ರಾಮನಗರ: ರಾಮನಗರ (Ramnagar) ಜಿಲ್ಲೆಯಾದ್ಯಂತ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ (Bengaluru – Mysore Highway) ಪ್ರವಾಹ ಉಂಟಾಗಿ ಹೆದ್ದಾರಿ ದುರಸ್ತಿಗೊಂಡಿರುವ ಹಿನ್ನೆಲೆ ಪ್ರಯಾಣಿಕರು ಹೆದ್ದಾರಿ ಬದಲು ಬೇರೆ ಮಾರ್ಗದ ಮೂಲಕ ಸಂಚಾರಿಸುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ. ಬೆಂಗಳೂರು-ಕನಕಪುರ-ಮೈಸೂರು ಹೆದ್ದಾರಿ ಬದಲು ಬೆಂಗಳೂರು-ಕುಣಿಗಲ್-ಮೈಸೂರು ಮಾರ್ಗವಾಗಿ ಮೂರು ದಿನಗಳ ಕಾಲ ಸಂಚಾರಿಸುವಂತೆ ಮನವಿ ಮಾಡಲಾಗಿದೆ.
ತಡರಾತ್ರಿ ಸುರಿದ ಭಾರಿ ಮಳೆ ಹಿನ್ನಲೆ ನೀರಿನ ರಭಸಕ್ಕೆ ಚನ್ನಪಟ್ಟಣ ಟೌನ್ನ ತಟ್ಟೆಕೆರೆ ಬಳಿ ರಸ್ತೆ ಬಿರುಕು ಬಿಟ್ಟಿದೆ. ಕುಡಿ ನೀರು ಕಟ್ಟೆ ಕೋಡಿ ಬಿದ್ದು, ನೀರು ರಸ್ತೆ ಮೇಲೆ ಹರಿದ ಪರಿಣಾಮ ಬಿರುಕು ಬಿಟ್ಟಿದೆ. ಬಿರುಕು ಬಿಟ್ಟ ರಸ್ತೆಯ ಮೇಲೆ ಜನರು ಸಂಚರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಧಾರಕಾರ ಮಳೆ ಹಿನ್ನೆಲೆ ಚನ್ನಪಟ್ಟಣದ ತಟ್ಟೆಕೆರೆ ಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಈ ವೇಳೆ ಹೆಚ್ಡಿಕೆ ಮುಂದೆ ಜನರು ಅಳಲು ತೋಡಿಕೊಂಡಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಅವರು ರಾಮನಗರದಲ್ಲಿ ಮಳೆಯಿಂದಾಗಿ ಕೆರೆಗಳು ಕೋಡಿ ಬಿದ್ದಿವೆ. ನಗರದಲ್ಲಿ ಮಳೆಯಿಂದ ದೊಡ್ಡಮಟ್ಟದ ಅನಾಹುತ ಆಗಿದೆ. ರಸ್ತೆಗಳು ಬಿರುಕು ಬಿಟ್ಟ ಕಡೆ ದುರಸ್ತಿಗೆ ಸೂಚನೆ ನೀಡಿದ್ದೇನೆ. ಚನ್ನಪಟ್ಟಣ ತಾಲೂಕಿನ ಹಲವೆಡೆ ಅನಾಹುತ ಉಂಟಾಗಿದೆ. ಕಳೆದ ಬಾರಿಯೂ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದೆ ಎಂದರು.
ಗಾಂಧಿ ಗ್ರಾಮದಲ್ಲಿ ಸುಮಾರು 50 ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಾಗಿದೆ. ಕಾಮಗಾರಿಗಳು ತ್ವರಿತವಾಗಿ ಆಗಬೇಕೆಂದು ಸಭೆ ನಡೆಸಿದ್ದೇನೆ. ನಾನು ಸಿಎಂ ಆಗಿದ್ದಾಗ ಸಭೆಗಳನ್ನು ನಡೆಸಿದ್ದೆ. ಆದರೆ ಇದೀಗ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದಾರೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಅನುಮತಿ ಕೇಳಬೇಕಿದೆ ಎಂದು ಹೇಳಿದರು.
ಸೆಪ್ಟೆಂಬರ್ 5ರಂದು ನವದೆಹಲಿಗೆ ತೆರಳುತ್ತಿದ್ದೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡುತ್ತೇನೆ. ಮಳೆ ಹಾನಿ ಸೇರಿ ಹಲವು ಸಮಸ್ಯೆ ಬಗ್ಗೆ ಗಮನಕ್ಕೆ ತರುತ್ತೇನೆ. ಈಗಾಗಲೇ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇದ್ದೇನೆ. 10 ಸಾವಿರ ಪರಿಹಾರ, ಫುಡ್ ಕಿಟ್ ವಿತರಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