ರಾಮನಗರ: ನನಗೆ ಈಗ 60 ವರ್ಷ ಆಯಿತು. ಇನ್ನು 10 ವರ್ಷ ಮಾತ್ರ ರಾಜಕಾರಣ ಮಾಡಬಹುದು. ಆ ನಂತರ ನಿವೃತ್ತಿ ಪಡೆಯುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದರು. ಕನಕಪುರದ ನಿವಾಸದಲ್ಲಿ ನಡೆದ ಆರ್ಇಎಸ್ ಸಂಸ್ಥೆಯ ಚುನಾವಣೆ ಹಿನ್ನೆಲೆ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಆರ್ಇಎಸ್ ಸಂಸ್ಥೆಯ ಯಾವುದೇ ಸ್ಥಾನ ಬೇಡ. ನೀವು ಕೊಟ್ಟಿರುವ ಸ್ಥಾನವೇ ಸಾಕು. ಈಗಿರುವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದರೆ ಜಾಸ್ತಿ ದಿನ ರಾಜಕೀಯದಲ್ಲಿ ಇರಲು ಸಾಧ್ಯವಿಲ್ಲ. ನನಗೂ 60 ವರ್ಷ ಆಯಿತು. ಇನ್ನು ಎಷ್ಟು ವರ್ಷ ರಾಜಕಾರಣ ಮಾಡಬಹುದು. 70 ವರ್ಷದವರೆಗೂ ರಾಜಕಾರಣ ಮಾಡಬಹುದು. ಅಷ್ಟರಲ್ಲಿ ಏನಾದರೂ ಚೇಂಜ್ ಮಾಡಿಕೊಳ್ಳೋಣಾ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ನಾನು ನಿಮ್ಮಿಂದ ಯಾವುದೇ ಪ್ರತಿಫಲ ನಿರೀಕ್ಷೆ ಮಾಡುವವನಲ್ಲ. ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ನನ್ನ ಮೇಲೆ ಸಾಕಷ್ಟು ಕೇಸ್ಗಳು ಸಹ ಇವೆ. ಎಲ್ಲವನ್ನು ಅನುಭವಿಸುತ್ತೇನೆ. ಕನಕಪುರ ಕ್ಷೇತ್ರದ ಜನರು ನನಗೆ ಮತ ನೀಡಿ, ಶಾಸಕನನ್ನಾಗಿ ಮಾಡಿದ್ದಾರೆ. ಈ ತಾಲೂಕಿನಲ್ಲಿ ಯಾವುದಕ್ಕೂ, ಯಾರ ಮುಂದೆಯೂ ಕೈ ಚಾಚಿಲ್ಲ. ಕಮಿಷನ್ ಪಡೆದಿಲ್ಲ. ಜಾತಿಗಿಂತ ನೀತಿ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.
ಇಡಿ ವಿಚಾರಣೆ ಅಂತ್ಯ:
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರ ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆ ಅಂತ್ಯವಾಗಿದೆ. ಯಂಗ್ ಇಂಡಿಯಾ ಹಣಕಾಸು ವ್ಯವಹಾರದ ಬಗ್ಗೆ ಇಡಿ ಅಧಿಕಾರಿಗಳು ಸಹೋದರರನ್ನು ಇಂದು(ಅ.07) ಪ್ರತ್ಯೇಕವಾಗಿ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮುಗಿಸಿಕೊಂಡು ಡಿಕೆ ಶಿವಕುಮಾರ್ ಹೊರಬರುತ್ತಿದ್ದಂತೆಯೇ ಟ್ವಿಟ್ಟರ್ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು. BJP ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಿ, ಬೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಇದಕ್ಕೆ ಮೇ 2023 ರಲ್ಲಿ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ. ED ಮೂಲಕ ನಿರುದ್ಯೋಗ, ಬೆಲೆ ಏರಿಕೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎನ್ನುವುದು BJPಗೆ ಅರಿವಾಗಬೇಕಿದೆ ಎಂದು ಕಿಡಿಕಾರಿದ್ದಾರೆ.
ಎರಡನೇ ಸಮನ್ಸ್ ನೀಡಿದ್ದ ಇಡಿ:
ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸುರೇಶ್ಗೆ ವಿಚಾರಣೆ ಬರುವಂತೆ ಇಡಿ ಸಮನ್ಸ್ ನೀಡಿತ್ತು. ಆದ್ರೆ, ಸಧ್ಯಕ್ಕೆ ವಿಚಾರಣೆ ಬರಲು ಆಗುವುದಿಲ್ಲ. ಮುಂದೊಂದು ದಿನ ಬರುವುದಾಗಿ ಡಿಕೆ ಬ್ರದರ್ಸ್ ಇಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದ್ರೆ, ಇಡೀ ಡಿಕೆ ಸಹೋದರರ ಮನವಿಗೆ ಒಪ್ಪದೇ ಅಕ್ಟೋಬರ್. 7ರಂದು ವಿಚಾರಣೆ ಹಾಜರಾಗಲೇಬೇಕೆಂದು ಮತ್ತೊಂದು ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಅನಿವಾರ್ಯವಾಗಿ ಡಿಕೆಶಿ ಹಾಗೂ ಸುರೇಶ್ ನಿನ್ನೆ (ಅ.06) ರಾತ್ರಿಯೇ ದೆಹಲಿಗೆ ತೆರಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:56 pm, Fri, 7 October 22