ರಾಮನಗರ: ಮಾಕಳಿ ಏತ ನೀರಾವರಿ ಯೋಜನೆ ವಿಚಾರವಾಗಿ ಮಾಜಿ ಸಚಿವ ಯೋಗೇಶ್ವರ್ ಕಡೆಯವರ ಹೇಳಿಕೆ ನೋಡಿದ್ದೇನೆ. ₹15 ಕೋಟಿ ರೂಪಾಯಿ ಕಾರ್ಯಕ್ರಮ, ಸಿಪಿವೈ ಮಾಡಿಸಿದ್ದಾರೆ ಎಂದಿದ್ದಾರೆ. ಆದ್ರೆ ಇದು ₹29 ಕೋಟಿ ರೂಪಾಯಿ ವೆಚ್ಚದಲ್ಲಿ ಆಗಿರುವ ಕಾರ್ಯಕ್ರಮ. ಅದು ಸಣ್ಣ ನೀರಾವರಿ ಇಲಾಖೆಯ ಮುಖಾಂತರ ಆಗಿದೆ. ನಾನು ಸಿಎಂ ಆದಾಗ ಯೋಜನೆಗೆ ನಿರ್ಧಾರ ಕೈಗೊಂಡಿದ್ದೆ. ಗುದ್ದಲಿ ಪೂಜೆ ಮಾಡುವಾಗ ಯಾರೂ ಮಾತನಾಡಲಿಲ್ಲ. ನೀರು ಹರಿದ ನಂತರ ರಾಜಕೀಯ ಮಾಡ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು ಕಾರ್ಯಕರ್ತರು ಯಾರು ನಾಯಕ ಎಂದು ಕೇಳಿದ್ರು. ಹೀಗಾಗಿ ನಾನೇ ಬರುತ್ತೇನೆ ಎಂದು ಹೇಳಿದ್ದೇನೆ. ನಾನೇ ಬರುತ್ತೇನೆಂದರೆ ಚುನಾವಣೆಯಲ್ಲಿ ನಿಲ್ಲುತ್ತೇನೆಂದಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ಪಕ್ಷ ಬೇರೂರಲು ಸಾಧ್ಯವಿಲ್ಲ. ನಮ್ಮ ಕುಟುಂಬಕ್ಕೂ ಇಲ್ಲಿಗೂ ತಾಯಿ, ಮಗನ ಸಂಬಂಧ ಇದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಬಿಟ್ಟು ಸರ್ಕಾರ ರಚನೆ ಸಾಧ್ಯವಿಲ್ಲವೆಂದು ಹೇಳಿದ್ದೇನೆ. ನನ್ನ ಗುರಿ ಮುಂದಿನ ಎಲೆಕ್ಷನ್ನಲ್ಲಿ 123 ಸ್ಥಾನ ಗೆಲ್ಲುವುದು. ಪ್ರಾದೇಶಿಕ ಪಕ್ಷದ ಸರ್ಕಾರ ತರಲು ಈಗಾಗಲೇ ತಯಾರಿ ಮಾಡುತ್ತಿದ್ದೇನೆ. ಈಗಿನ ಪರಿಸ್ಥಿತಿ ನೋಡಿ ದೇವೇಗೌಡರು ಹೇಳಿಕೆ ನೀಡಿದ್ದಾರೆ. ಮುಂದೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೆಚ್ಡಿಕೆ ಬಗ್ಗೆ ಮಾಜಿ ಶಾಸಕ ಕೆ.ರಾಜು ವಾಗ್ದಾಳಿ ವಿಚಾರವಾಗಿ, ನಾನು ಶಾಸಕ ಸ್ಥಾನವನ್ನ ದುರುಪಯೋಗಪಡಿಸಿಕೊಂಡಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ ಗುಡ್ಡಗಳನ್ನ ಮಾರಾಟ ಮಾಡಿಲ್ಲ. ಶಾಸಕನಾಗುವ ಮೊದಲಿದ್ದಂತೆ ಈಗಲೂ ಬದುಕುತ್ತಿದ್ದೇನೆ. ನಾನು ಯಾರಿಂದಲೂ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೆ ನಡೆದ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ವಿಚಾರದ ಬಗ್ಗೆ ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಯಾವ ಪುಣ್ಯದ ಹಣದಲ್ಲಿ ರಾಧಿಕಾ ಅವರಿಗೆ ನೂರಾರು ಕೋಟಿ ಕೊಟ್ಟರು: ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಕೆ ರಾಜು ಕಿಡಿ
ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಅವರನ್ನು ಮುಂದಿನ ಚುನಾವಣೆಗೆ ನಿಲ್ಲಿಸಲ್ಲ: ಹೆಚ್ಡಿ ಕುಮಾರಸ್ವಾಮಿ
Published On - 3:13 pm, Sun, 13 February 22