ಹೆಚ್​.ಡಿ ಕುಮಾರಸ್ವಾಮಿ ಅವರನ್ನೇ ಮುಂಬರುವ ಚುನಾವಣೆಯಲ್ಲಿ ಎದುರಿಸಲು ಸಿದ್ದನಿದ್ದೇನೆ: ಸಿ ಪಿ ಯೋಗೆಶ್ವರ್

| Updated By: ವಿವೇಕ ಬಿರಾದಾರ

Updated on: Nov 16, 2022 | 5:39 PM

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರನ್ನೇ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಎದುರಿಸಲು ಸಿದ್ದನಿದ್ದೇನೆ ಎಂದು ಹೇಳುವ ಮೂಲಕ ಮುಕ್ತ ಆಹ್ವಾನ ನೀಡಿದ್ದಾರೆ.

ಹೆಚ್​.ಡಿ ಕುಮಾರಸ್ವಾಮಿ ಅವರನ್ನೇ ಮುಂಬರುವ ಚುನಾವಣೆಯಲ್ಲಿ ಎದುರಿಸಲು ಸಿದ್ದನಿದ್ದೇನೆ: ಸಿ ಪಿ ಯೋಗೆಶ್ವರ್
ಹೆಚ್​.ಡಿ ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಎದುರಿಸಲು ಸಿದ್ದ ಸಿಪಿ ಯೋಗೇಶ್ವರ
Follow us on

ರಾಮನಗರ: ಚನ್ನಪಟ್ಟಣದಲ್ಲಿ (Channapatna) ಬಿಜೆಪಿ ಮತ್ತು ಜೆಡಿಎಸ್ (JDS)​ ಪಕ್ಷದ ನಾಯಕರು ಬದ್ದ ರಾಜಕೀಯ ವೈರಿಗಳಂತೆ ವರ್ತಿಸುತ್ತಿದ್ದು, ಚುನಾವಣೆಗೆ ಇನ್ನೂ 6 ತಿಂಗಳು ಬಾಕಿ ಇರುವಾಗಲೆ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ (BJP) ಎಂಎಲ್​​​​ಸಿ ಸಿ ಪಿ ಯೋಗೆಶ್ವರ್ (CP Yogeshwar) ಚನ್ನಪಟ್ಟಣದಿಂದ ಸ್ಪರ್ಧಿಸೋಕೆ ಟೊಂಕ ಕಟ್ಟಿ ನಿಂತ್ತಿದ್ದಾರೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ (HD Kumarswamy) ಅವರನ್ನೇ ವಿಧಾನಸಭಾ ಚುನಾವಣೆಯಲ್ಲಿ ಚನ್ನಪ್ಪಟಣದಲ್ಲಿ ಎದುರಿಸಲು ಸಿದ್ದನಿದ್ದೇನೆ ಎಂದು ಹೇಳುವ ಮೂಲಕ ಮುಕ್ತ ಆಹ್ವಾನ ನೀಡಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಜೆಡಿಎಸ್​​ನಿಂದ ಹೊರಗುಳಿದಿದ್ದ ಮುಖಂಡರ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು ಇಪ್ಪೈತೈದು ಮೂವತ್ತು ವರ್ಷಗಳಿಂದ ಜೆಡಿಎಸ್​ನಲ್ಲಿ‌ ಕೆಲಸ ಮಾಡಿದ್ದವರು ಇದೀಗ ಬಹಳ ನೊಂದಿದ್ದಾರೆ. ಕುಮಾರಸ್ವಾಮಿ ಸ್ಪಂದಿಸಲಿಲ್ಲ ಎಂದು ಮನೆಯಲ್ಲಿ ಕೂತಿದ್ದಾರೆ. ಇದೀಗ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂದರು.

2018 ರಲ್ಲಿ ಇದೇ ಮುಖಂಡರು ಅವರ ಮನೆಯ ದುಡ್ಡು ಹಾಕಿ ಆಸ್ತಿ ಪಾಸ್ತಿ ಮಾರಿ ಕುಮಾರಸ್ವಾಮಿನ ಗೆಲ್ಲಿಸಿದ್ದರು. ಇದೀಗ ಸತ್ತೋರ ಮನೆಗೆ ಭೇಟಿ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅದು ವ್ಯತಿರಿಕ್ತವಾಗುತ್ತದೆ. ಕುಮಾರಸ್ವಾಮಿಯ ಬಣ್ಣ ಏನು ಅಂತಾ ಎಲ್ಲರಿಗೂ ಅರ್ಥ ಆಗಿದೆ. ಯಾವ ರೀತಿ ಬ್ಲಾಕ್ ಮೇಲ್ ಮಾಡುತ್ತಾರೆ ಎಂಬುದು ಗೊತ್ತಿದೆ. ರಾಮನಗರ ಜಿಲ್ಲೆ ಸ್ವಾಭಿಮಾನ ಉಳಿಸಬೇಕೆಂದು ಸ್ಥಳೀಯ ನಾಯಕರಿಗೆ ಜನ ಮನ್ನಣೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚನ್ನಪಟ್ಟಣಕ್ಕೆ ಮೂರು ಸಾವಿರ ಮನೆಗಳು ಮಂಜೂರು

