Mekedatu Padayatra Updates: ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್
ಕಾಂಗ್ರೆಸ್ ಪಾದಯಾತ್ರೆ: ನಾಯಕರು ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ್ದರು. ಸಭೆ ನಡೆಸಿದ ಬಳಿಕ ಹೈಕಮಾಂಡ್ ಸೂಚನೆಯಂತೆ ಐದನೇ ದಿನಕ್ಕೆ ಪಾದಯಾತ್ರೆ ನಿಲ್ಲಿಸಲು ನಿರ್ಧರಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಕೊರೊನಾ ನಿಯಮಗಳನ್ನ ಉಲ್ಲಂಘಿಸಿ 11 ದಿನಗಳ ಕಾಲ ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿದ್ದರು. ಇಂದು (ಜ.13) ಐದನೇ ದಿನದ ಪಾದಯಾತ್ರೆ ನಡೆಯಬೇಕಿತ್ತು. ಆದರೆ ನಿನ್ನೆ ಹೈಕೋರ್ಟ್ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಅಂತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಹೀಗಿದ್ದೂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾದಯಾತ್ರೆ ಮುಂದುವರಿಸುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದರು. ಈ ಕುರಿತು ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ್ದರು. ಸಭೆ ನಡೆಸಿದ ಬಳಿಕ ಹೈಕಮಾಂಡ್ ಸೂಚನೆಯಂತೆ ಐದನೇ ದಿನಕ್ಕೆ ಪಾದಯಾತ್ರೆ ನಿಲ್ಲಿಸಲು ನಿರ್ಧರಿಸಲಾಗಿದೆ.
LIVE NEWS & UPDATES
-
ತಮ್ಮ ಸರ್ಕಾರದ ವಿರುದ್ದವೇ ಬಿಜೆಪಿ ಮುಖಂಡ ಮಾಜಿ ಸಚಿವ ಎ ಮಂಜು ಟಾಂಗ್
ಮೇಕೆದಾಟು ಪಾದಯಾತ್ರೆ ರಾಜ್ಯ ಬಿಜಪಿ ಹಾಗೂ ಕೇಂದ್ರ ಬಿಜೆಪಿಯ ಕಣ್ಣು ತೆರೆಸಬೇಕು ಅಂತ ತಮ್ಮ ಸರ್ಕಾರದ ವಿರುದ್ದವೇ ಬಿಜೆಪಿ ಮುಖಂಡ, ಮಾಜಿ ಸಚಿವ ಎ ಮಂಜು ಟಾಂಗ್ ಕೊಟ್ಟಿದ್ದಾರೆ. ಪಾದಯಾತ್ರೆ ಪಕ್ಷಾತೀತವಾಗಿ ನಡೆದಿತ್ತು. ಅದಕ್ಕಾಗಿ ನಾನು ಭಾಗವಹಿಸಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನೆಲ ಜಲದ ವಿಚಾರಕ್ಕಾಗಿ ನಾನು ಭಾಗಿಯಾಗಲು ಬಂದಿದ್ದೆ. ನನಗೂ ಪಾದಯಾತ್ರೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿತ್ತು. ಅದಕ್ಕಾಗಿ ನಾನು ಬಂದಿದ್ದೇನೆ. ನಮ್ಮ ಪಕ್ಷದ ಇನ್ನು ಸಾಕಷ್ಟು ಮುಖಂಡರು ಬಂದಿದ್ದಾರೆ. ಕ್ಯಾಮೆರಾ ಕಣ್ಣಿಗೆ ಅವರು ಕಾಣಿಸಿಲ್ಲ ಅಷ್ಟೇ. ನಾನು ಸದ್ಯ ಬಿಜೆಪಿಯಲ್ಲೇ ಇದ್ದೇನೆ. ರಾಜಕೀಯ ನಿಂತ ನೀರಲ್ಲ ಅಂತ ಟಿವಿ9ಗೆ ಮಾಜಿ ಸಚಿವ ಎ ಮಂಜು ಹೇಳಿಕೆ ನೀಡಿದ್ದಾರೆ.
-
ನಾಲ್ಕು ದಿನಗಳ ಪಾದಯಾತ್ರೆಯಿಂದ ಕೊರೊನಾ ಹೆಚ್ಚಳವಾಗಿಲ್ಲ; ಮಾಜಿ ಸಚಿವ ಚಲುವರಾಯಸ್ವಾಮಿ
ನಾಲ್ಕು ದಿನಗಳ ಪಾದಯಾತ್ರೆಯಿಂದ ಕೊರೊನಾ ಹೆಚ್ಚಳವಾಗಿಲ್ಲ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 12 ಸಾವಿರ ಕೇಸ್ ಬಂದಿದೆ. ನಾಳೆ ಬೆಂಗಳೂರಿಗೆ ಎಂಟ್ರಿ ಕೊಟ್ಟರೇ ಜಾಸ್ತಿ ಆಗಬಹುದು ಎಂದು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಎಲ್ಲ ನಾಯಕರ ಅಭಿಪ್ರಾಯ ಕೂಡ ಇದೇ ಆಗಿತ್ತು. ಜನರ ಭಾವನೆಯನ್ನ ಅರ್ಥ ಮಾಡಿಕೊಂಡು ಸ್ವಂದಿಸಿದ್ದೇವೆ. ನಾಲ್ಕು ದಿನ ಅದ್ಬುತ ಬೆಂಬಲ ಸಿಕ್ಕಿದೆ. ಹೀಗಾಗಿ ತಾತ್ಕಾಲಿಕ ನಿಲ್ಲಿಸಿದ್ದೇವೆ. ಪಕ್ಷಕ್ಕೆ ಹಿನ್ನಡೆ ಆಗಿಲ್ಲ, ಜನ ಯಾರು ನೆಗಟಿವ್ ಮಾತನಾಡಿಲ್ಲ. ನಾವೇ ಜನರ ಆರೋಗ್ಯವನ್ನ ಅರ್ಥ ಮಾಡಿಕೊಂಡು ಸ್ಥಗಿತ ಮಾಡಿದ್ದೇವೆ. ಐದು ಹತ್ತು ಜನ ಕೂಡ ಪಾದಯಾತ್ರೆ ಮಾಡಬೇಕು ಎಂದು ಇತ್ತು. ಆದ್ರೆ ಮತ್ತೆ ಜನ ಸೇರುತ್ತಾರೆ ಎಂದು ಸ್ಥಗಿತ ಮಾಡಿದ್ದೇವೆ. ಮೂರನೇ ಅಲೆ ಕಡಿಮೆ ಆದ ಮೇಲೆ ಮತ್ತೆ ಪಾದಯಾತ್ರೆ ಆರಂಭ ಮಾಡುತ್ತೇವೆ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.
-
ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಕ್ಕೆ ಪ್ರಮುಖ ಕಾರಣಗಳು
ಕಾಂಗ್ರೆಸ್ ನಾಯಕರು ಐದನೇ ದಿನಕ್ಕೆ ಪಾದಯಾತ್ರೆ ನಿಲ್ಲಿಸಲು ನಿರ್ಧರಿಸಿದ್ದಾರೆ. 11 ದಿನಗಳ ಕಾಲ ಪಾದಯಾತ್ರೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಐದನೇ ದಿನಕ್ಕೆ ಮೊಟಕುಗೊಳಿಸಲು ಕಾರಣಗಳು ಹಲವು ಇವೆ.
– ಕಾಂಗ್ರೆಸ್ ಹಿರಿಯ ನಾಯಕರಿಗೆ ಕೊವಿಡ್ ಕಾಣಿಸಿಕೊಳ್ಳುತ್ತಿದೆ. – ಮುಂದೆ ಕೊವಿಡ್ ತೀವ್ರವಾಗಿ ಹರಡಿದರೆ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ. – ಕಾಂಗ್ರೆಸ್ ನ ಹಠಮಾರಿತನದಿಂದ ಕೊವಿಡ್ ಹೆಚ್ಚಾಯ್ತು ಎಂಬ ಆರೋಪ ಎದುರಿಸಬೇಕಾಗಬಹುದು. – ಆರೋಗ್ಯ ತುರ್ತು ಪರಿಸ್ಥಿತಿ ಇರುವಾಗ ಕಾಂಗ್ರೆಸ್ಗರ ರಾಜಕೀಯ ಪಾದಯಾತ್ರೆಯಿಂದ ಹೆಚ್ಚಾಯ್ತು ಎಂಬ ಆರೋಪ ಎದುರಾಗಬಹುದು. – ಎಐಸಿಸಿ ಮಟ್ಟದಲ್ಲಿಯೂ ಕೂಡ ರಾಜ್ಯ ಕಾಂಗ್ರೆಸ್ ಪಾದಯಾತ್ರೆ ಮುಜುಗರ ಉಂಟು ಮಾಡುವ ಸಾಧ್ಯತೆಯಿದೆ. – ಚುನಾವಣೆ ಇರುವಂತ ಉತ್ತರ ಪ್ರದೇಶದಲ್ಲಿಯೇ ಕಾಂಗ್ರೆಸ್ ವರ್ಚುವಲ್ ಸಭೆಗಳನ್ನು ಹಮ್ಮಿಕೊಳ್ಳುತ್ತಿದೆ.
ಕಾಂಗ್ರೆಸ್ ನಾಯಕರಿಗೆ ಅಭಿನಂದನೆ ತಿಳಿಸಿದ ಡಾ.ಕೆ ಸುಧಾಕರ್
ಕಾಂಗ್ರೆಸ್ ನಾಯಕರಿಗೆ ಅಭಿನಂದನೆ. ಕೊನೆಗಾದರೂ ಅವರಿಗೆ ರಾಜ್ಯದ ಜನರ ಹಿತ ನೆನಪಾಗಿದೆ. ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ರೇವಣ್ಣ ಸೇರಿ ಅನೇಕ ನಾಯಕರಿಗೆ ಪಾಸಿಟಿವ್ ಬಂದಿದೆ. ಬೇರೆ ಬೇರೆ ಜಿಲ್ಲೆಗಳಿಂದ ಅಮಾಯಕರು ಪಾದಯಾತ್ರೆಗೆ ಬಂದಿದ್ದರು. ಈಗಲೇ ಅವರಲ್ಲಿ ಎಷ್ಟು ಜನಕ್ಕೆ ಸೋಂಕು ಹರಡಿದೆ ಎನ್ನೋದು ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ಯಾಕೆ ಅವರು ಪಾದಯಾತ್ರೆ ಮಾಡಿದ್ರೋ ಗೊತ್ತಿಲ್ಲ ಎಂದರು.
ಮುಂದಿನ ದಿನಗಳಲ್ಲಿ 2 ಲಕ್ಷ ಜನರನ್ನು ಸೇರಿಸಿ ಪಾದಯಾತ್ರೆ ನಡೆಯುತ್ತೆ
ಮುಂದಿನ ದಿನಗಳಲ್ಲಿ 2 ಲಕ್ಷ ಜನರನ್ನು ಸೇರಿಸಿ ಪಾದಯಾತ್ರೆ ನಡೆಯುತ್ತೆ. ಸದ್ಯ ಜನರ ಹಿತದೃಷ್ಟಿಯಿಂದ ಪಾದಯಾತ್ರೆ ತಾತ್ಕಾಲಿಕ ಮೊಟಕುಗೊಳಿಸಲಾಗಿದೆ ಎಂದು ಟಿವಿ9ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಆರಗ ಜ್ಞಾನೇಂದ್ರಗೆ ಸಿಎಂ ಬೊಮ್ಮಾಯಿ ಅಭಿನಂದನೆ
ಕಾಂಗ್ರೆಸ್ ಪಾದಯಾತ್ರೆ ಶಾಂತಿಯುತವಾಗಿ ಮೊಟಕುಗೊಂಡ ವಿಚಾರಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರಗೆ ಸಿಎಂ ಬೊಮ್ಮಾಯಿ ಅಭಿನಂದನೆ ತಿಳಿಸಿದ್ದಾರೆ. ಪರಿಸ್ಥಿತಿ ಉತ್ತಮವಾಗಿ ನಿಭಾಯಿಸಿದ್ದೀರಿ. ಸಮನ್ವಯತೆ, ಹೊಂದಾಣಿಕೆ, ಸಹಕಾರಕ್ಕೆ ಅಭಿನಂದನೆ ಎಂದು ದೂರವಾಣಿ ಕರೆ ಮಾಡಿ ಸಿಎಂ ಬೊಮ್ಮಾಯಿ ಅಭಿನಂದಿಸಿದ್ದಾರೆ.
