ರಾಮನಗರ: ಮಾಗಡಿ JDS ಶಾಸಕ ಮಂಜುನಾಥ್ ಪತ್ನಿ ಲಕ್ಷ್ಮೀ ಅವರ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಪಡೆದ ಆರೋಪ ಕೇಳಿ ಬಂದಿದ್ದು ಈ ಆರೋಪ ಸುಳ್ಳು ಎಂದು ದೇವಸ್ಥಾನದ ಮುಂದೆ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದಾರೆ. ಮಾಜಿ ಶಾಸಕ ಬಾಲಕೃಷ್ಣರವರು ಮಾಡಿದ ಆರೋಪ ಸುಳ್ಳು ಎಂದು ಹೇಳಿ ಮಾಗಡಿ ಪಟ್ಟಣದ ತಿರುಮಲೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಮುಂದೆ ಶಾಸಕ ಹೇ ಮಂಜುನಾಥ್ ರವರ ಪತ್ನಿ ಲಕ್ಷ್ಮೀ ಹೇಮಂಜುನಾಥ ಹಾಗೂ ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣನವರು ಕರ್ಪೂರ ಹಚ್ಚಿ ಪ್ರಮಾಣ ಮಾಡಿದರು.
ಶಾಸಕ ಹೇ ಮಂಜುನಾಥ್ ರವರ ಪತ್ನಿ ಲಕ್ಷ್ಮೀ ಹೇ ಮಂಜುನಾಥ್ ರವರು ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣರವರು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುವ ಸಲುವಾಗಿ ಲಕ್ಷ್ಮೀ ಹೇ ಮಂಜುನಾಥ್ ರವರು ಮಾಗಡಿಯಲ್ಲಿ ದೇವಸ್ಥಾನದ ಮುಂದೆ ಕರ್ಪೂರ ಹಚ್ಚಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಜಿ ಶಾಸಕ ಬಾಲಕೃಷ್ಣರವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಶಾಸಕ ಎ. ಮಂಜುನಾಥ್ ರವರ ಕಾಮಗಾರಿಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಮಾಜಿ ಶಾಸಕ ಬಾಲಕೃಷ್ಣರವರು ಕಾಮಗಾರಿ ಆರಂಭ ಮಾಡಬೇಕಾದರೆ ನನ್ನ ಅನುಮತಿ ಪಡೆಯಬೇಕು ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಇದನ್ನು ಮಾಜಿ ಶಾಸಕ ಬಾಲಕೃಷ್ಣರವರು ಸಾಬೀತು ಪಡಿಸಬೇಕು. ಕೂಟ್ಕಲ್ ಕಾಮಗಾರಿಯಲ್ಲಿ ನನ್ನ ಹಸ್ತಕ್ಷೇಪವಿದೆ ಎಂದು ಆರೋಪ ಮಾಡಿದ್ದಾರೆ. ಯಾರಾದರೂ ಇದನ್ನು ಸಾಬೀತುಪಡಿಸಿದರೆ ನಾನು ಮಾಜಿ ಶಾಸಕ ಬಾಲಕೃಷ್ಣರವರಿಗೆ ಸನ್ಮಾನ ಮಾಡಿ ಪಾದಪೂಜೆ ಮಾಡಿ ಕ್ಷೇತ್ರಕ್ಕೆ ಬರುವುದೇ ಇಲ್ಲ ಎಂದು ಲಕ್ಷ್ಮೀ ಸವಾಲು ಹಾಕಿದ್ದಾರೆ.