ಚನ್ನಪಟ್ಟಣದಲ್ಲಿ ಅತಿವೃಷ್ಟಿಯಾಗಿ ನೂರಾರು ಮನೆಗಳು ನಾಶವಾಗಿದ್ದವು. ಮಾನ್ಯ ಮುಖ್ಯಂಮಂತ್ರಿಗಳು ಕೂಡ ನಮ್ಮ ತಾಲ್ಲೂಕಿಗೆ ಭೇಟಿ ನೀಡಿದ್ದರು. ಆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಕೂಡ ನೀಡಿದ್ದೆ. ನಮ್ಮ ತಾಲ್ಲೂಕಿಗೆ ವಿಶೇಷವಾಗಿ ಮನೆಗಳನ್ನು ಕೊಡಿ ಎಂದು ಹೇಳಿದ್ದೆ. ಹಲವು ವರ್ಷಗಳಿಂದ ನಮ್ಮ ತಾಲ್ಲೂಕಿಗೆ ಮನೆಗಳನ್ನು ಹಂಚಿಕೆ ಮಾಡಿರಲಿಲ್ಲ, ಹೀಗಾಗಿ ಪತ್ರ ಕೂಡ ಬರೆದಿದ್ದೆ. ಹಲವು ಬಾರಿ ಫಾಲೋಅಪ್ ಕೂಡ ಮಾಡಿದ್ದೆ. ಸಾಕಷ್ಟು ಬಾರಿ ಒತ್ತಡ ಕೂಡ ಹಾಕಿದ್ದೆ. ಕನಕಪುರದಲ್ಲಿ ಡಿಕೆ ಸುರೇಶ್ ಅವರಿಗೆ ಕೊಟ್ಟಿದ್ದೀರಾ, ನಮಗೂ ಕೊಡಿ ಎಂದು ಮನವರಿಕೆ ಮಾಡಿದ್ದೆ. ಇದರಿಂದ ಮೂರು ಸಾವಿರ ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

ಗ್ರಾಮ‌ ಪಂಚಾಯತಿಯಲ್ಲಿ ಕೂಡ ಅನುಮೋದನೆಯಾಗಿದೆ. ಯಾರೇ ಮಂಜೂರಾತಿ ತಂದರೂ ಪಂಚಾಯತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಪಕ್ಷ ಏನಿಲ್ಲ, ನಿಜವಾದ ಫಲಾನುಭವಿಗಳನ್ನುಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಬೇರೆ ಏನು ರಾಜಕಾರಣ ಕಾಣೋದಿಲ್ಲ ಎಂದು ಹೇಳಿದರು.

ಚನ್ನಪಟ್ಟಣಕ್ಕೆ ಮನೆಗಳನ್ನು ಮಂಜೂರು ಮಾಡುವಂತೆ ಕುಮಾರಸ್ವಾಮಿ ಪತ್ರ ಬರೆದಿದ್ದರು ಎಂಬ ವಿಚಾರವಾಗಿ ಮಾತನಾಡಿದ ಅವರು ಈ ಹಿಂದೆ ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದರು. ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿಗಳನ್ನು ಮಾಡಿಲ್ಲ. ಕೆಲವು ರಸ್ತೆಗಳಿಗೆ ಅನುದಾನ ತಂದು ನಾಲ್ಕಾರು ಕಂಟ್ರಾಕ್ಟರ್​ಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಯಾವುದೇ ಇಲಾಖೆಯಿಂದ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ಧಿ ಮಾಡಿಲ್ಲ. ನಾನು ಬರೆದಿದ್ದ ಪತ್ರದ ಮೂಲಕ ಇದೀಗ ಮನೆಗಳನ್ನು ಮಂಜೂರು ಮಾಡಿದ್ದಾರೆ. ಆದೇಶ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಯೋಗೆಶ್ವರ್ ಅವರ ಪತ್ರದ ಮೇರೆಗೆ ಅನುಮೋದಿಸಲಾಗಿದೆ ಎಂದು ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಓಡಾಟ ನಡೆಸುವ ವಿಚಾರವಾಗಿ ಮಾತನಾಡಿದ ಅವರು ನೋಡಿ ಅದು ಅವರ ಪಾರ್ಟಿ. ಅವರೇ ಹೇಳಿದಂಗೆ ಅದು ಅಪ್ಪ ಮಗನ ಪಾರ್ಟಿ. ಯಾರೋ 2-3 ಸಾವಿರ ಜನ ಕಾರ್ಯಕರ್ತನ್ನು ಇಟ್ಟುಕೊಂಡು ಚುನಾವಣೆ ಮಾಡೋಕೆ ಆಗುತ್ತಾ ? 2 ಲಕ್ಷ ಮತದಾರರಿದ್ದಾರೆ ನೋಡೊಣ ಜನ ಉತ್ತರ ನೀಡುತ್ತಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Wed, 16 November 22