ಜನರ ದೃಷ್ಟಿಯಿಂದ ಪಾದಯಾತ್ರೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ -ಡಿ.ಕೆ.ಸುರೇಶ್
ಜನರ ದೃಷ್ಟಿಯಿಂದ ಪಾದಯಾತ್ರೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಮತ್ತೆ ಇಲ್ಲಿಂದಲೇ ಪಾದಯಾತ್ರೆ ಪುನಾರಂಭ ಮಾಡುತ್ತೇವೆ. ಬೇಸರ ಅನ್ನೋದಕ್ಕಿಂತ ಜನರ ದೃಷ್ಟಿಯಿಂದ ಸ್ಥಗಿತಗೊಳಿಸಿದ್ದೇವೆ. ಶಾಸಕರು, ಕಾರ್ಯಕರ್ತರು ಪಾದಯಾತ್ರೆ ಯಶಸ್ವಿಗೊಳಿಸಿದ್ದಾರೆ ಎಂದು ರಾಮನಗರದಲ್ಲಿ ಟಿವಿ9ಗೆ ‘ಕೈ’ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಮೂರು ದಿನ ಮೌನ ಎಂದಿದ್ದೇ, ವಿಧಿಯಿಲ್ಲದೇ ಮೌನ ಮುರಿಯುತ್ತಿದ್ದೇನೆ
ಮೂರು ದಿನ ಮೌನ ಎಂದಿದ್ದೇ. ವಿಧಿಯಿಲ್ಲದೇ ಮೌನ ಮುರಿಯುತ್ತಿದ್ದೇನೆ. ಕೊರೊನಾ ಸೋಂಕಿತ ಡಿಸಿಯ ನೋಟಿಸ್ ನೀಡಲು ಬಂದಿದ್ದರು. ರಾಮನಗರ ಎಸಿ, ಡಿವೈಎಸ್ಪಿ ನೋಟಿಸ್ ನೀಡಲು ಬಂದಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. ಕೊರೊನಾ ಸೋಂಕಿತ ಡಿಸಿಯ ನೋಟಿಸ್ ನೀಡಲು ಬಂದಿದ್ದರು. ರಾಮನಗರ ಎಸಿ, ಡಿವೈಎಸ್ಪಿ ನೋಟಿಸ್ ನೀಡಲು ಬಂದಿದ್ದರು. ಕೊರೊನಾ ಹಿನ್ನೆಲೆ ಡಿಸಿ ಮನೆಯಿಂದ ಹೊರಬಂದಿರಲಿಲ್ಲ. ಆದರೆ ಸೋಂಕಿತ ಡಿಸಿ ಸಹಿಯುಳ್ಳ ನೋಟಿಸ್ ನೀಡಿದ್ದಾರೆ. ನಿಮ್ಮ ಹೋರಾಟದ ವೇಳೆ ಜನರಿಗೆ ಸಮಸ್ಯೆ ಆಗಬಾರದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗುತ್ತೆ. ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ರಸ್ತೆ ಬದಿ ನಡೆಯಿರಿ ಎಂದು ಡಿಸಿ ನೋಟಿಸ್ ಉಲ್ಲೇಖವಾಗಿದ್ದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ರು. ಮತ್ತೊಂದೆಡೆ ಎಸ್ಪಿಗೆ ಸೂಚಿಸಿದ್ದ ಜಿಲ್ಲಾಧಿಕಾರಿ ಪಾದಯಾತ್ರೆಗೆ ಬೇಕಾದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು ಎಂದು ಡಿಕೆಶಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಶಾಂತಿಯಿಂದ ಮುಗಿದಿರೋದು ಸಮಾಧಾನಕರ ಸಂಗತಿ -ಗೃಹ ಸಚಿವ ಅರಗ ಜ್ಞಾನೇಂದ್ರ
ಕಾಂಗ್ರೆಸ್ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಸಂಘರ್ಷಕ್ಕೆ ಅವಕಾಶವಿಲ್ಲದೇ ಕೊನೆಯಾಗಿದೆ. ಕಾಂಗ್ರೆಸ್ನಲ್ಲಿರುವವರು ಸರ್ಕಾರ ನಡೆಸಿದ ಅನುಭವಸ್ಥರು ಸಂಘರ್ಷ ಇಲ್ಲದೇ ಮುಗಿಸುತ್ತಾರೆ ಎಂದು ನಂಬಿದ್ದೆವು. ಸರ್ಕಾರದ ಸಹನೆ ಅತಿಯಾಯ್ತು ಎಂಬ ಟೀಕೆ ಬಂತು. ಇಂತಹ ಸಂದರ್ಭದಲ್ಲಿ ಸೂಕ್ಷ್ಮವಾಗಿ ನಿರ್ವಹಿಸಬೇಕಾಗುತ್ತದೆ. ಸಿಎಂ ನಿಲುವು ಫಲ ಕೊಟ್ಟಿದೆ. ಮುಂದೆ ರಾಜ್ಯದಲ್ಲಿ ಕೊರೊನಾ ವಿರುದ್ಧ ನಮ್ಮ ಹೋರಾಟ ನಡೆಯಬೇಕು. ಕೊರೊನಾ ಮುಗಿಯದೇ ಯಾವುದೇ ಹೋರಾಟ ಇರುವುದಿಲ್ಲ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಮ್ಮದು ಬಹಳ ಹಳೆದ ರಾಜಕೀಯ ಪಕ್ಷ, ಅಧಿಕಾರ ಮಾಡಿದ ಪಕ್ಷ ನಮಗೆ, ಪಕ್ಷಕ್ಕೆ ಬಹಳ ದೊಡ್ಡ ಜವಾಬ್ದಾರಿಯಿದೆ
ಮೇಕೆದಾಟು ಯೋಜನೆಗೆ ಬಹಳ ಉತ್ಸಾಹದಿಂದ ಭಾಗವಹಿಸಿದ್ರಿ. ಪಾದಯಾತ್ರೆಗೆ ಬಹಳ ಅಭೂತಪೂರ್ವವಾದ ಯಶಸ್ಸನ್ನು ತಂದಿದ್ದೀರಾ ಎಂದು ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ. ನಮ್ಮ ನಿರ್ಧಾರದಂತೆ 9ನೇ ತಾರೀಖು ಸಂಗಮದಿಂದ ಪಾದಯಾತ್ರೆ ಆರಂಭವಾಯ್ತು. ಇಂದು ಬೆಳಗ್ಗೆ ರಾಮನಗರದಿಂದ ಪಾದಯಾತ್ರೆ ಆರಂಭವಾಗಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗಬೇಕಿತ್ತು. ನಿನ್ನೆ 15,000ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ನಮ್ಮದು ಬಹಳ ಹಳೆದ ರಾಜಕೀಯ ಪಕ್ಷ, ಅಧಿಕಾರ ಮಾಡಿದ ಪಕ್ಷ ನಮಗೆ, ಪಕ್ಷಕ್ಕೆ ಬಹಳ ದೊಡ್ಡ ಜವಾಬ್ದಾರಿಯಿದೆ. ಕೊರೊನಾ ಸೋಂಕು ವೇಗವಾಗಿ ಹರಡಲು ಬಿಜೆಪಿಯೇ ಕಾರಣ. ದೇಶ, ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯವರೇ ನೇರ ಹೊಣೆ. ಜ.6ರಂದು ನೂತನ ಎಂಎಲ್ಸಿಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸುಮಾರು 4,000 ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ನೆರವೇರಿಸಲಾಯಿತು ಎಂದು ತಿಳಿಸಿದ್ದಾರೆ.
ಗೃಹಸಚಿವ ಜ್ಞಾನೇಂದ್ರ ಸುದ್ದಿಗೋಷ್ಠಿ
ಮೇಕೆದಾಟು ಪಾದಯಾತ್ರೆ ಸ್ಥಗಿತ ಹಿನ್ನೆಲೆ ಬೆಂಗಳೂರಿನಲ್ಲಿ ಗೃಹಸಚಿವ ಜ್ಞಾನೇಂದ್ರ ಸುದ್ದಿಗೋಷ್ಠಿ
ಕಾಂಗ್ರೆಸ್ ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ -ಸಚಿವ ಬಿಸಿ ನಾಗೇಶ್
ಕಾಂಗ್ರೆಸ್ ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ತಮ್ಮದೇ ಕಾಲೇಜಿನ ವಿದ್ಯಾರ್ಥಿಗಳನ್ನ ಬಳಕೆ ಮಾಡಿದ್ದಾರೆ. ಈಗಾಗಲೇ ಆ ಕಾಲೇಜಿನ ಪ್ರಿನ್ಸಿಪಲ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಬಿಇಎ, ಡಿಡಿಪಿಐ ತಕ್ಷಣವೇ ಹೋಗಿ, ರೀಪೋರ್ಟ್ ಕೊಡಿ ಅಂತಾ ಹೇಳಿದ್ದೀವಿ. ಇವತ್ತು ಕೋಡ್ತಾರೆ ಎಲ್ಲ ಮಕ್ಕಳಿಗೂ ಕೊರೊನಾ ಟೆಸ್ಟಿಂಗ್ ಮಾಡಲಾಗುತ್ತೆ. ಅದು ಡಿಕೆ ಶಿವಕುಮಾರ್ ಅವರ ಅಂಡರ್ ನಲ್ಲಿರೋ ಶಾಲೆ. ವಿದ್ಯಾರ್ಥಿಗಳನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು. ಆ ತರ ಮಾಡಿದ್ದು ತಪ್ಪು. ಏನಾಗಿದೆ ಅನ್ನೋದನ್ನ ನೋಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಹೋರಾಟಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಡಿ.ಕೆ.ಸುರೇಶ್
ಮೇಕದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೈ ನಾಯಕರ ವಿರುದ್ಧ ಸಚಿವ ಬೈರತಿ ಬಸವರಾಜ್ ಆಕ್ರೋಶ
ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಮೇಕೆದಾಟು ಗ್ರೀನ್ ಟ್ರ್ಯೂಬನಲ್ ನಲ್ಲಿತ್ತು ಪಾದಯಾತ್ರೆ ನಿಲ್ಲಿಸೋದು ಅವರ ಕರ್ತವ್ಯ. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸುವ ಕೆಲಸ ಮಾಡಲಾಗಿದೆ. ಮೇಕೆದಾಟು ವಿಚಾರಕ್ಕೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಹೋಗಿದೆ. ಕಾನೂನುಗಳಲ್ಲಿ ಏನಾದರೂ ಏರು ಪೇರಾದರೆ ಸಂಪೂರ್ಣ ಹೊಣೆ ಕಾಂಗ್ರೆಸ್ ನದ್ದು. ನಾವೀಗ ಕಾನೂನು ಹೋರಾಟ ಮಾಡ್ತಿದ್ದೇವೆ. ಫಿಸಿಕಲ್ ರಿಪೋರ್ಟ್ ಗೆ 5 ವರ್ಷ ತೆಗೆದುಕೊಂಡಿದ್ದೀರಿ ಎಂದು ದಾವಣಗೆರೆಯಲ್ಲಿ ಕೈ ನಾಯಕರ ವಿರುದ್ಧ ಸಚಿವ ಬೈರತಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ದೇಶವೇ ಕಾಂಗ್ರೆಸ್ ನ ಪಾದಯಾತ್ರೆ ನಾಟಕ ನೋಡುತ್ತಿದೆ -ಸಂಸದ ಬಿ.ವೈ ರಾಘವೇಂದ್ರ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನ ಪಾದಯಾತ್ರೆ ರಾಜಕೀಯ ಪ್ರೇರಿತ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಾದಾಯಾತ್ರೆ ಅಗತ್ಯ ಇರಲಿಲ್ಲ. ಕಾಂಗ್ರೆಸ್ ನಾಯಕರಿಗೆ ಜನರ ಆರೋಗ್ಯ ಕುರಿತು ಕಾಳಜಿ ಇಲ್ಲ. ಪಾದಯಾತ್ರೆ ಮೂಲಕ ರಾಜ್ಯ ತುಂಬೆಲ್ಲಾ ಕೋವಿಡ್ ಹರಡಿಸುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಹೋದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇಡೀ ದೇಶವೇ ಕಾಂಗ್ರೆಸ್ ನ ಪಾದಯಾತ್ರೆ ನಾಟಕ ನೋಡುತ್ತಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಆಕ್ರೋಶ ಹೊರ ಹಾಕಿದ್ರು.
ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಸುದ್ದಿಗೋಷ್ಠಿ
ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಸಿದ್ದರಾಮಯ್ಯ ಪಾದಯಾತ್ರೆ ಬಗ್ಗೆ ಮಾತು
ಕೆಲವೇ ನಿಮಿಷಗಳಲ್ಲಿ ಪಾದಯಾತ್ರೆ ಬಗ್ಗೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಮಾತನಾಡಲಿದ್ದಾರೆ.
ಹೈಕಮಾಂಡ್ ನಿರ್ದೇಶನದಂತೆ ಪಾದಯಾತ್ರೆ ಮೊಟಕು
ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದರು. ಹೈಕಮಾಂಡ್ ನಿರ್ದೇಶನದಂತೆ ಪಾದಯಾತ್ರೆ ಮೊಟಕುಗೊಳಿಸಿದ್ದಾರೆ.
11 ದಿನದ ಪಾದಯಾತ್ರೆ 5ನೇ ದಿನಕ್ಕೆ ಅಂತ್ಯ
ಸಭೆ ಬಳಿಕ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೊಟಕುಗೊಳಿಸಿದ್ದಾರೆ.
ಪಾದಯಾತ್ರೆ ನಿಲ್ಲಿಸಲು ಕಾಂಗ್ರೆಸ್ ನಿರ್ಧಾರ
ಐದನೇ ದಿನಕ್ಕೆ ಪಾದಯಾತ್ರೆ ನಿಲ್ಲಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಸಭೆಯಲ್ಲಿ ಭಾಗವಹಿಸಿ ಹೊರಬಂದ ಯುಟಿ ಖಾದರ್
ಸಭೆ ಸದ್ಯ ಅಂತ್ಯವಾಗಿದ್ದು, ಯುಟಿ ಖಾದರ್ ಸಭೆಯಲ್ಲಿ ಭಾಗವಹಿಸಿ ಹೊರಬಂದಿದ್ದಾರೆ.
ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಸಭೆ ಅಂತ್ಯ
ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ನಡೆದ ಸಭೆ ನಾಯಕರ ಸಭೆ ಅಂತ್ಯವಾಗಿದೆ.
ಪಾದಯಾತ್ರೆಯಿಂದ ಮೈಸೂರು-ಬೆಂಗಳೂರು ರಸ್ತೆ ಬಂದ್, ಬಸ್ ಸಿಗದೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಪರದಾಟ
ಪಾದಯಾತ್ರೆಯಿಂದ ಮೈಸೂರು-ಬೆಂಗಳೂರು ರಸ್ತೆ ಬಂದ್ ಆಗಿದ್ದು ಬಸ್ ಸಿಗದೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಹನ್ ಫಾರಂನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ರಾಮನಗರದಿಂದ 8 ಕಿಲೋಮೀಟರ್ ದೂರದಲ್ಲಿದೆ.
ನೆಲಮಂಗಲದಿಂದ ಬ್ಯಾರಿಕೇಡ್ ಸಮೇತ ರಾಮನಗರಕ್ಕೆ ದೌಡಾಯಿಸಿದ ಪೊಲೀಸರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಬ್ಯಾರಿಕೇಡ್ ಸಮೇತ ರಾಮನಗರಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಆದೇಶದ ಮೇರೆಗೆ ನೆಲಮಂಗಲ ವಿಭಾಗದ 5 ಠಾಣೆಯ 500ಕ್ಕೂ ಪೊಲೀಸರು ರಾಮನಗರಕ್ಕೆ ದೌಡಾಯಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ ಸಾಧ್ಯತೆ
ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಮುಂದುವರಿಕೆ ಅಥವಾ ತಾತ್ಕಾಲಿಕವಾಗಿ ಸ್ಥಗಿತದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಪಾದಯಾತ್ರೆ ಮುಂದುವರಿಸಲು ಡಿಕೆ ಶಿವಕುಮಾರ್ ಪಟ್ಟು
ಪಾದಯಾತ್ರೆ ಮುಂದುವರಿಸಲು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಪಾದಯಾತ್ರೆ ಮಾಡೇ ಮಾಡೋಣ. ನಿಯಮ ಅನುಸರಿಸಿ ಮಾಡೋಣ ಎಂದು ಪಟ್ಟು ಹಿಡಿದಿದ್ದಾರೆ. ಡಿಕೆಶಿಗೆ ಚಲುವರಾಯಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗೂ ಪಾದಯಾತ್ರೆಗೆ ಮಾಜಿ ಸಚಿವ ಯು.ಟಿ.ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಪಾದಯಾತ್ರೆಯನ್ನು ಮುಂದೂಡೋಣ ಎಂದಿದ್ದಾರೆ.
ನಾವು ಐವರಾದರೂ ಕೊರೊನಾ ನಿಯಮ ಪಾಲಿಸಿ ನಡೆದುಕೊಂಡು ಹೋಗೋಣ
ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಮಾತುಕತೆ ಜೋರಾಗಿದೆ. ನಾವು ಐವರಾದರೂ ಕೊರೊನಾ ನಿಯಮ ಪಾಲಿಸಿ ನಡೆದುಕೊಂಡು ಹೋಗೋಣ. ನಮ್ಮ ಜತೆ ಜನರು ಬರದಂತೆ ವಿನಂತಿ ಮಾಡಿಕೊಳ್ಳೋಣ ಎಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ.
ಪಾದಯಾತ್ರೆ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಸಿಎಂ ಮಾಹಿತಿ
ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ವೇಳೆ ಪಾದಯಾತ್ರೆ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಪಕ್ಷದ ಪ್ರಮುಖರ ಗಮನಕ್ಕೂ ತಂದಿದ್ದಾರೆ. ಸರ್ಕಾರದ ನಿರ್ಧಾರ, ನಡೆ, ನಿಲುವಿನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಅವರವರ ಇತಿಮಿತಿಯಲ್ಲಿರಬೇಕು -ಬಿಜೆಪಿ ಶಾಸಕ ಪ್ರೀತಂಗೌಡ
ಮೇಕೆದಾಟುವಿಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಮಾತನಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಅವರವರ ಇತಿಮಿತಿಯಲ್ಲಿರಬೇಕು. ರಾಜಕೀಯ ಪಕ್ಷವೂ ಸೇರಿದಂತೆ ಎಲ್ಲರಿಗೆ ಸಾರ್ವಜನಿಕರು ಕೇಳ್ಕೊಳ್ತಾ ಇದ್ದಾರೆ. ಆರೋಗ್ಯ ಕಾಪಾಡಿಕೊಳ್ಳೋದಕ್ಕೆ ಎಲ್ಲರೂ ಸೂಕ್ಷ್ಮವಾಗಿರಬೇಕು. ನಾನಂತೂ ಪಾಲನೆ ಮಾಡ್ತಾ ಇದ್ದೇನೆ. ಭಾರತೀಯ ಜನತಾ ಪಾರ್ಟಿಯೂ ಪಾಲನೆ ಮಾಡ್ತಾ ಇದೆ. ಎಲ್ಲವನ್ನೂ ಜನರು ಗಮನಿಸ್ತಾ ಇರ್ತಾರೆ. ಜನ ಪಾದಯಾತ್ರೆ ಮಾಡಿದ್ರೆ ಮಾತ್ರ ಮತ ಹಾಕ್ತರೆ ಅನ್ಕೊಂಡಿದ್ರೆ ತಪ್ಪು ಎಂದಿದ್ದಾರೆ.
ತಕ್ಷಣ ಪಾದಯಾತ್ರೆ ನಿಲ್ಲಿಸುವಂತೆ ರಣದೀಪ್ ಸುರ್ಜೇವಾಲ ಮೂಲಕ ಸಂದೇಶ ರವಾನೆ!
ಮೇಕೆದಾಟು ಪಾದಯಾತ್ರೆಗೆ ಎಐಸಿಸಿ ಬ್ರೇಕ್ ಹಾಕಿದೆ. ತಕ್ಷಣ ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ರಣದೀಪ್ ಸುರ್ಜೇವಾಲ ಮೂಲಕ ಸಂದೇಶ ರವಾನಿಸಿದೆ. ರಾಜ್ಯ ‘ಕೈ’ ನಾಯಕರಿಗೆ ಎಐಸಿಸಿಯಿಂದ ಸಂದೇಶ ರವಾನಿಸಲಾಗಿದೆ.ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಖಭಂಗ ತಪ್ಪಿಸಲು ತಕ್ಷಣ ಪಾದಯಾತ್ರೆ ನಿಲ್ಲಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಐಸಿಸಿಯಿಂದ ಸಂದೇಶ ರವಾನೆಯಾಗಿದೆ.
ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಬಗ್ಗೆ ನಮಗೆ ನಂಬಿಕೆ ಇಲ್ಲ -ಸಚಿವ ಸುನಿಲ್ ಕುಮಾರ್
ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಬಗ್ಗೆ ನಮಗೆ ನಂಬಿಕೆ ಇಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿರುವ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದೆ. ನ್ಯಾಯಾಲಯದ ಆದೇಶಕ್ಕೂ ಗೌರವ ಕೊಡದ ಮೇಲೆ ಇನ್ಯಾರಿಗೆ ಗೌರವ ಕೊಡ್ತಾರೆ. ಜನ ಇವರನ್ನ ಪ್ರಶ್ನೆ ಮಾಡೋ ಕಾಲ ಬರಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆದೇಶ ಮಾಡಿದ್ದೇವೆ. ಅದಕ್ಕೆ ಅವರು ಸಹಕರಿಸಬೇಕಿದೆ. ಸುಮ್ಮನಿರೋ ಪ್ರಶ್ನೆಯೇ ಇಲ್ಲ. ಕೋರ್ಟ್ ಆದೇಶದ ಬಳಿಕವೂ ಅವರು ಎಚ್ಚೆತ್ತುಕೊಂಡಿಲ್ಲ. ಗೃಹ ಇಲಾಖೆ ಅವರ ಬಗ್ಗೆ ಕ್ರಮ ಕೈಗೊಳ್ಳಲಿದೆ. ಅವರೂ ಕೂಡ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದವರು. ಬೆಳಗಾವಿಯಲ್ಲಿ ಕನ್ನಡ, ಧ್ವಜ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿದ್ದೆವು. ಆದರೆ ಇಲ್ಲಿ ನೀರಿನ ವಿಚಾರವಾಗಿ ನಡೆಯುತ್ತಿರೋ ಪಾದಯಾತ್ರೆ ಅಲ್ಲ. ಇದು ರಾಜಕೀಯ ಪಾದಯಾತ್ರೆ ಎಂದು ಸಚಿವ ಸುನಿಲ್ ಕುಮಾರ್ ಗರಂ ಆಗಿದ್ದಾರೆ.
ರಾಮನಗರದಲ್ಲಿ ಹೆಚ್ಚುವರಿ ಐಪಿಎಸ್ ಅಧಿಕಾರಿಗಳ ಆಗಮನ
ರಾಮನಗರದಲ್ಲಿ ಹೆಚ್ಚುವರಿ ಐಪಿಎಸ್ ಅಧಿಕಾರಿಗಳ ಆಗಮನವಾಗಿದೆ. ರಾಮನಗರಕ್ಕೆ ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿರುವ ಐಪಿಎಸ್ ಅಧಿಕಾರಿ ಅನೂಪ್ ಶೆಟ್ಟಿ ಆಗಮಿಸಿದ್ದಾರೆ. ಹಾಗೂ ಬೆಂಗಳೂರು ನಗರ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಕೂಡ ಆಗಮಿಸಿದ್ದು ರಾಮನಗರದಲ್ಲಿನ ಭದ್ರತೆ ಬಗ್ಗೆ ಪರಿಶೀಲನೆ ಕೈಗೊಂಡಿದ್ದಾರೆ.
