲೆ ರಾಮನಗರದ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್​ಐಆರ್​ ದಾಖಲಿಸಿರುವ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದು, ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ವಕೀಲರು ದಿಗ್ಬಂಧನ ಹಾಕಿದರು. ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮನೆಗೆ ಹೋಗಲು ಬಿಡದೆ ವಕೀಲರು ಮುತ್ತಿಗೆ ಹಾಕಿದರು.

ರಾಮನಗರ: ಡಿಸಿ ಕಚೇರಿಗೆ ವಕೀಲರ ದಿಗ್ಬಂಧನ; ಮನೆಗೆ ಹೋಗಲಾಗದೆ ಕಚೇರಿಯಲ್ಲೇ ಕುಳಿತ ಜಿಲ್ಲಾಧಿಕಾರಿ
ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ವಕೀಲರು
Edited By:

Updated on: Feb 19, 2024 | 9:09 PM

ರಾಮನಗರ, ಫೆ.19: ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್​ಐಆರ್ ದಾಖಲಿಸಿದ ರಾಮನಗರದ (Ramanagara) ಐಜೂರು ಪೊಲೀಸ್ ಠಾಣೆಗೆ ಪಿಎಸ್​​ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ಇಂದು ವಕೀಲರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಮುತ್ತಿಗೆ ಹಾಕಿದ್ದು, ಮನೆಗೆ ಹೋಗಲು ಬಿಡದೆ ಜಿಲ್ಲಾಧಿಕಾರಿಗೆ ಕಚೇರಿಗೆ ದಿಗ್ಬಂಧನ ಹಾಕಿದರು.

ಕಚೇರಿಯ ಎರಡೂ ಗೇಟ್‌ ಮುಂಭಾಗದಲ್ಲಿ ವಕೀಲರು ಧರಣಿ ಕುಳಿತಿದ್ದಾರೆ. ಇಡೀ ರಾತ್ರಿ‌ ಧರಣಿ ಕುಳಿತುಕೊಳ್ಳುತ್ತೇವೆ ಎಂದು ವಕೀಲರು ಪಟ್ಟು ಹಿಡಿದಿದ್ದು, ವಿಧಿ ಇಲ್ಲದೆ ಜಿಲ್ಲಾಧಿಕಾರಿಯವರು ಕಚೇರಿಯಲ್ಲೇ ಕುಳಿತಿದ್ದಾರೆ. ಅಷ್ಟೇ ಅಲ್ಲ, ಪ್ರತಿಭಟನೆಗೆ ಬಂದೋಬಸ್ತ್​​ಗಾಗಿ ಬಂದಿರುವ ಪೊಲೀಸರನ್ನು ಹೊರ ಹೋಗದಂತೆ ತಡೆದಿರುವ ವಕೀಲರು, ಪೊಲೀಸ್ ಸಿಬ್ಬಂದಿ ಮೂತ್ರ ವಿಸರ್ಜನೆಗೆ ತೆರಳದಂತೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಮಸಿದಿ ತೀರ್ಪು: ವಾರಾಣಸಿ ಜಿಲ್ಲಾ ಕೋರ್ಟ್​ನ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್​​, ವಕೀಲ ಅರೆಸ್ಟ್​​

ಇದಕ್ಕೂ ಮುನ್ನ, 40 ವಕೀಲರ ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್​ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ಐಜೂರು ಸರ್ಕಲ್ ಬಳಿ ಸುಮಾರು 300ಕ್ಕೂ ಹೆಚ್ಚು ವಕೀಲರಿಂದ ಪ್ರತಿಭಟನಾ ರ್ಯಾಲಿ ಮಾಡಿದ್ದರು. ಪ್ರತಿಭಟನಾ ಮೆರವಣಿಗೆ ಕಚೇರಿಗೆ ತಲುಪುವ ಮುನ್ನವೇ ಜಿಲ್ಲಾಧಿಕಾರಿ ಊಟಕ್ಕೆ ತೆರಳಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಗೃಹಸಚಿವರು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ಡಿಸಿ ಕಚೇರಿ ಮುಂದೆಯೇ ಧರಣಿ ಕುಳಿತರು. ಬಳಿಕ ಡಿಸಿ ಅವಿನಾಶ್ ಮತ್ತು ಎಸ್​ಪಿ ಕಾರ್ತಿಕ್ ರೆಡ್ಡಿ ಅವರು ಊಟ ಬಿಟ್ಟು ಮನವಿ ಸ್ವೀಕರಿಸಲು ಕಚೇರಿಗೆ ಆಗಮಿಸಿದರು.

ಈ ವೇಳೆ ಮಾತನಾಡಿದ ಡಿಸಿ‌ಜಿಲ್ಲಾಧಿಕಾರಿ ಡಾ.ಅವಿನಾಶ್​ ತಪ್ಪು ಮಾಡಿದರೆ ತನಿಖೆ ಮಾಡಿ‌ ಕ್ರಮ ತಗೊಳ್ಳುತ್ತೇವೆ. ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದಿದ್ದರು. ಈ ವೇಳೆ ಜಿಲ್ಲಾಧಿಕಾರಿಗೆ 2 ಗಂಟೆಗಳ ಡೆಡ್​​ಲೈನ್​ ನೀಡಿದ ವಕೀಲರು, 2 ಗಂಟೆಯೊಳಗೆ ಒಂದು ನಿರ್ಧಾರಕ್ಕೆ ಬಂದು ಪಿಎಸ್​ಐ ಸಸ್ಪೆಂಡ್​ ಮಾಡುವಂತೆ ತಾಕೀತು ಮಾಡಿದ್ದರು. ಕೂಡಲೇ ಪಿಎಸ್​ಐ ತನ್ವೀರ್​ ಅವರನ್ನು ಅಮಾನತು ಮಾಡಬೇಕು ಎಂದು ಎಸ್​ಪಿಗೆ ಒತ್ತಾಯಿಸಿದ್ದರು.

ಏನಿದು ಪ್ರಕರಣ?

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​ ಹಾಕಿದ್ದ ಎಸ್​ಡಿಪಿಐ ಕಾರ್ಯಕರ್ತ ಚಾಂದ್ ಪಾಷಾರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್​ಡಿಪಿಐ ಕಾರ್ಯಕರ್ತ ಚಾಂದ್ ಪಾಷಾರ ಕಡೆಯೊಬ್ಬರು ನೀಡಿದ್ದ ಸುಳ್ಳು ದೂರಿನ ಆಧಾರದ ಮೇಲೆ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 pm, Mon, 19 February 24