
ರಾಮನಗರ, (ಡಿಸೆಂಬರ್ 15): ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನ (Wife) ಕೊಂದು ಪತಿ (Husband) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ರಾಮನಗರ (Ramanagara) ತಾಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನವೀನ್ ಕುಮಾರ್ (35) ಎನ್ನುವಾತ ತನ್ನ ಪತ್ನಿ ವತ್ಸಲಳನ್ನು(30) ಕೊಂದು ಬಳಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ತಂದೆ-ತಾಯಿಯನ್ನು ಕಳೆದುಕೊಂಡ 7 ವರ್ಷದ ಹೆಣ್ಣು ಮಗು ಅನಾಥವಾಗಿದೆ.
ನವೀನ್ ಹಾಗೂ ವತ್ಸಲ ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ 7 ವರ್ಷದ ಹೆಣ್ಣುಮಗು ಇದೆ. ಸಣ್ಣಪುಟ್ಟ ವಿಚಾರಕ್ಕೆ ಪತಿ, ಪತ್ನಿ ಜಗಳವಾಡುತ್ತಿದ್ದರು. ಕಳೆದ ವಾರ ದಂಪತಿ ಗಲಾಟೆ ಮಾಡಿಕೊಂಡು ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ಇಂದು (ಡಿಸೆಂಬರ್ 15) ಗಲಾಟೆ ವಿಕೋಪಕ್ಕೆ ತಿರುಗಿದ್ದು, ನವೀನ್, ವಾತ್ಸಲಳನ್ನು ಕತ್ತುಹಿಸುಕಿ ಕೊಂದಿದ್ದಾನೆ. ಬಳಿಕ ನವೀನ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೆಂಡ್ತಿಯನ್ನು ಮಂಚದ ಮೇಲೆಯೇ ಕೊಂದು ಬಳಿಕ ಮೇಲೆ ಇದ್ದ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಯೆಹತ್ಯೆ ಮಾಡಿಕೊಂಡಿದ್ದು, ನವೀನ್ ಮೃತದೇಹ ಪತ್ನಿ ವಾತ್ಸಲ ಮೃತದೇಹದ ಮೇಲೆ ನೇತಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇನ್ನು ಗಂಡ ಹೆಂಡತಿ ಜಗಳದಲ್ಲಿ ಪುಟ್ಟ ಮಗು ಮಾತ್ರ ಅನಾಥವಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.