ಸಂಪೂರ್ಣವಾಗಿ ಪಾದಯಾತ್ರೆ ನಿಷೇಧಿಸಲಾಗಿದೆ -ಡಾ.ಅಶ್ವತ್ಥ ನಾರಾಯಣ
ಪಾದಯಾತ್ರೆ ವಿಚಾರದಲ್ಲಿ ಸಿಎಂ ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ. ಸಂಪೂರ್ಣವಾಗಿ ಪಾದಯಾತ್ರೆ ನಿಷೇಧಿಸಲಾಗಿದೆ. ಸಿಎಂ ನಾಯಕತ್ವದಲ್ಲಿ ಎಲ್ಲ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ. ಸಿಎಂ ಸಂಬಂಧಪಟ್ಟ ಸಚಿವರಿಗೆ ಇಲಾಖೆಗೆ ಸೂಕ್ತ ನಿರ್ದೇಶನ ಕೊಟ್ಟಿದ್ದಾರೆ. ಅವರು ಉಲ್ಲಂಘನೆ ಮಾಡಲಿ ನೋಡೋಣ ಏನು ಮಾಡಬೇಕೋ ಮಾಡ್ತೀವಿ. ಸಾಕಷ್ಟು ಅವಕಾಶ ಕೊಟ್ಟಿದ್ದಾಗಿದೆ. ಅವರೆಲ್ಲ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ
ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸದ್ಯ ಈಗ ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಖರ್ಗೆಯವರ ದೆಹಲಿ ಕಚೇರಿಯ ಐವರು ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ.
ಐಜೂರು ಸರ್ಕಲ್‌ಗೆ ಆಗಮಿಸಿದ 2 ವಾಟರ್ ಜೆಟ್ ವಾಹನಗಳು
ರಾಮನಗರದಿಂದ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಐಜೂರು ಸರ್ಕಲ್‌ಗೆ 2 ವಾಟರ್ ಜೆಟ್ ವಾಹನಗಳು ಆಗಮಿಸಿವೆ. ಜನರು ಗುಂಪುಗೂಡದಂತೆ ಪೊಲೀಸರು ಅನೌನ್ಸ್‌ಮೆಂಟ್ ಮಾಡ್ತಿದ್ದಾರೆ.
ಐಜೂರು ಸರ್ಕಲ್ ಬಳಿ ಆಗಮಿಸಿದ ಸಾಂಸ್ಕೃತಿಕ ಕಲಾ ತಂಡಗಳು
ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಐಜೂರು ಸರ್ಕಲ್ ಬಳಿ ಸಾಂಸ್ಕೃತಿಕ ಕಲಾ ತಂಡಗಳು ಆಗಮಿಸಿವೆ. ಕಲಾ ತಂಡಗಳಿಂದ ಐಜೂರು ಸರ್ಕಲ್ ನಲ್ಲಿ ಹುಲಿ ಡ್ಯಾನ್ಸ್.
ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಶುರು
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಸಂಬಂಧಿಸಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಶುರುವಾಗಿದೆ. ಪಾದಯಾತ್ರೆ ಮುಂದುವರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ರಾಜಕೀಯ ಮೇಲಾಟಕ್ಕಾಗಿ ಜನರ ಪ್ರಾಣದ ಜೊತೆ ಆಟ ಆಡ್ತಿದ್ದಾರೆ -ಪ್ರತಾಪ್ ಸಿಂಹ ವಾಗ್ದಾಳಿ
ಕೊರೊನಾ ನಡುವೆ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಹಾಗೂ ಡಿಕೆಶಿ ರಾಜಕೀಯ ಮೇಲಾಟಕ್ಕಾಗಿ ಜನರ ಪ್ರಾಣದ ಜೊತೆ ಆಟ ಆಡ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗ್ತಾರೆ ಅನ್ನೊದು ಕಾಂಗ್ರೆಸ್ ಪ್ರತೀತಿ. ಈ ಬಾರಿ ಏನಾದ್ರೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ರೆ ಡಿ.ಕೆ.ಶಿವಕುಮಾರ್ ಸಿಎಂ ಅಂತಾರೆ ಇದನ್ನ ತಪ್ಪಿಸೋಕೆ ಒಳಗೊಳಗೆ ಪಿತೂರಿ ನಡೆಯುತ್ತಿದೆ. ಕಳೆದ ಬಾರಿ ಇದೇ ರೀತಿ ಪಿತೂರಿ ಮಾಡಿ ಸಿದ್ದರಾಮಯ್ಯ ಪರಮೇಶ್ವರ್ ಅವರನ್ನ ಸೋಲಿಸಿದ್ರು. ಈಗ ಡಿ.ಕೆ.ಶಿವಕುಮಾರ್ ನಾನೆ ಮುಂದಿನ ಸಿಎಂ ಅಂತಾರೆ. ಸಿದ್ದರಾಮಯ್ಯ ಕೂಡಾ ನಾನೆ ಮುಖ್ಯಮಂತ್ರಿ ಅಂತಾರೆ. ಇವರಿಬ್ಬರ ಅಧಿಕಾರದ ಲಾಲಾಸೆಗೆ ಜನರ ಪ್ರಾಣದ ಜೊತೆ ಆಟ ಆಡ್ತಿದ್ದಾರೆ ಎಂದರು.
ಬ್ಯಾರಿಕೇಡ್ ಹಾಕಿ ಐಜೂರು ಸರ್ಕಲ್ ಬಂದ್ ಮಾಡಿದ ಪೊಲೀಸ್
ಬ್ಯಾರಿಕೇಡ್ ಹಾಕಿ ಪೊಲೀಸರು ಐಜೂರು ಸರ್ಕಲ್ ಬಂದ್ ಮಾಡಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಗೆ ಬ್ರೇಕ್ ಹಾಕಲು ರಾಮನಗರ ಬಸ್ ನಿಲ್ದಾಣ ಬಳಿ ಇರುವ ಐಜೂರು ಸರ್ಕಲ್ ಬಂದ್ ಮಾಡಿದ್ದಾರೆ. ಬ್ಯಾರಿಕೇಡ್ ಹಾಕಿ ಸುತ್ತಲೂ ಪೊಲೀಸರು ನಿಂತಿದ್ದಾರೆ.
ದೂರವಾಣಿ ಮೂಲಕ ರಾಹುಲ್ ಗಾಂಧಿ ಜೊತೆ ಡಿಕೆಶಿ ಚರ್ಚೆ
ರಾಮನಗರಕ್ಕೆ ತೆರಳವ ದಾರಿ ಮಧ್ಯಯೇ ಡಿಕೆ ಶಿವಕುಮಾರ್ ವಾಹನ ನಿಲ್ಲಿಸಿ ದೂರವಾಣಿಯ ಮೂಲಕ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿ ಜೊತೆ ದೂರವಾಣಿ ಮೂಲಕ ಡಿಕೆ ಶಿವಕುಮಾರ್ ಪಾದಯಾತ್ರೆಯ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಯಾವುದೇ ರೀತಿಯ ಅಪವಾದ ಬರದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.
ಕಾಂಗ್ರೆಸ್ ಕಚೇರಿಗೆ ಎಸ್ಪಿ ಗಿರೀಶ್, ಐಜಿ ಲೋಕೇಶ್ ಭೇಟಿ
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಐಜಿ ಲೋಕೇಶ್, ಎಸ್ಪಿ ಗಿರೀಶ್ ಭೇಟಿ ನೀಡಿದ್ದಾರೆ.
ಸಿಎಂ, ಡಿಜಿಪಿ, ರಾಮನಗರ ಡಿಸಿ, ಎಸ್ಪಿ ಜೊತೆ ಕರೆ ಮಾಡಿ ಚರ್ಚೆ ನಡೆಸಿದ ಗೃಹಸಚಿವ ಆರಗ ಜ್ಞಾನೇಂದ್ರ
ರಾಮನಗರದಿಂದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಸಿಎಂ, ಡಿಜಿಪಿ, ರಾಮನಗರ ಡಿಸಿ, ಎಸ್ಪಿ ಜೊತೆ ದೂರವಾಣಿ ಕರೆ ಮಾಡಿ ಗೃಹಸಚಿವ ಆರಗ ಜ್ಞಾನೇಂದ್ರ ಚರ್ಚೆ ನಡೆಸಿದ್ದಾರೆ.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ; ಬಿಜೆಪಿ ಶಾಸಕರ ಜತೆ ಸಿಎಂ ಬೊಮ್ಮಾಯಿ ಸಭೆ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಬೆಂಗಳೂರು ಬಿಜೆಪಿ ಶಾಸಕರ ಜತೆ ಸಿಎಂ ಬೊಮ್ಮಾಯಿ ಸಭೆ ನಡೆಸುತ್ತಿದ್ದಾರೆ. ಆರ್.ಟಿ.ನಗರದ ನಿವಾಸದಿಂದ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಮುಂದಾಗಿದ್ದು ಬೆಂಗಳೂರಿನಲ್ಲಿ ಪಾದಯಾತ್ರೆಯ ರಾಜಕೀಯ ಪರಿಣಾಮ, ರಾಜಕೀಯ ಪರಿಣಾಮಗಳನ್ನು ಬೀರುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹಾಗೂ ಬೆಂಗಳೂರಿಗೆ ಪಾದಯಾತ್ರೆ ಪ್ರವೇಶಕ್ಕೆ ಅವಕಾಶ ನೀಡದಂತೆ ಸಿಎಂ ಬೊಮ್ಮಾಯಿ ಮೇಲೆ ಬಿಜೆಪಿ ಶಾಸಕರು ಒತ್ತಡ ಹಾಕಿದ್ದಾರೆ.
ರಾಮನಗರಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ರಾಮನಗರದ ಕಾಂಗ್ರೆಸ್ ಭವನಕ್ಕೆ ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಆಗಮಿಸಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಯಾವಾಗ ವಿಜ್ಞಾನಿಯಾದರೂ ಗೊತ್ತಿಲ್ಲ -ಬಿಕೆ ಹರಿಪ್ರಸಾದ್
ಹೆಚ್ಡಿ ಕುಮಾರಸ್ವಾಮಿ ಯಾವಾಗ ವಿಜ್ಞಾನಿಯಾದರೂ ಗೊತ್ತಿಲ್ಲ ಎಂದು ಹೆಚ್ಡಿ ಕುಮಾರಸ್ವಾಮಿಗೆ ಬಿಕೆ ಹರಿಪ್ರಸಾದ್ ತಿರುಗೇಟು ಕೊಟ್ಟಿದ್ದಾರೆ. ಪಾದಯಾತ್ರೆ ಮುಂದುವರಿಸಬೇಕಾ? ಬೇಡ್ವಾ? ಅನ್ನೋದರ ಬಗ್ಗೆ ಸಿಎಲ್ಪಿ ಸಭೆಯಲ್ಲಿ ತೀರ್ಮಾನ ಮಾಡ್ತಿವಿ. ಸರ್ಕಾರ ಹಾಗೂ ನ್ಯಾಯಾಲಯ ಎರಡು ವಿಚಾರಗಳು ನಮ್ಮ ಮುಂದೆ ಇವೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೂ ನ್ಯಾಯಾಲಯದಿಂದ ನೊಟೀಸ್ ಬಂದಿದೆ. ಹೀಗಾಗಿ ಮುಂದೆ ಏನ್ ಮಾಡಬೇಕು ಅಂತಾ ಶಾಸಕಾಂಗ ಪಕ್ಷದಲ್ಲಿ ತೀರ್ಮಾನಿಸುತ್ತೇವೆ ಎಂದರು.
ಕಾಂಗ್ರೆಸ್ ಪಾದಯಾತ್ರೆ ಸಾಗಿಬರುವ ರಸ್ತೆಯಲ್ಲಿ ಸಂಚಾರ ಬಂದ್
ಕಾಂಗ್ರೆಸ್ ಪಾದಯಾತ್ರೆ ಸಾಗಿಬರುವ ರಸ್ತೆಯಲ್ಲಿ ಪೊಲೀಸರು ವಾಹನ ಸಂಚಾರ ಬಂದ್ ಮಾಡಿದ್ದಾರೆ. ಚನ್ನಪಟ್ಟಣದಿಂದ ಬಿಡದಿ ಮಾರ್ಗ ಹೋಗುವ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ದ್ವಿಮುಖ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಲಾಗಿದೆ.
ರಾಮನಗರಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು
ರಾಮನಗರದಿಂದ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಮನಗರದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಈ ಹಿಂದೆ ರಾಮನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ SPಗಳು ಆಗಮಿಸಿದ್ದು ಪೊಲೀಸರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ರೈತರಿಗಾಗಿ ಪಾದಾಯತ್ರೆ ಎಂದು ಕಾಂಗ್ರೆಸ್ ಗಿಮಿಕ್ ಮಾಡ್ತಿದೆ -ಸಚಿವ ಗೋವಿಂದ ಕಾರಜೋಳ
ಪಾದಯಾತ್ರೆ ತಡೆಯದಿದ್ದರೆ ನಮ್ಮ ಸರ್ಕಾರ ದುರ್ಬಲ ಸರ್ಕಾರ ಎಂಬ ಮಾಜಿ ಸಚಿವ ಸಿ.ಪಿ.ಯೊಗೇಶ್ವರ್ ಹೇಳಿಕೆಗೆ ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮದು ದುರ್ಬಲ ಸರ್ಕಾರ ಅಲ್ಲ. ರೈತರಿಗಾಗಿ ಪಾದಾಯತ್ರೆ ಎಂದು ಅವರು ಗಿಮಿಕ್ ಮಾಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕಿಗಾಗಿ ಪಾದಯಾತ್ರೆ ಎಂದು ಡ್ರಾಮಾ. ಇಂತಹ ಗಿಮಿಕ್ಗಳನ್ನ ಬಿಡಬೇಕು ಎಂದ ಸಚಿವ ಕಾರಜೋಳ ಹೇಳಿದ್ರು.
ಪಾದಯಾತ್ರೆಗೆ ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ತಡೆ
ಪಾದಯಾತ್ರೆಗೆ ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಗೇಪುರ ಗೇಟ್ ಬಳಿ ತಡೆಯಲಾಗಿದೆ. ಚೆಕ್ಪೋಸ್ಟ್ ಬಳಿ ತಡೆದು ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ.
ರಾಮನಗರದಲ್ಲಿ ಕಾಂಗ್ರೆಸ್ ನಾಯಕರ ಸಭೆ ಆರಂಭ
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಸಭೆ ಆರಂಭವಾಗಿದೆ.
ಕನಕಪುರ ನಿವಾಸದಿಂದ ರಾಮನಗರದತ್ತ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರ ನಿವಾಸದಿಂದ ರಾಮನಗರದತ್ತ ತೆರಳುತ್ತಿದ್ದಾರೆ.
ಒಂದು ಹೆಜ್ಜೆಯೂ ಮುಂದೆ ಹೋಗಲು ಬಿಡುವುದಿಲ್ಲ: ಆರಗ ಜ್ಞಾನೇಂದ್ರ
ಒಂದು ಹೆಜ್ಜೆಯೂ ಮುಂದೆ ಹೋಗಲು ಬಿಡುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿ, ಕೋರ್ಟ್ ಸೂಚನೆ ಹಿನ್ನೆಲೆ ಕ್ರಮ ಕೈಗೊಳ್ಳಲಾಗುವುದು. ಬಹಳ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುತ್ತೇವೆ, ಕಾದುನೋಡಿ. ಕಾನೂನು ಪ್ರಕಾರವೇ ಸರ್ಕಾರ ಕ್ರಮಕೈಗೊಳ್ಳಲಿದೆ. ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಮೇಕೆದಾಟು ಯೋಜನೆಗೆ ಯಾವ ಪಕ್ಷವೂ ವಿರೋಧಿಸಿಲ್ಲ ಅಂತ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಅಂಟಿಸಿದ್ದ ನೋಟಿಸ್ ನೊಡಲು ತೆರಳಿದ ಡಿಕೆ ಶಿವಕುಮಾರ್
ಮನೆ ಮುಂದೆ ಅಂಟಿಸಿದ ನೋಟಿಸ್ ನೊಡಲು ಡಿ ಕೆ ಶಿವಕುಮಾರ್ ತೆರಳಿದರು.
ಪಾದಯಾತ್ರೆ ಜತೆ ಕೊರೊನಾ ಹರಡುವ ಯಾತ್ರೆಯೂ ಆಗಿದೆ; ಆರಗ ಜ್ಞಾನೇಂದ್ರ
ವೀರಪ್ಪ ಮೊಯ್ಲಿ, ಮುಲ್ಲಜಮ್ಮ ಸೇರಿ ಹಲವರಿಗೆ ಸೋಂಕು ದೃಢವಾಗಿದೆ. ಪಾದಯಾತ್ರೆ ಜತೆ ಕೊರೊನಾ ಹರಡುವ ಯಾತ್ರೆಯೂ ಆಗಿದೆ. ಜಿಲ್ಲಾಧಿಕಾರಿಗಳಿಗೆ ನಿನ್ನೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ನಾಯಕರು ಒಂದು ಒಳ್ಳೇ ನಿರ್ಧಾರ ಕೈಗೊಳ್ಳಬಹುದು. ಅವರು ನೋಟಿಸ್ ಪಡೆಯದಿದ್ದರೂ ಅಂಟಿಸಿ ಬರಲಾಗಿದೆ. ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ನಿಲ್ಲಿಸಬಹುದು. ನಿಲ್ಲಿಸದಿದ್ದರೆ ಏನು ಮಾಡಬಹುದೋ ಅದನ್ನು ಮಾಡುತ್ತಾರೆ. ಕಾನೂನು ಪ್ರಕಾರ ಏನೆಲ್ಲ ನಿರ್ಬಂಧಿಸಲು ಆಗುತ್ತೋ ಮಾಡುತ್ತೇವೆ ಅಂತ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಪೊಲೀಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ಸಾಧ್ಯತೆ
ಕೆಲವೇ ಕ್ಷಣದಲ್ಲಿ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ. ಪೊಲೀಸ್ ಹಾಗೂ ಕೈ ಕಾರ್ಯಕರ್ತರ ಬಡುವೆ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ವಿಐಪಿಗಳನ್ನ ವಶಕ್ಕೆ ಪಡೆಯಲು ಪೊಲೀಸರು ತಯಾರಿ ನಡೆಸಿಕೊಂಡಿದ್ದಾರೆ.
ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ; ಆರಗ ಜ್ಞಾನೇಂದ್ರ
ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಯುತ್ತಿದೆ ಅಂತ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ರಾಜಕಾರಣಿಗಳು ಜನರಿಗೆ ಮಾದರಿಯಾಗಬೇಕು; ಜನ ಸಾಮಾನ್ಯರ ಆಕ್ರೋಶ
ರಾಜಕಾರಣಿಗಳು ಜನರಿಗೆ ಮಾದರಿಯಾಗಬೇಕು. ಅದನ್ನ ಅವರು ಅರಿತು ಮುಂದೆ ನಡೆಯಬೇಕು. ನಮಗೆ ಒಂದು ರೂಲ್ಸ್ ಅವರಿಗೆ ಒಂದು ರೂಲ್ಸ್. ಕಾಂಗ್ರೆಸ್ ಪಾದಯಾತ್ರೆಯಿಂದ ಎಲ್ಲಾರಿಗೂ ಕೊರೊನಾ ಬರ್ತಿದೆ. ಮಾಸ್ಕ್ ಹಾಕಿತ್ತಿಲ್ಲ ಇವರೇ ಕೊರೊನಾ ಬರಲು ಕಾರಣ ಅಂತ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಗೆ ಸಾರ್ವಜನಕರ ಆಕ್ರೋಶ
ದೇವರ ದರ್ಶನ ಮಾಡಿಕೊಟ್ಟಿಲ್ಲ. ನಮಗೆ ನೂರೆಂಟ್ ರೂಲ್ಸ್ ಮಾಡ್ತಾರೆ. ಪಬ್ಲಿಕ್ ರೂಲ್ಸ್‌ನ್ನ ನೀವು ಏಕೆ ಫಾಲೋ ಮಾಡ್ತಿಲ್ಲ. ನಮಗೆ ಒಂದು ನ್ಯಾಯ ನಿಮಗೆ ಒಂದು ನ್ಯಾಯ ಅಂತ ಪಾದಯಾತ್ರೆ ವಿರುದ್ಧ ಸಾರ್ವಜನಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರನ್ನು ವಾಪಸ್ ಕಳಿಸಿದ ಪೊಲೀಸರು
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಾಗೇಪುರ ಗೇಟ್ ಬಳಿ ಪಾದಯಾತ್ರೆಗೆ ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ಪೊಲೀಸರು ವಾಪಸ್ ಕಳಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಕೆಲವೇ ಕ್ಷಣಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆ ಹಿನ್ನಲೆ ಕಾಂಗ್ರೆಸ್ ಭವನದತ್ತ ಕಾರ್ಯಕರ್ತರು, ಕೆಲ ಶಾಸಕರು ಆಗಮಿಸುತ್ತಿದ್ದಾರೆ.
ಕರ್ನಾಟಕ, ಬೆಂಗಳೂರು ಜನರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಪ್ರಥಮ ಕರ್ತವ್ಯ; ಸಿಎಂ ಬೊಮ್ಮಾಯಿ
ಈಗ ಕೊವಿಡ್ ಮಹಾಮಾರಿ ಮೂರನೆ ಅಲೆಯು ಕರ್ನಾಟಕ ರಾಜ್ಯಕ್ಕೆ ಹಾಗೂ ವಿಶೇಷವಾಗಿ ಬೆಂಗಳೂರಿಗೆ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಜನರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಪ್ರಥಮ ಕರ್ತವ್ಯ ಆಗಿದೆ. ಹೀಗಾಗಿ ಈ ಕರ್ತವ್ಯವನ್ನು ನಿರ್ವಹಿಸಲು ಬದ್ಧತೆ ತೋರಿಸಬೇಕಾಗಿದೆ.
ಮೇಕೆದಾಟು ಯೋಜನೆಯನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಬದ್ಧ; ಸಿಎಂ ಬೊಮ್ಮಾಯಿ ಟ್ವೀಟ್
ಕರ್ನಾಟಕದ ನೆಲ, ಜಲ ಹಾಗೂ ಜನರ ಬಗ್ಗೆ ಯಾವಾಗಲೂ ಕೂಡ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಕೆಲಸ ಮಾಡಿವೆ. ಮೇಕೆದಾಟು ವಿಚಾರದಲ್ಲಿ ಕೂಡಾ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ಈಗ ಕೋವಿಡ್ ಮಹಾಮಾರಿ ಮೂರನೆಯ ಅಲೆಯು ಕರ್ನಾಟಕ ರಾಜ್ಯಕ್ಕೆ ಹಾಗೂ ವಿಶೇಷವಾಗಿ ಬೆಂಗಳೂರಿಗೆ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಜನರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಪ್ರಥಮ ಕರ್ತವ್ಯ ಆಗಿದೆ. ಹೀಗಾಗಿ ಈ ಕರ್ತವ್ಯವನ್ನು ನಿರ್ವಹಿಸಲು ಬದ್ಧತೆ ತೋರಿಸಬೇಕಾಗಿದೆ. 2/3
— Basavaraj S Bommai (@BSBommai) January 12, 2022
ರಾಮನಗರದತ್ತ ಬರುತ್ತಿವೆ ಪೊಲೀಸ್ ವಾಹನಗಳು
ರಾಮನಗರದತ್ತ ಪೊಲೀಸ್ ವಾಹನಗಳು ಬರುತ್ತಿವೆ. ಕೆಎಸ್ ಆರ್ಪಿ ಪೊಲೀಸರ ಬಸ್ಗಳು ರಾಮನಗರ ಕಡೆ ಬರುತ್ತಿವೆ.
ನನಗೆ ಯಾವುದೇ ನೋಟಿಸ್ ಬಂದಿಲ್ಲ; ಸಿದ್ದರಾಮಯ್ಯ
ರಾಮನಗರಕ್ಕೆ ಹೋಗುತ್ತಿದ್ದೇನೆ ನೋಡೋಣ ಏನು ಆಗುತ್ತದೆ. ಇಷ್ಟು ದಿನ ಯಾಕೆ ತಡೆಯಲಿಲ್ಲ. ಅಲ್ಲೇ ಮಾತನಾಡುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಇದೆ ವೇಳೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಅಂತ ತಿಳಿಸಿದ್ದಾರೆ.