ಮಾಜಿ ಶಾಸಕ ಬಾಲಕೃಷ್ಣರವರು ಹೆಣ್ಣು ಮಕ್ಕಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರ ಮನೆಯಲ್ಲೂ ಕೂಡ ಹೆಣ್ಣು ಮಕ್ಕಳು ಇದ್ದಾರೆ ಎಂಬುದನ್ನು ತಿಳಿಯಬೇಕು. ಹೆಣ್ಣು ಮಕ್ಕಳ ಶಾಪ ಅವರಿಗೆ ತಟ್ಟದೆ ಬಿಡುವುದಿಲ್ಲ. ಕ್ಷೇತ್ರ ಪಾಲಕ ಶ್ರೀ ರಂಗನಾಥ ಸ್ವಾಮಿ ದೇವರೇ ಅವರನ್ನು ನೋಡಿಕೊಳ್ಳುತ್ತಾರೆ. ಕಳೆದ ನಾಲ್ಕು ದಿನಗಳಿಂದಲೂ ನನಗೆ ಸಾಕಷ್ಟು ನೋವಾಗಿದ್ದು ಶಾಸಕ ಹೇ ಮಂಜುನಾಥ್ ರವರಿಗೆ ನನ್ನಿಂದ ಏನಾದರೂ ತೊಂದರೆ ಆಗುತ್ತಾ ಎಂದು ಪಶ್ಚಾತಾಪ ಪಟ್ಟಿದ್ದೇನೆ. ಈ ನೋವು ಬಾಲಕೃಷ್ಣರವರಿಗೂ ತಟ್ಟುತ್ತದೆ. ನನ್ನದೊಂದೇ ಒಂದು ಕಾಮಗಾರಿಯಲ್ಲಿ ಹಸ್ತಕ್ಷೇಪ ಇದೆ ಎಂದು ಸಾಬೀತು ಮಾಡಿದರೆ ಕ್ಷೇತ್ರಕ್ಕೆ ಬರುವುದಿಲ್ಲ ಎಂದರು. ಇನ್ನು ಪತ್ನಿಯ ಶಪಥವನ್ನು ಬೆಂಬಲಿಸಿದ ಶಾಸಕ ಮಂಜುನಾಥ್ ರವರು ಕೂಡ ಸವಾಲು ಹಾಕಿದ್ದು ಮಾಜಿ ಶಾಸಕರನ್ನು ಸನ್ಮಾನಿಸಿ ಕ್ಷೇತ್ರಕ್ಕೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ನನ್ನ ಮೇಲೆ ಆರೋಪ ಸಾಕ್ಷಿ ಇದ್ದರೆ ಸಾಬೀತುಪಡಿಸಬೇಕೆಂದು ತಿರುಗೇಟು ನೀಡಿದರು.
ಗುತ್ತಿಗೆದಾರ ಹಾಗೂ ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಮಾಜಿ ಶಾಸಕ ಬಾಲಕೃಷ್ಣರವರು ನಾನು ಮತ್ತು ಶಾಸಕ ಹೇ ಮಂಜುನಾಥ್ ರವರ ಪತ್ನಿ ಸೇರಿ ನೂರಾರು ಕೋಟಿ ಕಾಮಗಾರಿಗಳನ್ನು ಮಾಡಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಇದರ ಜೊತೆಗೆ ಇಂದು ಕೆಆರ್ಐಡಿಎಲ್ನಲ್ಲಿ ಎಂಟು ಕೋಟಿ ಅನುದಾನ ಇಂದು ನನ್ನ ಖಾತೆಗೆ ಬರುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ. 8 ಕೋಟಿ ಅನುದಾನ ಬರುವುದಾದರೆ ಯಾವ ಚಕ್ಗೆ ಬೇಕಾದರೂ ಸಹಿ ಮಾಡುತ್ತೇನೆ. ನಾನು ಮನೆ ಕಟ್ಟಲು 20 ಲಕ್ಷ ಸಾಲ ಮಾಡಿದ್ದು ಅದನ್ನು ಬಾಲಕೃಷ್ಣರವರು ತೀರಿಸಲಿ ದಲಿತರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಬಾಲಕೃಷ್ಣರವರು ಜೆಡಿಎಸ್ ಪಕ್ಷ ಬಿಟ್ಟ ಮೇಲೆ ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಇದು ಬಾಲಕೃಷ್ಣರವರಿಗೆ ಸಹಿಸಲು ಆಗುತ್ತಿಲ್ಲ. ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಕೂಡ ರಂಗನಾಥ ಸ್ವಾಮಿ ದೇವಸ್ಥಾನದ ಮುಂದೆ ಕರ್ಪೂರ ಹಚ್ಚಿ ಒಂದೇ ಒಂದು ರೂಪಾಯಿ ಕೂಡ ಶಾಸಕರ ಪತ್ನಿ ಜೊತೆ ಸೇರಿ ಕಾಮಗಾರಿ ಮಾಡಿಲ್ಲ ಎಂದು ಮಾಜಿ ಶಾಸಕರ ಆರೋಪಕ್ಕೆ ತಿರುಗೇಟು ನೀಡಿದರು.
ಇದೇ ವೇಳೆ ಪುರಸಭಾ ಅಧ್ಯಕ್ಷ ವಿಜಯ ರೂಪೇಶ್, ಸದಸ್ಯರಾದ ಅನಿಲ್ ಕುಮಾರ್, ಜೆಡಿಎಸ್ ಮುಖಂಡರಾದ ವಿಜಯಕುಮಾರ್, ದಂಡಿಗೆಪುರ ಕುಮಾರ್, ಅಶೋಕ್, ರೂಪೇಶ್, ಶಬಾಸ್ ಖಾನ್, ದೊಡ್ಡಿ ಲೊಕೇಶ್, ಕೆಂಪಸಾಗರ ಗುಂಡ ಸೇರಿದಂತೆ ಹಲವು ಮುಖಂಡರು ಕರ್ಪೂರ ಪ್ರಮಾಣದ ವೇಳೆ ಉಪಸ್ಥಿತರಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