ಪಾದಯಾತ್ರೆ ಆರಂಭಕ್ಕೂ ಮುನ್ನವೇ ಬಾರಿ ಟ್ರಾಫಿಕ್ ಜಾಮ್
ಪಾದಯಾತ್ರೆ ಆರಂಭಕ್ಕೂ ಮುನ್ನವೇ ರಾಮನಗರದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಾರಿ ಟ್ರಾಫಿಕ್ ಜಾಮ್ ಆಗಿದೆ.
ಐಜೂರು ಸರ್ಕಲ್‌ಗೆ ಭೇಟಿ ನೀಡಿದ
ಡಿಐಜಿ ಮತ್ತು ಎಸ್ ಪಿ ಗಿರೀಶ್ ಐಜೂರು ಸರ್ಕಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೇಟಿ ಬಳಿಕ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ಬಳಿ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ
ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಪಾದಯಾತ್ರೆ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳ ಬಳಿ ಸಿಎಂ ಬೊಮ್ಮಾಯಿ ಪಡೆದರು.
ತಾಯಗತಾಯ ಪಾದಯಾತ್ರೆಗೆ ಡಿ ಕೆ ಶಿವಕುಮಾರ್ ಪಣ
ಪಾದಯಾತ್ರೆಗೆ ಡಿ ಕೆ ಶಿವಕುಮಾರ್ ಪಣ ತೊಟ್ಟಿದ್ದಾರೆ. ಕೇವಲ 5 ಮಂದಿ ಅಂತರ ಕಾಪಾಡಿಕೊಂಡು ನಡೆಯೋಣ. ಕೊವಿಡ್ ನಿಯಮ ಪಾಲಿಸಿ ನಡೆಯೋಣ. ಐದು ಮಂದಿಯ ತಂಡ ಸಾಲು ಸಾಲಾಗಿ ಅಂತರ ಕಾಪಾಡಿಕೊಂಡು ಹೋಗೋಣ. ಹೀಗೆ ಮಾಡಿದರೆ ಅವರು ನಮ್ಮನ್ನ ತಡೆಯಲಾರರು ಅಂತ ಡಿ ಕೆ ಶಿವಕುಮಾರ್ ಹೇಳುತ್ತಿದ್ದಾರೆ.
ಭಂಡತನದಿಂದ ಹೋರಾಟ ಮಾಡುತ್ತೇನೆ ಅಂದರೆ ಜನ ಒಪ್ಪೋದಿಲ್ಲ; ಗೋವಿಂದ ಕಾರಜೋಳ
ಕಾಂಗ್ರೆಸ್ನವರು ಪಾದಯಾತ್ರೆ ಮೊಟಕುಕೊಳಿಸೋದು ಒಳ್ಳೆಯದು. ಮಾಡೋದೆ ಇದ್ರೆ ಐವತ್ತು ಜನ ಸೇರಿ ಸಾಂಕೇತಿಕವಾಗಿ ಮಾಡೋದಕ್ಕೆ ನಾವು ಯಾವತ್ತೂ ಬೇಡ ಅಂದಿಲ್ಲ. ನಮಗೆ ಹೋರಾಟ ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಜನರಿಗೆ ಯಾರು ಏನು ಮಾಡಿದ್ದಾರೆ ಎನ್ನೋದು ಗೊತ್ತಿದೆ. ಓಟ್ ಬ್ಯಾಂಕ್ ಕಾರಣಕ್ಕಾಗಿ ಕಾಂಗ್ರೆಸ್ ನೀರಾವರಿ ಹೋರಾಟ ಮಾಡುತ್ತಿದೆ. ಇದು ಯಾವತ್ತೂ ಒಳ್ಳೆಯದಲ್ಲ. 2013ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಅಂತ ಪಾದಯಾತ್ರೆ ಮಾಡಿದರು. ನಂತರ ಅಧಿಕಾರಕ್ಕೆ ಬಂದು ಏನೂ ಮಾಡಿಲ್ಲ. ಜನರಿಗೆ ಇವರು ಮೋಸಗಾರರು ಅಂತ ಗೊತ್ತಾಗಿದೆ. ಅದಕ್ಕಾಗಿ ಕರ್ತವ್ಯಲೋಪ ಕೆಲಸ ಮಾಡಿ. ಭಂಡತನದಿಂದ ಹೋರಾಟ ಮಾಡುತ್ತೇನೆ ಅಂದರೆ ಜನ ಒಪ್ಪೋದಿಲ್ಲ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಜನರ ಜೀವ ರಕ್ಷಣೆಗಾಗಿ ಹೋರಾಟ ಮೊಟಕುಗೊಳಿಸೋದು ಒಳ್ಳೆಯದು. ಅಂತ ಸಚಿವ ಗೋವಿಂದ ಕಾರಜೋಳ ಹೇಳಿದರು.
ಪಾದಯಾತ್ರೆ ರದ್ದು ಅಂತ ಆದೇಶ ಮಾಡಿಲ್ಲ ಎಂದ ಗೋವಿಂದ ಕಾರಜೋಳ
ಸರಕಾರದಿಂದ ಪಾದಯಾತ್ರೆ ರದ್ದು ಆದೇಶ ವಿಚಾರಕ್ಕೆ ಸಂಬಂಧಿಸಿ ಸರಕಾರ, ಸಚಿವರಲ್ಲೇ ಗೊಂದಲ ಮೂಡಿದೆ. ಪಾದಯಾತ್ರೆ ರದ್ದು ಅಂತ ಆದೇಶ ಮಾಡಿಲ್ಲ ಅಂತ ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ನಿಯಮಾವಳಿ ಮೀರಿ ಹೆಚ್ಚು ಜನ ಸೇರಿ ಕೊವಿಡ್ ಹರಡೋದಕ್ಕೆ ಕಾರಣ ಆಗುತ್ತಿದ್ದೀರಿ. ಸಾವಿರ ಸಾವಿರ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೀರಿ. ಇದರಿಂದ ಈಗಾಗಲೇ ಕಾಂಗ್ರೆಸ್ ಶಾಸಕರಿಗೆ, ನಾಯಕರಿಗೆ ಕೊವಿಡ್ ಬಂದಿದೆ. ಕಾಂಗ್ರೆಸ್ ನಾಯಕರು ಹೋದ ಶಾಲೆಗಳಲ್ಲಿ ಮಕ್ಕಳಿಗೂ ಕೊವಿಡ್ ಬಂದಿದೆ ಅಂತ ಹೇಳಿದರು.
ಪಾದಯಾತ್ರೆ ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನ ತಡೆದ ಪೋಲಿಸರು
ಪಾದಯಾತ್ರೆಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ತಡೆದಿದ್ದಾರೆ .ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾಗೇಪುರದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಗೆ ಹೊರಟಿದ್ದರು. ಕಾಗೇಪುರ ಗೇಟ್ ಬಳಿಯ ಚೆಕ್ ಪೋಸ್ಟ್ ಬಳಿ ತಡೆದ ಪೋಲಿಸರು ತಡೆದಿದ್ದಾರೆ.
ರಾಮನಗರದತ್ತ ಹೊರಟ ಪೊಲೀಸ್ ವಾಹನಗಳು
ರಾಮನಗರದತ್ತ ಪೊಲೀಸ್ ವಾಹನಗಳನ್ನು ರವಾನಿಸಲಾಗುತ್ತಿದೆ. ರಾಮನಗರ ಕಡೆ ಕೆಎಸ್ಆರ್ಪಿ ಪೊಲೀಸ್ರ ಬಸ್ಗಳನ್ನು ಕಳಿಸಲಾಗಿದೆ.
ಪಾದಯಾತ್ರೆ ಮಾಡದಂತೆ ಅಧಿಕಾರಿಗಳು ನೋಟಿಸ್ ತಂದಿದ್ರು ನಾವು ಅದನ್ನು ಮುಟ್ಟಿಲ್ಲ -ಡಿ.ಕೆ.ಸುರೇಶ್
ನಿಗದಿತ ಕಾರ್ಯಕ್ರಮದಂತೆ ಪಾದಯಾತ್ರೆ ಮುಂದುವರಿಕೆ ಎಂದು ಕನಕಪುರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಪಾದಯಾತ್ರೆ ಮಾಡದಂತೆ ರಾತ್ರಿ 12 ಗಂಟೆಗೆ ಅಧಿಕಾರಿಗಳು ನೋಟಿಸ್ ತಂದಿದ್ದರು. ನಾವು ಆ ನೋಟಿಸ್‌ನ್ನು ಮುಟ್ಟಿಲ್ಲ. ಬೇರೆ ಜಿಲ್ಲೆಗಳಿಂದ ಬರುವವರನ್ನು ತಡೆಯುವ ಪ್ರಯತ್ನವಾಗ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸರ್ಕಾರಕ್ಕೆ ಪ್ರತಿಷ್ಠೆ ಇದೆ. ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡಲಿ. ಕೊರೊನಾ ಹೆಚ್ಚಳ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡ್ತಿದ್ದಾರೆ ಎಂದರು.
ಸಭೆ ಬಳಿಕ ಪಾದಯಾತ್ರೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ -ಸಿದ್ದರಾಮಯ್ಯ
ನನಗೆ ಯಾವ ನೋಟಿಸ್ ಬಂದಿಲ್ಲ. ಈವರೆಗೆ ಯಾಕೆ ನಮ್ಮ ಪಾದಯಾತ್ರೆ ತಡೆದಿಲ್ಲ. ಸಭೆ ಬಳಿಕ ಪಾದಯಾತ್ರೆ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಮನಗರದಲ್ಲಿ ಪಾದಯಾತ್ರೆ ಸಾಗ್ತಿದೆ, ಕುಮಾರಣ್ಣ ಇದನ್ನ ತಡೆದುಕೊಳ್ಳೋಕೆ ಆಗದೇ ಸರ್ಕಾರದ ಕೈ ಜೋಡಿಸಿದ್ದಾರೆ
ರಾಮನಗರದಲ್ಲಿ ಪಾದಯಾತ್ರೆ ಸಾಗ್ತಿದೆ. ಮಂಡ್ಯದಿಂದ ಜನರು ಬರ್ತಿದ್ದಾರೆ. ಕುಮಾರಣ್ಣ ಇದನ್ನ ತಡೆದುಕೊಳ್ಳೋಕೆ ಆಗದೇ ಸರ್ಕಾರದ ಕೈ ಜೋಡಿಸಿ ಈ ರೀತಿ ಮಾಡ್ತಿದ್ದಾರೆ ಎಂದು ನರೇಂದ್ರ ಸ್ವಾಮಿ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧತೆ ತೋರಲಿ -ಶಾಸಕ ಚಲುವರಾಯಸ್ವಾಮಿ
ರಾಮನಗರದ ಕೆಂಗಲ್ ಬಳಿ ಶಾಸಕ ಚಲುವರಾಯಸ್ವಾಮಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧತೆ ತೋರಲಿ. ಸಿಎಂ ಬೊಮ್ಮಾಯಿ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಲಿ. ನಿಗದಿತ ಅವಧಿಯೊಳಗೆ ಮೇಕೆದಾಟು ಯೋಜನೆ ಜಾರಿ ಮಾಡಲಿ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ಮೇಕೆದಾಟು ಯೋಜನೆಗೆ ‘ಸುಪ್ರೀಂಕೋರ್ಟ್’ ತಡೆ ನೀಡಿಲ್ಲ
ಮೇಕೆದಾಟು ಯೋಜನೆಗೆ ‘ಸುಪ್ರೀಂಕೋರ್ಟ್’ ತಡೆ ನೀಡಿಲ್ಲ. ಮೇಕೆದಾಟು ಯೋಜನೆ ವಿಚಾರವಾಗಿ ಎರಡು ಅರ್ಜಿಗಳು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇವೆ. ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿರುವ ಮೂಲ ಅರ್ಜಿ ಮತ್ತು ಎನ್‌ಜಿಟಿ ಆದೇಶ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಇನ್ನೊಂದು ಮೇಲ್ಮನವಿ ಅರ್ಜಿ ಬಾಕಿ ಇದೆ. ನ್ಯಾ.ಖಾನ್ವಿಲ್ಕರ್ ನೇತೃತ್ವದ ಪೀಠ ಜನವರಿ 25ಕ್ಕೆ ಅರ್ಜಿಗಳ ವಿಚಾರಣೆ ನಡೆಸಲಿದೆ.
ರಾಮನಗರಕ್ಕೆ ತೆರಳಲಿರುವ ಮಾಜಿ ಸಿಎಂ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ರಾಮನಗರಕ್ಕೆ ತೆರಳಲಿದ್ದಾರೆ. ರಾಮನಗರದ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ರಾಮನಗರ ಬಸ್ ನಿಲ್ದಾಣ ಬಳಿಯ ಸರ್ಕಲ್ನಲ್ಲಿ ಪಾದಯಾತ್ರೆ ತಡೆಯಲು ತಯಾರಿ
ಪಾದಯಾತ್ರೆ ತಡೆಯಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ. ರಾಮನಗರದಲ್ಲಿ 1,500 ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ರಾಮನಗರ ಬಸ್ ನಿಲ್ದಾಣ ಬಳಿಯ ಸರ್ಕಲ್ನಲ್ಲಿ ಪಾದಯಾತ್ರೆ ತಡೆಯಲು ತಯಾರಿ ನಡೆಸಿಕೊಳ್ಳಲಾಗಿದೆ ಅಂತ ಟಿವಿ9ಗೆ ರಾಮನಗರ ಜಿಲ್ಲಾ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಡಿಕೆ ಶಿವಕುಮಾರ್‌ಗೆ ಆರೋಗ್ಯ ತಪಾಸಣೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಗ್ಯ ತಪಾಸಣೆ ಮಾಡಲಾಗಿದೆ. ನಿವಾಸಕ್ಕೆ ವೈದ್ಯರ ಅಗಮಿಸಿ ಶುಗರ್, ಬಿಪಿ ಪರೀಕ್ಷೆ ಮಾಡಿದ್ದಾರೆ.
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ
ಪಾದಯಾತ್ರೆ ಸಂಬಂಧ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯಲಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆ ಬಳಿಕ ಪಾದಯಾತ್ರೆ ಮುಂದುವರಿಸುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.
ನಮ್ಮದು ದುರ್ಬಲ ಸರ್ಕಾರ ಎಂದು ಒಪ್ಪಿಕೊಳ್ಳುತ್ತೇನೆ; ಯೋಗೇಶ್ವರ್
ಇಂದು ಮಂಡ್ಯದಿಂದ ಬಸ್‌ನಲ್ಲಿ ಜನರನ್ನು ಕರೆಸುತ್ತಿದ್ದಾರೆ. ಸರ್ಕಾರ ಇಂದು ಕಾಂಗ್ರೆಸ್ ಪಾದಯಾತ್ರೆ ತಡೆಯಲೇಬೇಕು. ಇಲ್ಲದಿದ್ದರೆ ನಮ್ಮದು ದುರ್ಬಲ ಸರ್ಕಾರ ಎಂದು ಒಪ್ಪಿಕೊಳ್ಳುತ್ತೇನೆ ಅಂತ ಯೋಗೇಶ್ವರ್ ಸುದ್ದಿಗೋಷ್ಠಿ ಹೇಳಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್‌ರಲ್ಲಿ ಕ್ರಿಮಿನಾಲಜಿ ಇದೆ; ಸಿಪಿ ಯೋಗೇಶ್ವರ್
ಡಿಕೆ ಶಿವಕುಮಾರ್‌ರಲ್ಲಿ ಕ್ರಿಮಿನಾಲಜಿ ಇದೆ. ಪಾದಯಾತ್ರೆಯಿಂದ ಜನರಿಗೆ ಒಳಿತು ಮಾಡುವ ಉದ್ದೇಶವಿಲ್ಲ. ಸಿದ್ದರಾಮಯ್ಯರನ್ನು ವೀಕ್ ಮಾಡಲು ಪಾದಯಾತ್ರೆ ಮಾಡ್ತಿದ್ದಾರೆ. ಇದು ಡಿಕೆ ಶಿವಕುಮಾರ್ ಅವರ ನಾಟಕ ಮಂಡಳಿ ಅಂತ ಸಿಪಿ ಯೋಗೇಶ್ವರ್ ಹೇಳಿದರು.
ಸಿದ್ದರಾಮಯ್ಯ ಬಗ್ಗೆ ನನಗೆ ಗೌರವವಿತ್ತು; ಯೋಗೇಶ್ವರ್
ಸಿದ್ದರಾಮಯ್ಯ ಬಗ್ಗೆ ನನಗೆ ಗೌರವವಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಬಹಳಷ್ಟು ದಿನ ಡಿಕೆಶಿಯನ್ನು ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಬಳಿಕ ಡಿಕೆಶಿ ಪಿತೂರಿಯಿಂದ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಅರೆ ಮನಸ್ಸಿನಿಂದ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸ್ವಲ್ಪ ದೂರ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ, ಹೋಗ್ತಾರೆ. ಡಿಕೆ ಶಿವಕುಮಾರ್ ಉಡಾಫೆ, ಅವರ ನಡವಳಿಕೆ ನನಗೆ ಗೊತ್ತಿದೆ. ಅವರು ಯಾವುದಕ್ಕೂ ಬಗ್ಗುವವರಲ್ಲ. ಡಿಕೆ ಶಿವಕುಮಾರ್‌ಗೆ ದಂಡಂ ದಶಗುಣಂ ಒಂದೇ ದಾರಿ. ಇವರು ಜಾತ್ರೆ ರೀತಿ ಪಾದಯಾತ್ರೆ ಮಾಡುತ್ತಾರೆಂದು ಗೊತ್ತಿರಲಿಲ್ಲ. ಇದು ಡಿಕೆ ಶಿವಕುಮಾರ್ ಅವರ ಡ್ರಾಮಾ ಡ್ಯಾನ್ಸ್ ಅಷ್ಟೆ. ಈ ಪಾದಯಾತ್ರೆಯಲ್ಲಿ ಯಾವುದೇ ಜನಪರ ಕಾಳಜಿ ಇಲ್ಲ ಅಂತ ರಾಮನಗರದಲ್ಲಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪಾದಯಾತ್ರೆಗೆ ಹಣ ಕೊಟ್ಟು ಬಸ್‌ನಲ್ಲಿ ಜನರನ್ನ ಕರೆಸುತ್ತಿದ್ದಾರೆ; ಯೋಗೇಶ್ವರ್
ಪಾದಯಾತ್ರೆಗೆ ಹಣ ಕೊಟ್ಟು ಬಸ್‌ನಲ್ಲಿ ಜನರನ್ನ ಕರೆಸುತ್ತಿದ್ದಾರೆ. ಜನರಿಗೆ ಕೊರೊನಾ ಹರಡುವ ಕೆಲಸವನ್ನು ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ವಿಚಾರ ಸದ್ಯ ಕೋರ್ಟ್‌ನಲ್ಲಿದೆ. ಕೋರ್ಟ್‌ನಲ್ಲಿ ಕ್ಲಿಯರ್ ಆದ ಬಳಿಕ ಯೋಜನೆ ಮಾಡಬಹುದು ಅಂತ ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಜನರಿಗೆ ಅನುಕೂಲವಾಗುವಂಥ ಯಾವುದೇ ಕೆಲಸ ಮಾಡಿಲ್ಲ; ಸಿಪಿ ಯೋಗೇಶ್ವರ್
4 ದಿನದಿಂದ ಡಿಕೆಶಿ, ಅವರ ಪಟಾಲಂನಿಂದ ದಂಡಯಾತ್ರೆ ನಡೆಸುತ್ತಿದ್ದಾರೆ. ಸರ್ಕಾರ ಸೂಕ್ತ ಕ್ರಮಕೈಗೊಂಡಿಲ್ಲವೆಂದು ಹೈಕೋರ್ಟ್ ಈ ಬಗ್ಗೆ ಸರ್ಕಾರದ ಬಳಿ ವರದಿ ಕೇಳಿದೆ. ಕಾಂಗ್ರೆಸ್ ಕೊವಿಡ್ ತೀವ್ರತೆಯನ್ನು ಅರ್ಥ ಮಾಡಿಕೊಂಡಿಲ್ಲ. ಕೊರೊನಾ 3ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಮೇಕೆದಾಟು ವಿಚಾರವಾಗಿ ಡಿ.ಕೆ.ಶಿವಕುಮಾರ್‌ರಿಂದ ನಾಟಕ ನಡೆಯುತ್ತಿದೆ. ಅವರ ಸರ್ಕಾರದಲ್ಲಿ ಜನೋಪಯೋಗಿ ಯೋಜನೆ ರೂಪಿಸಿಲ್ಲ. ಡಿಕೆಶಿ ನೀರಾವರಿ ಸಚಿವರಾಗಿದ್ದಾಗ ಏನೂ ಕೆಲಸ ಮಾಡಿಲ್ಲ. ಜನರಿಗೆ ಅನುಕೂಲವಾಗುವಂಥ ಯಾವುದೇ ಕೆಲಸ ಮಾಡಿಲ್ಲ ಅಂತ ರಾಮನಗರದಲ್ಲಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ಹೇಳಿದರು.
ಕನಕಪುರದ ನಿವಾಸದಲ್ಲಿರುವ ಡಿಕೆ ಬ್ರದರ್ಸ್
ರಾಮನಗರ ಜಿಲ್ಲೆ ಕನಕಪುರದ ನಿವಾಸದಲ್ಲಿರುವ ಡಿಕೆ ಬ್ರದರ್ಸ್ ಇದ್ದಾರೆ. ನಿನ್ನೆ ಪಾದಯಾತ್ರೆ ಮುಗಿಸಿ ಕನಕಪುರದ ನಿವಾಸಕ್ಕೆ ವಾಪಸ್ ಆಗಿದ್ದಾರೆ. ಬೆಳಗ್ಗೆ 9 ಗಂಟೆಗೆ ಸಹೋದರರು ರಾಮನಗರಕ್ಕೆ ತೆರಳಲಿದ್ದಾರೆ.
ಪಾದಯಾತ್ರೆ ತಡೆಗೆ ಸರ್ಕಾರ ದೊಡ್ಡ ಹೈಡ್ರಾಮಾ ಮಾಡುತ್ತಿದೆ; ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆ
ಪಾದಯಾತ್ರೆ ತಡೆಗೆ ಸರ್ಕಾರ ದೊಡ್ಡ ಹೈಡ್ರಾಮಾ ಮಾಡುತ್ತಿದೆ. ತಮ್ಮ ಪಾದಯಾತ್ರೆ ನಿಲುವನ್ನ ಕೋರ್ಟ್‌ಗೆ ಕೊಡುತ್ತೇವೆ. ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆಗೆ ಹೊರಟವರನ್ನ ಪೊಲೀಸರು ತಡೆಯುತ್ತಿದ್ದಾರೆ. ಇಂತಹ ದುರ್ಘಟನೆಯನ್ನ ನಾವು ಎಲ್ಲೂ ನೋಡಿಲ್ಲ. ರಾಜ್ಯ ಸರ್ಕಾರ ತಿಂಗಳೊಳಗೆ ಯೋಜನೆ ಜಾರಿ ಮಾಡಲಿ. ಅದನ್ನ ಬಿಟ್ಟು ಸರ್ಕಾರ ಪಾದಯಾತ್ರೆಯನ್ನ ತಡೆಯುತ್ತಿದೆ. ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆ ನಿಲ್ಲುವುದಿಲ್ಲ. ಜನ ಸೇರುತ್ತಿದ್ದಾರೆ ಇದನ್ನ ರಾಜ್ಯ ಸರ್ಕಾರ ಎದುರಿಸಲಿ ಅಂತ ಮಂಡ್ಯದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಪೊಲೀಸರ ಜೊತೆ ಜಗಳಕ್ಕೆ ಬಿದ್ದ ಕೈ ಕಾರ್ಯಕರ್ತರು
ಪಾದಯಾತ್ರೆಗೆ ತೆರಳುತ್ತಿದ್ದ ಕಾರ್ಯಕರ್ತರನ್ನು ತಡೆದ ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಜಗಳವಾಡಿದ್ದಾರೆ. ಮದ್ದೂರು ಚನ್ನಪಟ್ಟಣ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದೆ.
ಪಾದಯಾತ್ರೆ ನಿಲ್ಲಿಸಲು ಡಿಕೆ ಶಿವಕುಮಾರ್‌ಗೆ ನೋಟಿಸ್
ಪಾದಯಾತ್ರೆ ನಿಲ್ಲಿಸಲು ಡಿಕೆ ಶಿವಕುಮಾರ್‌ಗೆ ರಾಮನಗರ ಎಸಿ, ಡಿವೈಎಸ್ಪಿ ನೋಟಿಸ್ ಜಾರಿ ಮಾಡಿದ್ದಾರೆ. ಮಧ್ಯರಾತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ನೋಟಿಸ್ ನೀಡಲಾಗಿದೆ. ಆದರೆ ನೋಟಿಸ್ ಸ್ವೀಕರಿಸಲು ಡಿಕೆಶಿ ನಿರಾಕರಿಸಿದ್ದಾರೆ. ಹಿಗಾಗಿ ಗೇಟ್ಗೆ ನೋಟಿಸ್ ಅಂಟಿಸಿ ಎಸಿ, ಡಿವೈಎಸ್ಪಿ ವಾಪಸ್ ಬಂದಿದ್ದಾರೆ.
ಪಾದಯಾತ್ರೆಗೆ ತೆರಳಲಿರುವ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಕ್!
ಪಾದಯಾತ್ರೆಗೆ ತೆರಳಲಿರುವ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಕ್ ಎದುರಾಗಿದೆ. ಮಂಡ್ಯ ಜಿಲ್ಲೆಯಿಂದ ತೆರಳಲಿರುವ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಿಗೆ ತಡೆ ಹಿಡಿಯುವ ಸಾಧ್ಯತೆಯಿದೆ. ಇಂದು ಪಾದಯಾತ್ರೆಗೆ ಭಾಗಿಯಾಗಲು ಜಿಲ್ಲೆಯ ಸಾವಿರಾರು ಕಾರ್ಯಕರ್ತರು ತೆರಳಲಿದ್ದಾರೆ. ಮಂಡ್ಯದ ಸಾಂಪ್ರದಾಯಿಕ ಉಡುಗೆ ಪಂಚೆ ಧರಿಸಿ ತರಳಲಿದ್ದಾರೆ, ಕಬ್ಬಿನ ಜೊಲ್ಲೆ ಹಿಡಿದು ಪಾದಯಾತ್ರೆಯಲ್ಲಿ ಭಾಗಿಯಾಗಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಆದರೆ ಅವರು ಭಾಗಿಯಾಗದಂತೆ ತಡೆಯಲು ತಯಾರಿ ನಡೆಸಿಕೊಳ್ಳಲಾಗಿದೆ.
ಪಾದಯಾತ್ರೆ ಮಾಡದಂತೆ ಪೊಲೀಸರಿಂದ ನೋಟಿಸ್
ಪಾದೆಯಾತ್ರೆ ಮಾಡಲು ಮುಂದಾದ್ರೆ ವಶಕ್ಕೆ ಪಡೆಯಲು ಸಿದ್ದತೆ ನಡೆಸಿಕೊಳ್ಳಲಾಗಿದೆ. ಪಾದಯಾತ್ರೆ ಹೊರಡುವ ಮೊದಲು ಪೊಲೀಸರು ಪಾದಯಾತ್ರೆ ಮಾಡದಂತೆ ನೋಟಿಸ್ ನೀಡುವ ಸಾಧ್ಯತೆಯಿದೆ.
ರಾಮನಗರದಲ್ಲಿ ಪೊಲೀಸ್ ಬಿಗಿಬಂದೋಬಸ್ತ್
ಐದನೇ ದಿನದ ಪಾದಯಾತ್ರೆ ತಡೆಯಲು ರಾಮನಗರದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ಪಾದಯಾತ್ರೆ ತಡೆಯೋಕೆ ಸರ್ಕಾರ ಬಿಗ್ ಪ್ಲಾನ್ ಮಾಡಿದೆ. ಸುಮಾರು 1,200 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಬ್ಯಾರಿಕೇಡ್ ಗಳನ್ನ ಅಡ್ಡಲಾಕಿ ತಡೆಯಲು ಸಿದ್ದತೆ ನಡೆಸಿಕೊಳ್ಳಲಾಗಿದೆ. ಪಾದಯಾತ್ರೆ ಯಾವುದೇ ಕಾರಣಕ್ಕೂ ರಾಮನಗರ ದಾಟದಂತೆ ತಡೆಯಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕಾಂಗ್ರೆಸ್ ಪಾದಯಾತ್ರೆಗೆ ಸಾರ್ವಜನಿಕರಿಂದ ವಿರೋಧ
ಕಾಂಗ್ರೆಸ್ ಪಾದಯಾತ್ರೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಪಾದಯಾತ್ರೆ ಉದ್ದೇಶ ಚೆನ್ನಾಗಿದೆ. ಆದರೆ ಈಗಿರುವ ಪರಿಸ್ಥಿತಿ ಸರಿಯಾಗಿಲ್ಲ. ಕೊರೊನಾ ಹೆಚ್ಚುತ್ತಿರುವ ಮಧ್ಯೆ ಕೈ ನಾಯಕರು ಹಠ ಸಾಧಿಸ್ತಿದ್ದಾರೆ. ಪಾದಯಾತ್ರೆಯನ್ನು ಸ್ವಲ್ಪ ದಿನ ಮುಂದೂಡಬಹುದಿತ್ತು. ಪಾದಯಾತ್ರೆಯಲ್ಲಿದ್ದ ಕೆಲವು ನಾಯಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರಿಂದ ಎಷ್ಟು ಜನರಿಗೆ ಹರಡಿರಬಹುದು? ಪಾದಯಾತ್ರೆ ಮುಂದೂಡಿದ್ದಿದ್ದರೆ ನಾವು ಬೆಂಬಲಿಸ್ತಿದ್ವಿ. ಕುಡಿಯುವ ನೀರು ಎಲ್ಲರಿಗೂ ಬೇಕು ನಿಜ. ಆದರೆ ಈಗಿನ ಪಾದಯಾತ್ರೆ ಸಮಯ ಸರಿ ಇಲ್ಲ ಅಂತ ಸಾರ್ವಜನಿಕರು ಹೇಳುತ್ತಿದ್ದಾರೆ.
144 ಸೆಕ್ಷನ್ ಜಾರಿ ನಡುವೆಯೂ ಕಾಂಗ್ರೆಸ್ ಪಾದಯಾತ್ರೆ
144 ಸೆಕ್ಷನ್ ಜಾರಿ ನಡುವೆಯೂ ಕಾಂಗ್ರೆಸ್ ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿ ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ಐವರು ಡಿವೈಎಸ್ಪಿ, 16 ಇನ್ಸ್ಪೆಕ್ಟರ್, 27 ಪಿಎಸ್‌ಐ, 176 ಎಎಸ್ಐ, 800 ಕಾನ್ಸ್‌ಟೇಬಲ್‌ಗಳು, 4 ಡಿಎಆರ್ 8 KSRP ತುಕಡಿ ಸೇರಿ 1,200 ಸಿಬ್ಬಂದಿಯನ್ನು ಆಯೋಜಿಸಲಾಗಿದೆ.
ಕಾಂಗ್ರೆಸ್ ನಾಯಕರ ವಿರುದ್ಧ 4ನೇ ಎಫ್‌ಐಆರ್ ದಾಖಲು
ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ 4ನೇ ಎಫ್‌ಐಆರ್ ದಾಖಲಾಗಿದೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮನಗರ ತಹಶೀಲ್ದಾರ್ ದೂರು ಆಧರಿಸಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಡಿಕೆ ಸುರೇಶ್ ಸೇರಿದಂತೆ 30 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಮನಗರದ ಐಜೂರು ವೃತ್ತದ ಬಳಿ ಹಾಕಿದ್ದ ವೇದಿಕೆ ತೆರವು
ನಿನ್ನೆ ಪಾದಯಾತ್ರೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ ವೇದಿಕೆಯನ್ನು ತೆರವುಗೊಳಿಸಲಾಗಿದೆ. ರಾಮನಗರದ ಐಜೂರು ವೃತ್ತದ ಬಳಿ ವೇದಿಕೆ ಹಾಕಲಾಗಿತ್ತು. ಇಂದು ಐಜೂರು ವೃತ್ತದಿಂದಲೇ ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಆದರೆ ವೃತ್ತದ ಬಳಿ ಹಾಕಿದ್ದ ವೇದಿಕೆಯನ್ನು ತೆರವುಗೊಳಿಸಲಾಗಿದೆ.
ಪಾದಯಾತ್ರೆ ನಡೆಸಿದರೆ ಕಾಂಗ್ರೆಸ್ ನಾಯಕರ ಬಂಧನ ಸಾಧ್ಯತೆ
ಕೊರೊನಾ ನಿಯಮಗಳನ್ನ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು ಪಾದಯಾತ್ರೆ ತಡೆಯಲು ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ. ನಿಯಮ ಮೀರಿ ಮತ್ತೆ ಪಾದಯಾತ್ರೆ ನಡೆಸಿದರೆ ಕಾಂಗ್ರೆಸ್ ನಾಯಕರನ್ನ ಬಂಧಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಾದಯಾತ್ರೆ ತಡೆಯಲು ಪೊಲೀಸರ ಸಿದ್ಧತೆ
ನಿನ್ನೆ ರಾಮನಗರ ಟೌನ್‌ನಲ್ಲಿ 4ನೇ ದಿನದ ಪಾದಯಾತ್ರೆ ಅಂತ್ಯವಾಗಿದೆ. ಕಾಂಗ್ರೆಸ್ ಪಾದಯಾತ್ರೆ ತಡೆಯಲು ಪೊಲೀಸರ ಸಿದ್ಧತೆ ನಡೆಸಿಕೊಂಡಿದ್ದಾರೆ. ಪಾದಯಾತ್ರೆ ನಡೆಸದಂತೆ ಖಾಕಿ ಪಡೆ ಪ್ಲ್ಯಾನ್ ರೂಪಿಸಿದೆ. ಬೇರೆ ಜಿಲ್ಲೆಗಳಿಂದ ಪಾದಯಾತ್ರೆಗೆ ಬರುವವರನ್ನ ತಡೆಯಲು ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ.
ಇಂದು 5ನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ
ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸುತ್ತಿರುವ ಕಾಂಗ್ರೆಸ್ ಪಾದಯಾತ್ರೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ರಾಮನಗರ ಟೌನ್‌ನಿಂದ ಪಾದಯಾತ್ರೆ ಆರಂಭವಾಗುವ ಸಾಧ್ಯತೆ ಇದೆ. ರಾಮನಗರ ತಾಲೂಕಿನ ಬಿಡದಿವರೆಗೆ ಪಾದಯಾತ್ರೆ ತೆರಳುವುದು. ಇಂದು ಒಟ್ಟು 13 ಕಿಲೋಮೀಟರ್ ಪಾದಯಾತ್ರೆಗೆ ನಿರ್ಧಾರ ಮಾಡಲಾಗಿದೆ.
ಜನ ಸೇರೋದು ಬೇಡ ನಾನು, ಸಿದ್ದರಾಮಯ್ಯ ನಡೆಯುತ್ತೇವೆ; ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾದಯಾತ್ರೆ ಕುರಿತು ಚರ್ಚೆ ನಡೆಸಿದ್ದಾರೆ. ಒಬ್ಬನೇ ನಡೆದುಕೊಂಡು ಹೋದ್ರೆ ಏನಾದ್ರು ಸಮಸ್ಯೆ ಆಗುತ್ತಾ? ಅಂತ ಡಿಕೆಶಿ ತಜ್ಞರ ಬಳಿ ಕೇಳಿದ್ದಾರೆ. ಅದಕ್ಕೆ ನೀವು ನಡೆದರೆ ಜನ ಸೇರುತ್ತಾರೆ, ಸಮಸ್ಯೆ ಆಗುತ್ತೆಂದು ತಜ್ಞರು ತಿಳಿಸಿದ್ದಾರೆ. ಅದಕ್ಕೆ ಜನ ಸೇರೋದು ಬೇಡ ನಾನು, ಸಿದ್ದರಾಮಯ್ಯ ನಡೆಯುತ್ತೇವೆ. ಕೋರ್ಟ್ ತಡೆ ನೀಡಿದರೆ ಒಬ್ಬನೇ ನಡೀತೀನಿ ಅಂತ ಡಿಕೆಶಿ ಹೇಳಿದ್ದಾರೆ.
Published On - Jan 13,2022 8:26 AM